ಶನಿವಾರ, ಸೆಪ್ಟೆಂಬರ್ 19, 2020
21 °C
ಹಳೆ ವಿದ್ಯಾರ್ಥಿಗಳ ಬಳಗದಿಂದ ಗುರುವಂದನಾ ಕಾರ್ಯಕ್ರಮ

‘ಶಿಕ್ಷಕರನ್ನು ಕಾಣುವ ಮನೋಭಾವ ಬದಲಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಜಾಗತೀಕರಣದ ಇಂದಿನ ದಿನದಲ್ಲಿ ಶಿಕ್ಷಣದ ವ್ಯವಸ್ಥೆ ಬದಲಾಗುತ್ತಿದ್ದು, ವಿದ್ಯಾರ್ಥಿಗಳು ಶಿಕ್ಷಕರನ್ನು ಕಾಣುವ ಮನೋಭಾವ ಬದಲಾಗ ತೊಡಗಿದೆ’ ಎಂದು ಗುರುಮಠಕಲ್ ಖಾಸಾ ಮಠದ ಶ್ರೀಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಅಭಿಪ್ರಾಯಿಸಿದರು.

ನಗರದ ಚಂದ್ರಶೇಖರ ವಿದ್ಯಾ ಸಂಸ್ಥೆಯ ನ್ಯೂ ಕನ್ನಡ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಬಳಗದಿಂದ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹರ ಮುನಿದರೆ ಗುರು ಕಾಯುವ ಎಂಬ ಶರಣರ ವಾಣಿಯಂತೆ ಗುರುವಿನ ಋಣ ಎಂದಿಗೂ ತೀರಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಗುರುಗಳನ್ನು ಭಕ್ತಿಯಿಂದ ಗೌರವಿಸುವ ವಾತಾವರಣ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಶಿಕ್ಷಣ ಎಂಬುದು ನಿರಂತರವಾಗಿ ಹರಿಯುವ ಝರಿ ಇದ್ದಂತೆ. ಜ್ಞಾನಕ್ಕೆ ಬಡವ, ಶ್ರೀಮಂತ ಎಂಬ ಬೇಧವಿಲ್ಲ. ಬಾಲ್ಯಾವಸ್ಥೆಯಲ್ಲಿದ್ದಾಗ ನಾವೆಲ್ಲರೂ ಕೂಡಿ ಆಟವಾಡಿ ಶಿಕ್ಷಣ ಪಡೆಯುತ್ತೇವೆ. ಆದರೆ, ದೊಡ್ಡವರಾಗುತ್ತಿದ್ದಂತೆ ನಾನು ಶ್ರೀಮಂತ, ನೀನು ಬಡವ ಎಂಬ ಭಾವನೆ ಮೂಡುತ್ತದೆ. ಜ್ಞಾನ ಪಡೆದುಕೊಳ್ಳುವ ನಾವುಗಳು ಎಲ್ಲರನ್ನೂ ಒಂದೇ ರೀತಿಯಿಂದ ಕಾಣುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಶಿಕ್ಷಣ ಪಡೆದಿದ್ದಕ್ಕೆ ಸಾರ್ಥಕವಾಗುತ್ತದೆ’ ಎಂದರು.

ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮಪ್ಪಗೌಡ ಚೇಗುಂಟಾ ಮಾತನಾಡಿ, ‘ಚಂದ್ರಶೇಖರ ವಿದ್ಯಾಸಂಸ್ಥೆಯು ಸಾವಿರಾರು ವಿದ್ಯಾರ್ಥಿಗಳ ಜ್ಞಾನದಾಹ ತೀರಿಸುತ್ತಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಒಂದು ಶಿಕ್ಷಣ ಸಂಸ್ಥೆ ಕಟ್ಟಬೇಕಾದರೆ ಅದರ ಹಿಂದೆ ನಾನಾ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಸಂಸ್ಥೆಯಿಂದ ಅಕ್ಷರ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದಾಗ ಸಂಸ್ಥೆ ಕಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ’ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಚಂದ್ರಕಾಂತ ಲೇವಡಿ, ನಿವೃತ್ತ ಶಿಕ್ಷಣಾಧಿಕಾರಿ ಈಶ್ವರಪ್ಪ, ರೈಲ್ವೆ ಇಲಾಖೆ ನಿವೃತ್ತ ಅಧಿಕಾರಿ ಶ್ರೀರಂಗ ಜಾಧವ್ ಇದ್ದರು.

ಚಂದ್ರಶೇಖರ ಆವಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಿಂದ್ರ ಮಹಾಮನಿ ಸ್ವಾಗತಿಸಿದರು. ಗಿರಿಧರ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು