ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ರಕ್ಷಣೆಯ ಪಾಠ ಹೇಳುವ ‘ಹುಡೇವು’

ಜಿಲ್ಲೆಯ ವಿವಿಧೆಡೆ ವೀಕ್ಷಣಾ ಗೋಪುರ, ಸಂದೇಶ ರವಾನಿಸಲು ಬಳಸುತ್ತಿದ್ದ ಪಾಳೆಗಾರರು
Last Updated 3 ಜುಲೈ 2021, 19:31 IST
ಅಕ್ಷರ ಗಾತ್ರ

ಯಾದಗಿರಿ: ರಾಜ ಮಹಾರಾಜರ ಕಾಲದಲ್ಲಿ ಗ್ರಾಮದ ರಕ್ಷಣಾ ಕೋಟೆಯಾಗಿ ನಿರ್ಮಿಸಿರುವ ಹುಡೇವು ಈಗ ಅವಸಾನದ ಅಂಚಿಗೆ ತಲುಪಿವೆ.

ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಹುಡೇವು ಕಾಣಸಿಗುತ್ತವೆ. ಈಗ ಎಲ್ಲ ಕಡೆ ಹಾಳು ಬಿದ್ದು, ಕೆಲ ಕಡೆ ಮಾತ್ರ ಗಟ್ಟಿಮುಟ್ಟಾಗಿವೆ. ಇನ್ನೂ ಹಲವು ಗ್ರಾಮಗಳಲ್ಲಿ ಕಲ್ಲುಗಳು ಬಿದ್ದು, ಕುರುಹು ಇಲ್ಲಂತಾಗಿವೆ.

ಜಿಲ್ಲೆಯ ವಡಗೇರಾ ತಾಲ್ಲೂಕಿನ ತೇಕರಾಳ ಗ್ರಾಮದ ಗುಡ್ಡದ ಮೇಲೆ ಹುಡೇವು ನಿರ್ಮಾಣ ಮಾಡಲಾಗಿದ್ದು, ಈಗ ಅಲ್ಲಿ ದೊಡ್ಡ ಗಾತ್ರದ ಕಲ್ಲುಗಳು ಮಾತ್ರ ಇವೆ. ಬಹುತೇಕ ನಾಶವಾಗಿದೆ.

ಯಾದಗಿರಿ ನಗರದ ಕೋಟೆ, ಗಲಸರಂ, ಕಿಲ್ಲನಕೇರಾ, ಕೂಡ್ಲೂರು ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳ ಗುಡ್ಡದ ಮೇಲೆ ಹುಡೇವು ಇದ್ದು, ಪಾಳು ಬಿದ್ದಿವೆ.

‘ಆಯಾ ಗ್ರಾಮದ ಆಡುಭಾಷೆಗಳಲ್ಲಿ ಇವುಗಳಿಗೆ ಹುಡೇವು, ಹುಡ್ಯಾ, ಹುಡಾ, ವುಡೆ ಎಂಬ ಹೆಸರಿದೆ. ಶತಮಾನಗಳ ಹಿಂದೆ ಪಾಳೆಗಾರರು, ನಿಜಾಮರ ಆಳ್ವಿಕೆ ಅವಧಿಯಲ್ಲಿ ನಿರ್ಮಿಸಲ್ಪಟ್ಟ ಹುಡೆಗಳು ರಕ್ಷಣಾ ಕೋಟೆಗಳು ಆಗಿದ್ದವು. ಇವುಗಳ ಮೂಲಕ ತಮ್ಮ ಗ್ರಾಮದಲ್ಲಿನ ಚಟುವಟಿಕೆಗಳನ್ನು ವೀಕ್ಷಿಸುತ್ತಿದ್ದರು’ ಎನ್ನುತ್ತಾರೆ ಇತಿಹಾಸ ಸಂಶೋಧಕ ಡಾ.ಭೀಮರಾಯ ಲಿಂಗೇರಿ.

‘30ರಿಂದ 50 ಮನೆಗಳು ಇದ್ದ ಗ್ರಾಮದಲ್ಲಿಯೂ ಹುಡೇವು ನಿರ್ಮಿಸಿಕೊಳ್ಳಲಾಗಿದೆ. ಆಹಾರ ಧಾನ್ಯ, ಗ್ರಾಮದ ಸೀಮೆ ರಕ್ಷಿಸಲು ಹುಡೇವು ಸಹಾಯಕವಾಗಿತ್ತು. ಹುಡೇವು ಕಟ್ಟಡದ ಅಲ್ಲಲ್ಲಿ ರಂಧ್ರ ಮಾಡಿ ಅಲ್ಲಿಂದಲೇ ಭರ್ಚಿ ಮೂಲಕ ಶತ್ರುಗಳನ್ನು ತಿವಿಯುತ್ತಿದ್ದರು. ಈ ಮೂಲಕ ಶತ್ರುಗಳು ತಮ್ಮ ಊರಿಗೆ ಬರದಂತೆ ಮಾಡುತ್ತಿದ್ದರು’ ಎನ್ನುತ್ತಾರೆ ಅವರು.

ಶೌಚ ಸ್ಥಳವಾಗಿ ಬಳಕೆ: ವಡಗೇರಾ ತಾಲ್ಲೂಕಿನ ತೇಕರಾಳ ಗ್ರಾಮದ ಪಕ್ಕದಲ್ಲಿರುವ ಹುಡೇವು ಈಗ ಶೌಚ ಸ್ಥಳವಾಗಿ ಮಾರ್ಪಟ್ಟಿದೆ. ಚಿಕ್ಕಮಕ್ಕಳು, ವೃದ್ಧರು ಶೌಚಕ್ಕೆ ಬಳಸುವುದು ಸಾಮಾನ್ಯವಾಗಿದೆ. ಗತ ಇತಿಹಾಸ ಸಾರುವ ಹುಡೇವುಗಳ ಬಗ್ಗೆ ಮುಂದಿನ ಪೀಳಿಗೆಯ ಮಕ್ಕಳಿಗೆ ತಿಳಿಸಲು ಅವುಗಳನ್ನು ರಕ್ಷಿಸುವುದು ಅಗತ್ಯವಾಗಿದೆ.

ಹಿಂದಿನ ಕಾಲದಲ್ಲಿ ಗುಡ್ಡದ ಮೇಲೆ ಹುಡೇವು ನಿರ್ಮಿಸಲಾಗಿದೆ. ಗಾಳಿ, ಮಳೆಗೆ ಕಲ್ಲುಗಳು ಉದುರಿ ಬಿದ್ದಿವೆ. ಹೆಚ್ಚಿನ ಜನರಿಗೆ ಇದರ ಅರಿವಿಲ್ಲ ಎನ್ನುತ್ತಾರೆ ತೇಕರಾಳ ಗ್ರಾಮಸ್ಥ ಶರಣಬಸವ
ಪೂಜಾರಿ.

ಗುಡ್ಡೆದೇವರು ವೀರಗಲ್ಲು
ಯಾದಗಿರಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ವೀರಗಲ್ಲುಗಳು ಇದ್ದು, ಇವು ಹಿಂದಿನ ಕಾಲದ ಜನರ ಶಕ್ತಿ, ಶೌರ್ಯವನ್ನು ಬಿಂಬಿಸುತ್ತಿವೆ. ಇವುಗಳನ್ನು ಜನರು ಗುಡ್ಡೆದೇವರು ಎಂದು ಎಣ್ಣೆ ಹಾಕಿ ಪೂಜೆ ಸಲ್ಲಿಸುತ್ತಿದ್ದಾರೆ.

ತೇಕರಾಳ ಗ್ರಾಮದ ಹುಡೇವು ಮುಂಭಾಗದಲ್ಲಿ ವೀರಗಲ್ಲು ಇದೆ. ತಲೆಗೆ ಕಿರೀಟ, ಸೊಂಟ ಪಟ್ಟಿ, ಕಿವಿಯೋಲೆ, ಕಾಲು ಖಡಗ, ಬಲಗೈಯಲ್ಲಿ ಕತ್ತಿ, ಎಡಗೈಯಲ್ಲಿ ಡಾಲು ಹಿಡಿದು ನಿಂತಿರುವ ವೀರಗಲ್ಲು ಕಾಣಸಿಗುತ್ತದೆ.

‘ಗುಡ್ಡೆದೇವರು ಅಥವಾ ವೀರಗಲ್ಲು ಮನೆತನದವರು ಒಂದೇ ಮನೆಯಲ್ಲಿ ಇಬ್ಬರ ಮದುವೆಗಳನ್ನು ಒಂದೇ ಬಾರಿ ಮಾಡುವಂತಿಲ್ಲ. ಮಾಡಿದರೆ ಒಬ್ಬರಿಗೆ ಮಕ್ಕಳಾಗುತ್ತವೆ. ಮತ್ತೊಬ್ಬರಿಗೆ ಆಗುವುದಿಲ್ಲ ಎನ್ನುವ ನಂಬಿಕೆ ಇದೆ. ಹೀಗಾಗಿ ನಾಲ್ಕು ಜನ ಅಣ್ಣತಮ್ಮಂದಿರು ಇದ್ದವರು ಒಂದೇ ಬಾರಿ ವಿವಾಹ ಮಾಡುವುದಿಲ್ಲ’ ಎಂದು ತೇಕರಾಳ ಗ್ರಾಮಸ್ಥ ಸಾಬಣ್ಣ ಮಡಿವಾಳ ಹೇಳುತ್ತಾರೆ.

***
ಗ್ರಾಮದಲ್ಲಿ ಹಿಂದೆ ಸಂದೇಶ ನೀಡಲು ಹುಡೇವು ಬಳಕೆ ಮಾಡುತ್ತಿದ್ದರು. ಈಗ ಎಲ್ಲ ನಾಶವಾಗಿದೆ. ದೊಡ್ಡ ಕಲ್ಲುಗಳು ಮಾತ್ರ ಉಳಿದುಕೊಂಡಿವೆ.
-ದ್ಯಾವಪ್ಪ ಮಳ್ಳಳ್ಳಿ ತೇಕರಾಳ ಗ್ರಾಮಸ್ಥ

***

ಹಿಂದಿನ ಕಾಲದಲ್ಲಿ ಗುಡ್ಡದ ಮೇಲೆ ಹುಡೇವು ನಿರ್ಮಿಸಲಾಗಿದೆ. ಗಾಳಿ, ಮಳೆಗೆ ಕಲ್ಲುಗಳು ಉದುರಿ ಬಿದ್ದಿವೆ. ಹೆಚ್ಚಿನ ಜನರಿಗೆ ಇದರ ಅರಿವಿಲ್ಲ.
-ಶರಣಬಸವ ಪೂಜಾರಿ, ತೇಕರಾಳ ಗ್ರಾಮಸ್ಥ

***

ಹಿಂದಿನ ಕಾಲದಲ್ಲಿ ಆಯಾ ಗ್ರಾಮಗಳ ರಕ್ಷಣೆಗಾಗಿ ವಿವಿಧ ಸಮುದಾಯದ ಜನರನ್ನು ನೇಮಿಸಿಕೊಳ್ಳುವಂತೆ ಹುಡೇವು ನಿರ್ಮಿಸಲಾಗುತ್ತಿತ್ತು.
-ಡಾ.ಭೀಮರಾಯ ಲಿಂಗೇರಿ, ಇತಿಹಾಸ ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT