ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ತಾಲ್ಲೂಕಿನಲ್ಲಿ ಗುಡುಗು ಸಹಿತ ಸುರಿದ ಭಾರಿ ಮಳೆ

ಗೋಡೆ ಕುಸಿದು ಬೈಕ್‌ಗಳು ಜಖಂ, ನಗರಸಭೆ ಚಾವಣಿ ಕುಸಿತ, ಅಲ್ಲಲ್ಲಿ ಧರೆಗುರುಳಿದ ಮರಗಳು
Last Updated 6 ಏಪ್ರಿಲ್ 2021, 4:22 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಸೋಮವಾರ ಸಂಜೆ ಗುಡುಗು, ಸಿಡಿಲು ಸಹಿತ ಮಳೆಯಾಯಿತು.

ಸಂಜೆ 4.30ರ ಸುಮಾರಿಗೆ ಜೋರು ಗಾಳಿ, ಗುಡುಗು ಸಹಿತ ಆರಂಭವಾದ ಮಳೆ 15 ನಿಮಿಷ ಸುರಿಯಿತು. ಗಾಳಿಗೆ ಗಿಡಮರಗಳು ನೆಲಕ್ಕೆ ಉರುಳಿದವು. ಇದರ ಪರಿಣಾಮ ರಸ್ತೆ ಮೇಲೆ ನೀರು ನಿಂತಿತು ಅಲ್ಲದೇ ತಗ್ಗು ಪ್ರದೇಶದ ಮನೆಗಳಲ್ಲಿ ನೀರು ನುಗ್ಗಿತು. ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಯಿತು.

ಗೋಡೆ ಬಿದ್ದು ಬೈಕ್‌ಗಳು ಜಖಂ

ನಗರದ ಸುಭಾಷ ವೃತ್ತದ ಬಳಿ ಉಳ್ಳೆಸೂಗುರ ಕಾಂಪ್ಲೆಕ್ಸ್ ಬಳಿ ನಿರ್ಮಾಣ ಹಂತದ ಗೋಡೆ ಕುಸಿದ ಬಿದ್ದ ಪರಿಣಾಮ 8 ಬೈಕ್‌ಗಳು ಜಖಂಗೊಂಡವು. ಅಲ್ಲೇ ಬದಿಯಲ್ಲಿದ್ದ ತಳ್ಳುಗಾಡಿ, ಹೂ, ಹಣ್ಣು ವ್ಯಾಪಾರಿಗಳೂ ತೊಂದರೆ ಅನುಭವಿಸಿದರು. ಗೋಡೆ ಕುಸಿತದಿಂದ ಸಾಬಮ್ಮ ಗಾಳೆಪ್ಪ ಎಂಬುವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ರಾಯಚೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಸ್ತೆ ಸಂಚಾರ ಬಂದ್‌

ಗಾಳಿ, ಮಳೆಯಿಂದ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಸೀಮಿ ಮಾರಮ್ಮ ದೇವಸ್ಥಾನದ ಬಳಿ ನೀಲಗಿರಿ ಮರ ಉರುಳಿ ಬಿದ್ದು, ವಾಹನ ಸಂಚಾರ ಕೆಲ ಹೊತ್ತು ಸ್ಥಗಿತವಾಗಿತ್ತು. ಗ್ರಾಮಸ್ಥರೇ ಟ್ರ್ಯಾಕ್ಟರ್‌ ಮೂಲಕ ಹಗ್ಗ ಕಟ್ಟಿ ಮರವನ್ನು ಸ್ಥಳಾಂತರ ಮಾಡಿದರು. ನಂತರ ವಾಹನಗಳ ಸಂಚಾರ ಸುಗಮವಾಗಿ ಸಾಗಿತು.

ನಗರದಲ್ಲಿ ಕೆಲ ಗಂಟೆಗಳವರೆಗೆ ವಿದ್ಯುತ್‌ ಕಡಿತಗೊಳಿಸಿದ್ದರಿಂದ ನಿವಾಸಿಗಳು ಪರದಾಡಿದರು.

***

ಸಿಡಿಲು ಬಡಿದು ಆಕಳು ಸಾವು

ಯರಗೋಳ: ಅಲ್ಲಿಪುರ ಗ್ರಾಮದ ರೈತ ನಾಗಪ್ಪ ಎಂಬುವರಿಗೆ ಸೇರಿದ ಆಕಳು ಸಿಡಿಲು ಬಡಿದು ಸಾವನ್ನಪ್ಪಿದೆ. . ಯರಗೋಳ ಗ್ರಾಮದ ರೈತ ಶರಣಪ್ಪ ಕೋಲ್ಕರ್‌ಗೆ ಸೇರಿದ 2 ಎಕರೆ ಹೊಲದಲ್ಲಿ ಬೆಳೆದ ಜೋಳ ಹಾನಿಯಾಗಿದೆ. ಅಲ್ಲಲ್ಲಿ ಗಿಡಮರಗಳು ಉರುಳಿವೆ.

ಮಲಕಪ್ಪನಳ್ಳಿ, ವೆಂಕಟೇಶ್ ನಗರ, ಚಾಮನಳ್ಳಿ, ಗುಲಗುಂಧಿ, ಕ್ಯಾಸಪ್ಪನಳ್ಳಿ, ವಡ್ನಳ್ಳಿ, ಖಾನಳ್ಳಿ, ಅರಿಕೇರಾ ಬಿ. ಬಸವಂತಪುರ, ಹೊನಗೇರಾ, ಕಟ್ಟಿಗೆ ಶಹಾಪುರ, ಬಂದಳ್ಳಿ, ಯಡ್ಡಳ್ಳಿ, ಮುದ್ನಾಳ, ಅಬ್ಬೆತುಮಕೂರು, ಠಾಣಗುಂದಿ, ತಳಕ, ಸಮಣಪುರ, ಮೋಟ್ನಳ್ಳಿ, ಕೋಟಗೇರಾ, ಕಂಚಗಾರಳ್ಳಿ ಗ್ರಾಮಗಳಲ್ಲಿ ಮಳೆಯಾಯಿತು.
***
ಮಳೆಯಿಂದ ಆಪಾರ ಹಾನಿ

ಮಳೆಯಿಂದ ಶೇಂಗಾ ಬೆಳೆಗಾರರಿಗೆ ಅಪಾರ ಹಾನಿಯಾಗಿದೆ. ಸೋಮವಾರ ಮಾರುಕಟ್ಟೆಗೆ ಮಾರಾಟ ಮಾಡಲು ರೈತರು ಶೇಂಗಾದ ಮೂಟೆಗಳನ್ನು ತಂದಿದ್ದರು. ಉತ್ತಮ ಇಳುವರಿ ಬಂದಿದ್ದರಿಂದ ರೈತರು ಖುಷಿಯಾಗಿದ್ದರು. ಆದರೆ, ಮಳೆಯು ಅವರ ನಿರೀಕ್ಷೆಯನ್ನು ಹುಸಿಗೊಳಿಸಿತು.

‘15ಕ್ಕೂ ಹೆಚ್ಚು ಮೂಟೆಗಳಲ್ಲಿ ಶೇಂಗಾ ತಂದಿದ್ದೆವು. ಆದರೆ, ದಿಢೀರ್‌ ಮಳೆ ಎಲ್ಲವನ್ನು ನಾಶ ಪಡಿಸಿತು. ಇನ್ನೇನೂ ಶೇಂಗಾ ಒಂದೆಡೆ ಹಾಕಬೇಕು ಎನ್ನುವಷ್ಟರಲ್ಲಿ ಜೋರಾದ ಗಾಳಿ ಬೀಸಿ, ಮಳೆಯಾಯಿತು. ಶೇಂಗಾ ಚರಂಡಿ ಪಾಲಾಯಿತು’ ಎಂದು ರೈತರು ತಿಳಿಸಿದರು.
***

11 ಶೇಂಗಾ ಚೀಲ ಮಾರಾಟಕ್ಕೆ ತಂದಿದ್ದೆ. ಚರಂಡಿ ಪಕ್ಕದಲ್ಲಿ ಗುಡ್ಡೆಹಾಕಿದ್ದೆ. ಆದರೆ, ಗಾಳಿ, ಮಳೆಯಿಂದ ಶೇಂಗಾ ಚರಂಡಿಗೆ ಹರಿದುಕೊಂಡು ಹೋಗಿದೆ. ದಿಕ್ಕೆ ತೋಚದಂತಾಗಿದೆ

- ಶಿವಶರಣ ಕಂಚಗಾರನಹಳ್ಳಿ, ರೈತ

***

ಬೆಳೆ ಬಂದಾಗ ಖುಷಿಯಾಗಿತ್ತು. ಆದರೆ, ಇಲ್ಲಿ ಮಾರಾಟಕ್ಕೆ ತಂದಾಗ ಈ ರೀತಿ ಮಳೆಗೆ ಆಹುತಿಯಾಗುತ್ತದೆ ಎಂದು ಊಹಿಸಿರಲಿಲ್ಲ. ಸಾಲ ಸೋಲ ಮಾಡಿ ಬೆಳೆದಿದ್ದ ಬೆಳೆ ನೀರಿನಲ್ಲಿ ಕೊಚ್ಚಿಹೋಗಿದೆ

- ಬಸವರಾಜ ಸೇಡಂ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT