ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಹಿಜಾಬ್‌ ತೆಗೆದು ಪಾಠ ಆಲಿಸಿದ ಕನ್ಯಾ ಪ್ರೌಢಶಾಲೆಯ ವಿದ್ಯಾರ್ಥಿನಿಯರು

Last Updated 15 ಫೆಬ್ರುವರಿ 2022, 4:20 IST
ಅಕ್ಷರ ಗಾತ್ರ

ಯಾದಗಿರಿ: ಸೋಮವಾರ ಜಿಲ್ಲೆಯಲ್ಲಿ ಪ್ರೌಢಶಾಲೆಗಳು ಆರಂಭವಾಗಿದ್ದು, ಉರ್ದು ಶಾಲೆಯಲ್ಲಿ ‍ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ಹಿಜಾಬ್‌, ಕೇಸರಿ ಶಾಲು ವಿವಾದ ಕಾರಣ ಕಳೆದ ವಾರ ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಸೋಮವಾರ ಶಾಲಾ ತರಗತಿ ಆರಂಭವಾಗಿದ್ದು, ಕೆಲವು ಕಡೆ ವಿದ್ಯಾರ್ಥಿನಿಯರ ಸಂಖ್ಯೆ ವಿರಳವಾಗಿತ್ತು.

ನಗರದ ಕನ್ಯಾ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಭೇಟಿ ನೀಡಿ ಪರಿಶೀಲಿಸಿದರು.

ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದ ಹಿನ್ನೆಲೆ ಕಾರಣ ನಗರದ ಉರ್ದು ಶಾಲೆ ಮುಂಭಾಗದಲ್ಲಿ ಪೊಲೀಸ್ ಭದ್ರತೆ ಮಾಡಲಾಗಿತ್ತು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತೆ ಕ್ರಮವಾಗಿ ಸಿಪಿಐ, ಮೂರು ಜನ ಪಿಎಸ್ಐ, ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ, ‘ಹಿಜಾಬ್- ಕೇಸರಿ ಶಾಲು ವಿಚಾರವಾಗಿ ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಅಗತ್ಯ ಎಚ್ಚರಿಕೆ ವಹಿಸಲಾಗಿದೆ. ಈಗಾಗಲೇ ಶಾಲೆ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಹಿಜಾಬ್ ಧರಿಸಿಕೊಂಡ ವಿದ್ಯಾರ್ಥಿಗಳಿಗೆ ಹಿಜಾಬ್ ತೆಗೆಸಲಾಗಿದೆ. ಶಾಲೆಯ ಸಂಸ್ಥೆಯಲ್ಲಿ ಮಕ್ಕಳು ಸಮಾನತೆಯಿಂದ ಬರಬೇಕು. ಸಮವಸ್ತ್ರ ಧರಿಸಬೇಕೆಂದು ಮಾಹಿತಿ ನೀಡಲಾಗಿದೆ’ ಎಂದರು.

‘ಈ ಮೊದಲು ಕಾನೂನು ಕಟ್ಟಳೆ ಇಲ್ಲದ ಕಾರಣ ವಿದ್ಯಾರ್ಥಿನಿಯರು ಎಂದಿನಂತೆ ಹಿಜಾಬ್‌ ಧರಿಸಿಕೊಂಡು ಬಂದಿದ್ದರು. ಹೀಗಾಗಿ ಅವರನ್ನು ಮನವೊಲಿಸಲಾಗಿದೆ. ಶಾಲೆಯಲ್ಲಿ ಹಿಬಾಜ್‌ ತೆಗೆದಿಟ್ಟು, ಮನೆಗೆ ತೆರಳುವಾಗ ಧರಿಸುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ನಗರದ ಸರ್ಕಾರಿ ಉರ್ದು ಶಾಲೆಯಲ್ಲಿ ವಿದ್ಯಾರ್ಥಿಗಳು ಹಿಜಾಬ್, ಟೋಪಿ ಧರಿಸಿಕೊಂಡು ಬಂದಿದ್ದರು. ಈ ವೇಳೆ ಅಧಿಕಾರಿಗಳು ಆಗಮಿಸಿ ತೆಗೆಸಿದರು.

ನಾನು ಮುಸ್ಲಿಂ ವಿದ್ಯಾರ್ಥಿನಿಯಾದರೂ ತರಗತಿಯಲ್ಲಿ ಹಿಜಾಬ್ ಧರಿಸಲ್ಲ. ಸಮವಸ್ತ್ರ ಧರಿಸಿ ಶಾಲೆಗೆ ಬರುತ್ತೇನೆ. ಶಾಲೆಯಲ್ಲಿ ಎಲ್ಲರೂ ಸಮಾನರು. ನನಗೆ ಶಿಕ್ಷಣ ಮುಖ್ಯ
- ನಸ್ರಿನ್, ಸರ್ಕಾರಿ ಕನ್ಯಾ ಪ್ರೌಢ ಶಾಲೆ ವಿದ್ಯಾರ್ಥಿನಿ

ಪಾಲಕರನ್ನು ಕಳುಹಿಸಿ ಹಿಬಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ಸೂಕ್ತ ತಿಳಿವಳಿಕೆ ನೀಡಲಾಗಿದೆ. ಹೈಕೋರ್ಟ್‌ ಆದೇಶ ಪಾಲಿಸಲಾಗುತ್ತಿದೆ. ಜಿಲ್ಲೆಯಲ್ಲಿ ಹಿಬಾಬ್‌, ಕೇಸರಿ ಶಾಲು ವಿವಾದ ನಡೆದಿಲ್ಲ
- ಶಾಂತಗೌಡ ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ

ಪ್ರಚೋದನೆ ಹೇಳಿಕೆ ಕೊಡುವುದು, ವಿದ್ಯಾರ್ಥಿ, ಶಿಕ್ಷಕರಿಗೆ ತೊಂದರೆ ಕೊಟ್ಟರೆ ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ 7 ಜನರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ
- ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT