ಸೋಮವಾರ, ಅಕ್ಟೋಬರ್ 21, 2019
26 °C
ಬಿಜೆಪಿ ಆರೋಪಗಳೆಲ್ಲ ಸುಳ್ಳು: ಜೆಡಿಎಸ್ ಪ್ರತಿಪಾದನೆ

‘ಅನುದಾನ ತಡೆ ಹಿಡಿದಿಲ್ಲ; ಕಡಿತವಾಗಿದೆ’

Published:
Updated:
Prajavani

ಯಾದಗಿರಿ: ‘ಗುರುಮಠಕಲ್ ಕ್ಷೇತ್ರದ ಖಾಸಾ ಮಠಕ್ಕೆ ನೀಡಿದ್ದ ₹1 ಕೋಟಿ ಮತ್ತು ಕೆಕೆಆರ್‌ಡಿಬಿಯ ₹35 ಕೋಟಿಯನ್ನು ಬಿಜೆಪಿ ಸರ್ಕಾರ ಕಡಿತಗೊಳಿಸಿದೆ ಹೊರತು ತಡೆ ಹಿಡಿದಿಲ್ಲ. ಗುರುಮಠಕಲ್ ನಗರದ ಅಭಿವೃದ್ಧಿಗೆ ಬಂದಿದ್ದ ₹4 ಕೋಟಿ ಹಿಂಪಡೆಯಲಾಗಿದೆ’ ಎಂದು ಜೆಡಿಎಸ್‌ ವಕ್ತಾರ ಮಲ್ಲನಗೌಡ ಹಳಿಮನಿ ಕೌಳೂರು ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇತ್ತೀಚೆಗೆ ಬಿಜೆಪಿ ಮುಖಂಡರು ಸುದ್ದಿಗೋಷ್ಠಿಯಲ್ಲಿ ಅನುದಾನ ಕಡಿತವಾಗಿಲ್ಲ. ಹಿಂಪಡೆದಿದ್ದಾರೆ ಎಂದು ಬಿಜೆಪಿ ಸ್ಪಷ್ಟಪಡಿಸಿದ್ದರು. ಇದು ಸುಳ್ಳು’ ಎಂದರು. 

‘ಗುರುಮಠಕಲ್ ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದ ಅನುದಾನವನ್ನು ಬಿಜೆಪಿ ತಡೆಹಿಡಿಯುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ. ಸಿಆರ್‌ಎಫ್ ಅನುದಾನದಲ್ಲಿ ₹130 ಕೋಟಿ ಹಣವನ್ನು ಟೆಂಡರ್‌ ಹಂತದಲ್ಲಿ ತಡೆಹಿಡಿಯಲಾಗಿದೆ’ ಎಂದು ಆರೋಪಿಸಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲೆಗೆ ಆಗಮಿಸಿದ್ದ ವೇಳೆ ಜೆಡಿಎಸ್‌ ವತಿಯಿಂದ ಪ್ರತಿಭಟನೆ ಮಾಡಿದ್ದು ಸತ್ಯ. ಕಂದಕೂರ ಕುಟುಂಬ ಕಳೆದ 30 ವರ್ಷಗಳಿಂದ ಜೆಡಿಎಸ್‌ಗೆ ನಿಷ್ಠರಾಗಿದ್ದರಿಂದ ಹೆಚ್ಚಿನ ಅನುದಾನ ಕ್ಷೇತ್ರಕ್ಕೆ ಹರಿದು ಬಂದಿತ್ತು. ಆದರೆ, ದ್ವೇಷದ ರಾಜಕಾರಣದಿಂದ ಬಿಜೆಪಿಯವರು ಅನುದಾನ ಹಿಂತೆಗೆದುಕೊಳ್ಳುವ ಮೂಲಕ ಕೀಳುಮಟ್ಟಕ್ಕೆ ಇಳಿದಿದ್ದಾರೆ’ ಎಂದು ಕಿಡಿಕಾರಿದರು.

‘ದೇವದುರ್ಗ ಪ್ರವಾಸಿ ಮಂದಿರದಲ್ಲಿ ಯಡಿಯೂರಪ್ಪ ನೀಡಿದ್ದ ಆಫರ್‌ ತಿರಸ್ಕರಿಸಿದ್ದೇ ಈಗಿನ ಅನುದಾನ ಕಡಿತಕ್ಕೆ ಸಾಕ್ಷಿಯಾಗಿದೆ. ಅಂದು ಶರಣಗೌಡ ಕಂದಕೂರ ಅವರನ್ನು ಸಚಿವ ಮತ್ತು ₹50 ಕೋಟಿ ಅನುದಾನ, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಆಮಿಷ ಒಡ್ಡಿದ್ದರು. ಆದರೆ, ಅದನ್ನು ನಿರಾಕರಿಸಿದ್ದರಿಂದ ಈಗ ಈ ರೀತಿ ನಾಟಕವಾಡುತ್ತಿದ್ದಾರೆ’ ಎಂದು ಆಪಾದಿಸಿದಿರು.

ಜೆಡಿಎಸ್‌ ಮುಖಂಡ ಶುಭಾಶ್ಚಂದ್ರ ಕಟಕಟಿ ಹೊನಗೇರಾ ಮಾತನಾಡಿ, ‘ಪರ್ಸೆಂಟೆಜ್‌ ಬಿಜೆಪಿ ಮುಖಂಡ ಸಾಯಬಣ್ಣ ಕುಟುಂಬಕ್ಕೆ ಬರುತ್ತದೆ ಹೊರತು ಕಂದಕೂರ ಕುಟುಂಬಕ್ಕೆ ಬರುವುದಿಲ್ಲ’ ಎಂದು ತಿರುಗೇಟು ನೀಡಿದರು.

‘ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಟೆಂಡರ್‌ ಅನ್ನು ಸ್ಥಳೀಯರಿಗೆ ನೀಡಲಾಗಿದೆ. ಆದರೆ, ಇದನ್ನೇ ತಪ್ಪಾಗಿ ಆರ್ಥೈಸಿಕೊಂಡು ಅಭಿವೃದ್ಧಿಗೆ ಮೀಸಲಾಗಿರುವ ಅನುದಾನವನ್ನು ತಡೆಹಿಡಿರುವುದು ಸರಿಯಲ್ಲ. ತಮ್ಮಂತೆ ತಮ್ಮ ಕ್ಷೇತ್ರಕ್ಕೆ ಬಂದ ಅನುದಾನವನ್ನು ಪರ್ಸೆಂಟೆಜ್‌ ಲೆಕ್ಕದಲ್ಲಿ ಮಾರಿಕೊಂಡಿಲ್ಲ’ ಎಂದು ಗಂಭೀರ ಆರೋಪ ಮಾಡಿದರು.

‘ಜಡ್ಡುಗಟ್ಟಿದ ವ್ಯವಸ್ಥೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ಲಂಚವಿಲ್ಲದೆ ಕೆಲಸಗಳು ಆಗುತ್ತಿಲ್ಲ ಎನ್ನುವ ಕಾರಣಕ್ಕೆ ಅಲ್ಲಿನ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಹೊರತು ಇದನ್ನೇ ದಂಧೆಯಾಗಿ ಮಾಡಿಕೊಂಡಿಲ್ಲ. ಶಾಸಕರ ಪುತ್ರ ಅಧಿಕಾರಿಗಳ ಸಭೆ ನಡೆಸಿಲ್ಲ. ಜನ ಸಂಪರ್ಕ ಕೇಂದ್ರದಲ್ಲಿ ಇರುವುದೇ ತಪ್ಪು ಎಂದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಕೊಂಕಲ್, ಬಳಿಚಕ್ರ, ಸೈದಾಪುರ ಹೋಬಳಿಗಳಲ್ಲಿ ಕೆರೆ ತುಂಬಿಸುವ ಯೋಜನೆಗೆ ಮೀಸಲಾಗಿದ್ದ ₹150 ಕೋಟಿ ಹಣವನ್ನು ತಡೆಹಿಡಿಯಲಾಗಿದ್ದು, ‌ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

‘ಬಿಜೆ‍ಪಿ ರಾಜ್ಯ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ ಅವರು ಶರಣಗೌಡ ಕಂದಕೂರು ವಯಸ್ಸಿಗೆ ತಕ್ಕಂತೆ ಮಾತನಾಡಬೇಕು ಎಂದು ಹೇಳಿದ್ದಾರೆ. ಆದರೆ, ತಾವು ಕಂದಕೂರ ಅವರನ್ನು ಐದು ವರ್ಷ ಕೋರ್ಟ್‌ಗೆ ಅಲೆದಾಡುವಂತೆ ಮಾಡಿದ್ದೀರಿ. ಆಗ ನಿಮಗೆ ವಯಸ್ಸಿನ ಬಗ್ಗೆ ತಿಳಿವಳಿಕೆ ಇದ್ದರಲಿಲ್ಲವೆ’ ಎಂದು ಮುಖಂಡ ಸರಸಪ್ಪ ಕೌಡೆ ಬದ್ದೇಪಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

 ಈ ವೇಳೆ ಜೆಡಿಎಸ್‌ ಮುಖಂಡರಾದ ಶಾಂತಪ್ಪ ಜಾಧವ, ಈಶ್ವರ ಕಂದಕೂರ, ಅನಿಲ್ ಹೆಡಗಿಮುದ್ರ ಇದ್ದರು.

***

ಸ್ವಾರ್ಥ ರಾಜಕಾಣಕ್ಕಾಗಿ ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ. ಬಿಜೆಪಿ ಮುಖಂಡರ ಯೋಗ್ಯತೆ ಎನೆಂದು ಕ್ಷೇತ್ರದ ಜನತೆಗೆ ಗೊತ್ತಿದೆ. ಹೀಗಾಗಿ ಗುರುಮಠಕಲ್‌ ಕ್ಷೇತ್ರದಲ್ಲಿ ತಕ್ಕಪಾಠ ಕಲಿಸಿದ್ದಾರೆ. 

ವಿಶ್ವನಾಥ ಸಿರವಾರ, ಜೆಡಿಎಸ್‌ ನಗರ ಘಟಕದ ಅಧ್ಯಕ್ಷ

 ***

ಬೋಗಸ್‌ ಬಿಲ್ ಸೃಷ್ಟಿ ಮಾಡಿದ್ದರೆ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಅಮ್ಮನವರ ಮೇಲೆ ಪ್ರಮಾಣ ಮಾಡಿ ಹೇಳಲಿ. ನಮ್ಮ ನಾಯಕರನ್ನು ಅಲ್ಲಿಗೆ ಕರೆದುಕೊಂಡು ಬರುತ್ತವೆ. ಅಮ್ಮನವರ ಸನ್ನಿಧಿಯಲ್ಲಿ ಇದು ಸಾಬೀತಾಗಲಿ.

ಶುಭಾಶ್ಚಂದ್ರ, ಜೆಡಿಎಸ್ ಮುಖಂಡ

Post Comments (+)