ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಕ್ಕೇರಾ: ವಿಭಿನ್ನ ಕಲಿಕಾ ತಂತ್ರಗಳಿಂದ ಗಮನ ಸೆಳೆಯುತ್ತಿರುವ ಪ್ರೌಢಶಾಲೆ

ಮಹಾಂತೇಶ ಸಿ. ಹೊಗರಿ
Published 9 ಫೆಬ್ರುವರಿ 2024, 5:06 IST
Last Updated 9 ಫೆಬ್ರುವರಿ 2024, 5:06 IST
ಅಕ್ಷರ ಗಾತ್ರ

ಕಕ್ಕೇರಾ: ವಿದ್ಯಾರ್ಥಿಗಳಿಗಾಗಿ ರಾತ್ರಿ ಅಧ್ಯಯನ ಕೇಂದ್ರ ಆರಂಭ, ಅಧುನಿಕ ಸೌಲಭ್ಯಗಳ ಸಮರ್ಪಕ ಬಳಕೆ, ಸ್ಮಾರ್ಟ್‌ ಹಲಗೆ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಮನದಟ್ಟುಗೊಳಿಸುವ ವಿಭಿನ್ನ ಕಲಿಕಾ ತಂತ್ರಗಳು, ಗುಣಮಟ್ಟದ ಮೂಲಸೌಲಭ್ಯಗಳು...ಪಟ್ಟಣದ ಪ್ರೌಢಶಾಲೆಯು ಖಾಸಗಿಯವರನ್ನು ಮೀರಿಸುವಂತಿದೆ.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಸದ್ಯ 568ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಕಾಯಂ ಶಿಕ್ಷಕರು 7  ಹಾಗೂ ಅತಿಥಿ ಶಿಕ್ಷಕರು 8 ಇದ್ದಾರೆ. ಈಗಾಗಲೇ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಖಾಸಗಿ ಶಾಲೆಯನ್ನು ತೊರೆದು, ಸರ್ಕಾರಿ ಪ್ರೌಢಶಾಲೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಲಕ್ಷಾಂತರ ಹಣ ಕೊಟ್ಟ ಖಾಸಗಿ ಶಿಕ್ಷಣ ಸಂಸ್ಥೆಗೆ ಮಕ್ಕಳನ್ನು ಸೇರಿಸಿದ್ದೇವು. ಆದರೆ ಸರ್ಕಾರಿ ಪ್ರೌಢಶಾಲೆಯಲ್ಲೇ ಗುಣಮಟ್ಟದ ಶಿಕ್ಷಣ ಸಿಗುತ್ತಿರುವುದು ತಿಳಿಯಿತು. ಹೀಗಾಗಿ ಬೇರೆ ಶಾಲೆಯಿಂದ ಸರ್ಕಾರಿ ಪ್ರೌಢಶಾಲೆಗೆ ಹೆಸರು ನೋಂದಣಿ ಮಾಡಿದ್ದೇವೆ ಎಂದು ಹೆಸರು ಹೇಳಲಿಚ್ಛಿಸದ ಪೋಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಲೆಯಲ್ಲಿ ಎಲ್ಲ ಶಿಕ್ಷಕರೂ ಅತ್ಯಂತ ಶ್ರಮವಹಿಸಿ, ಕಾಳಜಿಯಿಂದ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಮನದಟ್ಟು ಮಾಡುತ್ತಿದ್ದಾರೆ. ರಾತ್ರಿ ಅಧ್ಯಯನ ಕೇಂದ್ರದಲ್ಲೂ ಶಿಕ್ಷಕರು ಲಭ್ಯವಿದ್ದು, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿಯೊಬ್ಬರ ಶ್ರಮವೂ ಬಹಳ ಮುಖ್ಯವಾಗಿದೆ ಎಂದು ಮುಖ್ಯ ಶಿಕ್ಷಕ ಸಂಗನಗೌಡ ದೇವರಡ್ಡಿ ತಿಳಿಸಿದರು.

ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಎಸ್‌ಬಿಐ ಸ್ಪಂದಿಸಿದೆ. ಶಾಲೆಗೆ ಅಂದಾಜು ₹10 ಲಕ್ಷದ ಸಾಮಗ್ರಿಗಳನ್ನು ನೀಡಿದ್ದು, ವಿಶೇಷ ಕಾಳಜಿ ವಹಿಸಿದ ವ್ಯವಸ್ಥಾಪಕ ರಾಮಲಕ್ಷ್ಮಣ ಅವರಿಂದ ಮಕ್ಕಳಿಗೆ ಅನುಕೂಲವಾಗಿದೆ ಎಂದು ಶಿಕ್ಷಕ ಬಸಯ್ಯಸ್ವಾಮಿ ಹೇಳಿದರು.

ರಾತ್ರಿ ಅಧ್ಯಯನ ಕೇಂದ್ರ: ಜಿಲ್ಲೆಯಲ್ಲಿ ಮೊದಲ ಬಾರಿಗೆ ವಿನೂತನ ‘ಬಾಗಿಲು ಮುಚ್ಚದ ರಾತ್ರಿ ಶಾಲೆ’ ಎಂಬ 81 ದಿನಗಳ ರಾತ್ರಿ ಅಧ್ಯಾಯನ ಕೇಂದ್ರವನ್ನು ಆರಂಭಿಸಲಾಗಿದೆ. ವಿದ್ಯಾರ್ಥಿಗಳಿಗೆ ವಸತಿ ಪಾಠ ಶಾಲೆ, ವಿದ್ಯಾರ್ಥಿನಿಯರಿಗೆ ಆನ್‌ಲೈನ್ ತರಗತಿ ಹೇಳಿಕೊಡಲಾಗುವುದು ಎಂದು ಶಿಕ್ಷಕ ಬಸಯ್ಯಸ್ವಾಮಿ ತಿಳಿಸಿದರು.

ಸಂಜೆ 7.30ರಿಂದ 11ರವರೆಗೆ, ಬೆಳಿಗ್ಗೆ 4.30ರವರೆಗೆ 7.30ರವರೆಗೆ, ಯೋಗ, ಧ್ಯಾನ, ವ್ಯಾಯಾಮ ಮಾಡಿಸಲಾಗುತ್ತದೆ. ರಾತ್ರಿ ತರಗತಿಗಳಲ್ಲಿ ಪ್ರತಿ ಶಿಕ್ಷಕರು ಉತ್ತಮವಾಗಿ ಪಾಠ ಹೇಳಿಕೊಡುತ್ತಿದ್ದ, ಫೇಲ್ ಆಗುವಂತಹವರು ಸಹ ರಾತ್ರಿ ಅಧ್ಯಾಯನ ಕೇಂದ್ರಕ್ಕೆ ಬಂದರೆ ಖಂಡಿತ ಪಾಸ್ ಆಗುವಷ್ಟಾದರೂ ಕಲಿಯುತ್ತಾರೆ ಎಂದು ವಿದ್ಯಾರ್ಥಿಗಳಾದ ಅಜಯಕುಮಾರ್, ಹಣಮಂತ ತಿಳಿಸಿದರು.

ಹತ್ತನೇ ತರಗತಿ ವಿದ್ಯಾರ್ಥಿಗಳಲ್ಲಿ ಸಂಪನ್ಮೂಲ ವಿಶೇಷ ಶಿಕ್ಷಕರರನ್ನು ಒಂದು ದಿನದ ಮಟ್ಟಿಗೆ ಕರೆಯಿಸಿ, ‘ಹತ್ತರ ಭಯ, ಹತ್ತಿರ ಬೇಡಾ’ ಎಂಬ ವಿನೂತನ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯ ಹೆಚ್ಚಿಸುವ ಮೂಲಕ ಪಾಠ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.

ಸ್ಮಾರ್ಟ್‌ ಕ್ಲಾಸ್‌ ಮೂಲಕ ಕಲಿಕೆ: ಪ್ರೌಢಶಾಲೆಯಲ್ಲಿ ಸ್ಮಾರ್ಟ್‌ ಕ್ಲಾಸ್‌ ಮೂಲಕ ವಿದ್ಯಾರ್ಥಿಗಳ ಕಲಿಕೆ ನಡೆಯುತ್ತಿದೆ. ಜತೆಗೆ ಕಂಪ್ಯೂಟರ್, ಟಿ.ವಿ, ಪ್ರೊಜೆಕ್ಟರ್‌ಗಳನ್ನು ಕಲಿಕೆಗಾಗಿ ಬಳಸಲಾಗುತ್ತಿದೆ. ಇದರಿಂದ ಮಕ್ಕಳು ವಿಷಯಗಳನ್ನು ಶೀಘ್ರ ಮನದಟ್ಟು ಮಾಡಿಕೊಳ್ಳಲು ಹಾಗೂ ದೀರ್ಘ ಕಾಲದವರೆಗೆ ನೆನಪಿಟ್ಟುಕೊಳ್ಳಲು ಅನುಕೂಲವಾಗುತ್ತದೆ ಎಂದು ಅತಿಥಿ ಶಿಕ್ಷಕ ಸುನಿಲ್, ಶಿವರಾಜ, ಸೋಮಶೇಖರ, ಹರಿಪ್ರಸಾದ, ರಾಜು ತಿಳಿಸಿದರು.

ಪ್ರತಿ ಶನಿವಾರ ರಸಪ್ರಶ್ನೆ ಕಾರ್ಯಕ್ರಮ, ಸಂವಿಧಾನ ಓದು, ಮಕ್ಕಳ ಕನ್ನಡ ಸಾಹಿತ್ಯ ಸಂಘ, ಕನ್ನಡ ಕ್ವಿಜ್ ಕೋಟ್ಯಾಧಿಪತಿ, ರಂಗೋಲಿ ಸ್ಪರ್ಧೆ, ಅದ್ಧೂರಿಯಾಗಿ ಈಚೆಗೆ ಜರುಗಿದ ಕನ್ನಡ ರಾಜ್ಯೋತ್ಸವದಲ್ಲಿ ವಿದ್ಯಾರ್ಥಿಗಳು ದೇಶ ನಾಯಕರ ಛದ್ಮವೇಷ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ದೇಶಾಭಿಮಾನದ ಮಾತುಗಳು ನೋಡುಗರ ಕಣ್ಮನ ಸೆಳೆದವು.

ವಿದ್ಯಾರ್ಥಿಗಳು ಕಬಡ್ಡಿ, ಕೊಕ್ಕೊ, ವಾಲಿಬಾಲ್, ಪ್ರಬಂಧ, ಸಂಗೀತ, ಇನ್ನಿತರ ಚಟುವಟಿಕೆಗಳಲ್ಲೂ ಮುಂದಿದ್ದಾರೆ. ಸಂಗೀತದಲ್ಲಿ ಕುಸುಮಾ ಭೋಯಿ, ಆಶುಭಾಷಣ ಸ್ಪರ್ಧೆಯಲ್ಲಿ ಗಾಯತ್ರಿ ದೇಸಾಯಿ ಅವರು ರಾಜ್ಯ ಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ ಎಂದು ಶಿಕ್ಷಕರಾದ ದೇವಿಂದ್ರಪ್ಪ ಆಲದರ್ತಿ, ಗಣೇಶ ಹೇಳಿದರು.

ಕಕ್ಕೇರಾ ಪಟ್ಟಣದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು
ಕಕ್ಕೇರಾ ಪಟ್ಟಣದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು
ಕಕ್ಕೇರಾ ಪಟ್ಟಣದ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು
ಕಕ್ಕೇರಾ ಪಟ್ಟಣದ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು
ಕಕ್ಕೇರಾ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಧ್ಯರಾತ್ರಿಯಲ್ಲೂ 10ನೇ ತರಗತಿ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವುದು
ಕಕ್ಕೇರಾ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಧ್ಯರಾತ್ರಿಯಲ್ಲೂ 10ನೇ ತರಗತಿ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವುದು
ಹಿರಿಯ ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಅತಿಥಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಜತೆಗೆ ರಾತ್ರಿ ಅಧ್ಯಯನ ಕೇಂದ್ರ ಆರಂಭಿಸಿರುವುದು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ
- ಬಸಯ್ಯ ಸ್ವಾಮಿ ಕನ್ನಡ ಶಿಕ್ಷಕ
ಶಿಕ್ಷಕರು ಅಧುನಿಕ ಸೌಲಭ್ಯಗಳು ಹಾಗೂ ಸಾಧನಗಳನ್ನು ಬಳಸಿಕೊಂಡು ಮಕ್ಕಳಿಗೆ ವಿಷಯಗಳನ್ನು ಮನದಟ್ಟು ಮಾಡಿಕೊಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಕಲಿಕೆ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ
- ದೇವಿಂದ್ರಪ್ಪ ದೇಸಾಯಿ ಎಸ್‌ಡಿಎಂಸಿ ಅಧ್ಯಕ್ಷ
ಶಿಕ್ಷಕರ ಕೊರತೆಯ ಮಧ್ಯೆಯೇ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಶೀಘ್ರವೇ ಕಕ್ಕೇರಾ ಶಾಲೆಗೆ ಭೇಟಿ ನೀಡಿ ಕಲಿಕೆ ಹೊಸ ಪ್ರಯೋಗಗಳನ್ನು ಪರಿಶೀಲಿಸಲಾಗುವುದು
-ಯಲ್ಲಪ್ಪ ಕಾಡ್ಲೂರು ಬಿಇಒ ಸುರಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT