ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಾದ್ಯಂತ ಹೋಳಿ ಹಬ್ಬ ಆಚರಣೆ

ಎರಡು ದಿನಗಳ ಕಾಲ ಬಣ್ಣದಲ್ಲಿ ಮಿಂದೆದ್ದ ಚಿಣ್ಣರು, ಯುವಜನತೆ
Published 26 ಮಾರ್ಚ್ 2024, 15:55 IST
Last Updated 26 ಮಾರ್ಚ್ 2024, 15:55 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಹಾಗೂ ಮಂಗಳವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕೆಲವೆಡೆ ಭಾನುವಾರ ರಾತ್ರಿ ಕಾಮನದಹನ ಮಾಡಿದರೆ, ಮತ್ತೊಂದೆಡೆ ಸೋಮವಾರ ರಾತ್ರಿ ಉರುವಲು ಸುಟ್ಟು ಯುವಕರು ಸಂಭ್ರಮಿಸಿದರು. ಮಧ್ಯರಾತ್ರಿವರೆಗೆ ಬೊಬ್ಬೆ ಹೊಡೆಯುತ್ತ ಕಾಮದಹನ ಮಾಡಿದರು.

ಎರಡು ದಿನವೂ ಮಧ್ಯಾಹ್ನ 1 ಗಂಟೆವರೆಗೆ ಬಣ್ಣದೋಕುಳಿಯಲ್ಲಿ ಮಿಂದೆದ್ದ ಯುವ ಸಮೂಹ ನಂತರ ನದಿ, ಕೆರೆಗಳಲ್ಲಿ ಸ್ನಾನ ಮಾಡಿದರು.

ಯುವಕರು, ಮಕ್ಕಳು ತಮ್ಮ ಗ್ರಾಮ, ಬಡಾವಣೆಗಳಲ್ಲಿ ಬಣ್ಣದಾಟವಾಡಿದರೆ ಮಹಿಳೆಯರು ಅಕ್ಕಪಕ್ಕದವರೊಂದಿಗೆ ಸೇರಿ ಪರಸ್ಪರ ಬಣ್ಣ ಬಳಿದುಕೊಂಡು ಸಂಭ್ರಮಿಸಿದರು.

ಯುವಕರು ಗುಂಪುಗೂಡಿ ಮನೆಗೆ ಮನೆಗೆ ಹೋಗಿ ತಮ್ಮ ಸ್ನೇಹಿತರನ್ನು ಬಣ್ಣದಲ್ಲಿ ಮುಳುಗಿಸಿದರು. ಇನ್ನೂ ಕೆಲವರು ತಲೆಗೆ ಮೊಟ್ಟೆಯೊಡೆದು, ಬಟ್ಟೆ ಹರಿದು ಸಂಭ್ರಮಿಸಿದರು. ಅಲ್ಲದೇ ಕಾಮದಹಿಸಿ ಬೂದಿ ಸಂಗ್ರಹಿಸಿ ಹಬ್ಬವನ್ನು ಬಣ್ಣ ಎರೆಚುವ ಮೂಲಕ ಆಚರಿಸಲಾಯಿತು. ಯುವಕ, ಯುವತಿಯರು, ಮಕ್ಕಳು, ಮಹಿಳೆಯರನ್ನೆದೇ ಪರಸ್ಪರ ಬಣ್ಣದಾಟದಲ್ಲಿ ತೊಡಗಿಸಿಕೊಂಡಿರುವ ದೃಶ್ಯ ಸಾಮಾನ್ಯವಾಗಿತ್ತು.

ಮಕ್ಕಳು ಪಿಚಕಾರಿಗಳನ್ನು ಹಿಡಿದು ದೊಡ್ಡವರಿಗೆ ಬಣ್ಣದ ನೀರು ಎರೆಚುವುದು ಕಂಡು ಬಂದಿತು.

ನಗರದ ಪ್ರದೇಶದಲ್ಲಿ ಬೈಕ್‌ಗಳ ಮೂಲಕ ವಿಚಿತ್ರ ಶಬ್ಧ ಮಾಡುತ್ತ ಯುವ ಸಮೂಹ ಸಾಗಿ ಬಣ್ಣ ಎರಚಿ ಬಣ್ಣದ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಪಿಚಕಾರಿ, ಬಾಟಲಿಗಳಲ್ಲಿ ಬಣ್ಣವನ್ನು ತುಂಬಿಕೊಂಡು ರಸ್ತೆಗಿಳಿದ ಮಕ್ಕಳು ಬೈಕ್‌, ಜೀಪು, ಲಾರಿ, ಬಸ್‌ ಅಡ್ಡಗಟ್ಟಿ ಬಣ್ಣ ಹಾಕುತ್ತಿದ್ದರು.

ಭರ್ಜರಿ ವ್ಯಾಪಾರ :


ನಗರದ ವಿವಿಧೆಡೆ ಬಣ್ಣದ ಪ್ಯಾಕೇಟ್‌, ವಿವಿಧ ಆಕಾರದ ಪಿಚಕಾರಿಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಕೆಲವು ಕಡೆ ಕೋಳಿಮೊಟ್ಟೆ ಖರೀದಿಯೂ ಭರ್ಜರಿಯಾಗಿ ನಡೆಯಿತು.

₹50 ರಿಂದ ₹500 ರವರೆಗೆ ಪಿಚಕಾರಿ:

ಮಾರುಕಟ್ಟೆಯಲ್ಲಿ ಸಣ್ಣಮಕ್ಕಳಿಂದ ಹಿಡಿದು ದೊಡ್ಡವರು ತನಕ ಪಿಚಕಾರಿ ಮೂಲಕ ಬಣ್ಣ ಎರಚುವುದು ಸಾಮಾನ್ಯ. ವಿವಿಧ ಗಾತ್ರದ ಅನುಗುಣವಾಗಿ ಪಿಚಕಾರಿಗಳು ₹50ರಿಂದ 500ರ ತನಕ ಬೆಲೆ ಇತ್ತು.

ಯಾದಗಿರಿ ನಗರದ ಕೋಟಗೇರಾ ವಾಡಾದಲ್ಲಿ ಬಣ್ಣ ಎರಚಿಕೊಂಡು ಕುಣಿದು ಸಂಭ್ರಮಿಸಿದ ಯುವಕರು 
ಯಾದಗಿರಿ ನಗರದ ಕೋಟಗೇರಾ ವಾಡಾದಲ್ಲಿ ಬಣ್ಣ ಎರಚಿಕೊಂಡು ಕುಣಿದು ಸಂಭ್ರಮಿಸಿದ ಯುವಕರು 

ಹಲಗೆ ನಾದ:

ಯುವಕರ ಗುಂಪು ಬಡಾವಣೆ ಸಂಚಾರ ಮಾಡಿ ಕೆಲವರಿಂದ ದೇಣಿಗೆ ಸಂಗ್ರಹಿಸಿದರು. ಹಲಗೆ ಶಬ್ದಕ್ಕೆ ಯುವ ಸಮೂಹ ಬಣ್ಣ ಹಚ್ಚಿಕೊಂಡು ನೃತ್ಯ ಮಾಡುತ್ತಿದ್ದರು. ಬೆಳಿಗ್ಗೆಯಿಂದ ಆರಂಭವಾಗಿದ್ದು, ಮಧ್ಯಾಹ್ನವಾದರೂ ಹಲಗೆ ಶಬ್ಧ ಕೇಳಿ ಬರುತ್ತಿತ್ತು.

ಹೋಳಿ ಹಬ್ಬದ ಪ್ರಯುಕ್ತ ಕೆಲ ಶಾಲಾ–ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಇದರಿಂದ ನಗರದ ರಸ್ತೆಗಳು ಬಿಕೋ ಎಂದವು. ಅಂಗಡಿ ಮುಂಗಟ್ಟುಗಳು ಹಬ್ಬದ ಅಂಗವಾಗಿ ಬಂದ್‌ ಮಾಡಲಾಗಿತ್ತು. ಮಧ್ಯಾಹ್ನದ ನಂತರ ಅಲ್ಲಲ್ಲಿ ಅಂಗಡಿ ತೆಗೆಯಲಾಗಿತ್ತು. 

ಗಾಂಧಿ ವೃತ್ತದಲ್ಲಿ ಭರ್ಜರಿ ಹೋಳಿ:

ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗದಲ್ಲಿ ಯುವಕರು ಬಣ್ಣದ ಎರಚಾಟದಲ್ಲಿ  ತೊಡಗಿದ್ದರು
ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗದಲ್ಲಿ ಯುವಕರು ಬಣ್ಣದ ಎರಚಾಟದಲ್ಲಿ  ತೊಡಗಿದ್ದರು

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಹೋಳಿ ಹಬ್ಬದಲ್ಲಿ ಸಾವಿರಾರು ಯುವಕರು ಸೇರಿ ಸಂಭ್ರಮಿಸಿದರು. ಪರಸ್ಪರ ಬಣ್ಣ ಎರೆಚಿ ಡಿ.ಜೆ ಶಬ್ಧಕ್ಕೆ ನೃತ್ಯ ಮಾಡುತ್ತಿದ್ದರು.

ಯಾದಗಿರಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಡಿಜೆ ಧ್ವನಿಗೆ ಯುವಕರು ಹೆಜ್ಜೆ ಹಾಕಿದರು
ಯಾದಗಿರಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಡಿಜೆ ಧ್ವನಿಗೆ ಯುವಕರು ಹೆಜ್ಜೆ ಹಾಕಿದರು

ಬಂಡಿಯಿಂದ ಬಣ್ಣದೋಕುಳಿ

ಯಾದಗಿರಿಯ  9ನೇ ವಾರ್ಡಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿಜೃಂಭಣೆಯಿಂದ ಹೋಳಿ ಹಬ್ಬ ಆಚರಿಸಲಾಯಿತು. ಬಣ್ಣದ ಬಂಡಿಗೆ ನಗರಸಭೆ ಸದಸ್ಯೆ ಪ್ರಭಾವತಿ ಮಾರುತಿ ಕಲಾಲ್ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಂಕರ್ ಗೋಶಿ ವೆಂಕಪ್ಪ ಗೋಶಿ ಮಾಹದೇವಪ್ಪ ಗಣಪುರ ಭೀಮರಾಯ ಬಾವೂರ ಸಾಬಣ್ಣ ಬಾವೂರ ಸಿದ್ದಯ್ಯ ಪೂಜಾರಿ ಸಾಬಣ್ಣ ಹತ್ತಿಕುಣಿ ಲಕ್ಷ್ಮಿಕಾಂತ್ ಬಾವೂರ ಮಲ್ಲು ತಾತಾ ಅಂಬಿಗೇರ ಅಂಬರೀಷ್ ಹುಬ್ಬಳ್ಳಿ ಸಾಬಣ್ಣ ಅಂಬಿಗೇರ ಸೋಮಲಿಂಗಪ್ಪ ಜಲಾಲ್ ಹನುಮಂತ ಚಟ್ನಳ್ಳಿ ಮಾರುತಿ ಕಲಾಲ್ ಅನೇಕರು ಭಾಗವಹಿಸಿದ್ದರು.

ಯಾದಗಿರಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಬಣ್ಣ ಹಾಕುತ್ತ ನಡೆದ ಓಕುಳಿ ಬಂಡಿ
ಯಾದಗಿರಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಬಣ್ಣ ಹಾಕುತ್ತ ನಡೆದ ಓಕುಳಿ ಬಂಡಿ

ಶರಣ ನಗರದಲ್ಲಿ ಕಾಮ ದಹನ

ಯಾದಗಿರಿ: ಹೋಳಿ ಹಬ್ಬದ ಹಿನ್ನಲೆಯಲ್ಲಿ ಸೋಮವಾರ ರಾತ್ರಿ ಶರಣ ನಗರದ ಶಹಾಪುರ ಪೇಟನಲ್ಲಿ ಕಾಮದಹನ ನೆರವೇರಿಸಲಾಯಿತು. ಸುಮಾರು 6 ದಶಕಗಳಿಂದ ಗುಂಡು ಕಲಬುರಗಿ ಅವರ ಮನೆಯ ಗದ್ದುಗೆಯಿಂದ ಕಾಮಣ್ಣನ ಮೂರ್ತಿಯನ್ನು ಅದ್ದೂರಿಯಾಗಿ ಶೃಂಗರಿಸಿ ಚಕ್ರಕಟ್ಟಾ ಗಾಂಧಿ ವೃತ್ತ ಮಾರ್ಗವಾಗಿ ಪುನಃ ಕಾಮ ದಹನದ ಸ್ಥಳದ ವರೆಗೆ ಅದ್ದೂರಿ ಮೆರವಣಿಗೆ ಆಗಮಿಸಿತು.ನಂತರ ಕಾಮಣ್ಣನ ಮೂರ್ತಿಗೆ ಸೊಪ್ಪಿ‌ಮಠ ಚನ್ನಾವೀರ ಸ್ವಾಮೀಜಿ ಹಾಗೂ ಚನ್ನಯ್ಯ ಸ್ವಾಮಿ ಅವರು ವಿಶೇಷ ಪೂಜೆ ಸಲ್ಲಿಸಿದರು. ಯುವಕರು ಹಿರಿಯರು ಮಹಿಳೆಯರು ಒಗ್ಗೂಡಿ ಕಾಮನ ಪ್ರತಿರೂಪ ರಚಿಸಿ ಬೆಂಕಿ ಹಚ್ಚಿ ಸಂಭ್ರಮಿಸಿದರು. ಈ‌ ಸಂದರ್ಭದಲ್ಲಿ ಹಿರಿಯರಾದ ಅಯ್ಯಣ್ಣ ಹುಂಡೆಕಾರ್ ಇಂದೂಧರ್ ಸಿನ್ನೂರ್ ಗುರು ಬಸಪ್ಪ ಗುಂಡಳ್ಳಿ ಶೇಖರ ಅರಳಿ ಮಲ್ಲಣ್ಣ ತಂಗಡಗಿ ಸಿದ್ದಣ್ಣ ಬಾಡದ್ ಈರಣ್ಣ ನಾರಾಯಣಪೇಟ ಮಹೇಶ ಕಂದಕೂರ ಚಂದ್ರಶೇಖರ ನೆಲೋಗಿ ಶಿವು ಬಾಗಲಕೋಟ ಶಿವ ಕುಮಾರ್ ಸಿನ್ನೂರ ಸೋಮಶೇಖರ್ ಅರುಣಿ ಶರಣು ಪುಸಪುಲ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT