ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋರನಹಳ್ಳಿ | ಧಾರ್ಮಿಕ ಭಾವನೆಗೆ ಧಕ್ಕೆ; ಯುವಕನ ಬಂಧನ

ದೋರನಹಳ್ಳಿ ಗ್ರಾಮದಲ್ಲಿ ಮುಂದುವರಿದ ಉದ್ವಿಗ್ನ ಸ್ಥಿತಿ, ಪೊಲೀಸ್ ಬಿಗಿ ಬಂದೋಬಸ್ತ್
Last Updated 14 ಮಾರ್ಚ್ 2021, 2:48 IST
ಅಕ್ಷರ ಗಾತ್ರ

ದೋರನಹಳ್ಳಿ (ಶಹಾಪುರ): ಶಿವಲಿಂಗಕ್ಕೆ ಅಪಮಾನಿಸಿದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಶಹಾಪುರ ಠಾಣೆಯ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಮಲ್ಲು ರಡ್ಡಿ (18) ಬಂಧಿತ ಯುವಕ.

ಶ್ರೀರಾಮಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ಭೀಮರಾಯ ಎಂಬುವವರು ಶುಕ್ರವಾರ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದರು.

ಕರ್ತವ್ಯಕ್ಕೆ ಅಡ್ಡಿ; ದೂರು ದಾಖಲು: ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಮಾಡುತ್ತಿರುವಾಗ ಗ್ರಾಮದ ಕೆಲ ಕಿಡಗೇಡಿಗಳು ಸರ್ಕಾರಿ ಆಸ್ತಿಯನ್ನು ನಷ್ಟ ಮಾಡುವುದರ ಜೊತೆಗೆ ಕಲ್ಲು ತೂರಾಟ ಮಾಡಿ ಸಾರ್ವಜನಿಕ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಶಹಾಪುರ ಠಾಣೆಯ ಪಿಎಸ್ಐ ಚಂದ್ರಕಾಂತ ಮೆಕಾಲೆ ದೂರು ದಾಖಲಿಸಿದ್ದಾರೆ. ಸದರಿ ಘಟನೆಯಲ್ಲಿ 20ರಿಂದ 25 ಜನ ಇದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ರಥೋತ್ಸವ ರದ್ದು: ಗ್ರಾಮದ ಮಹಾಂತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ರಥೋತ್ಸವ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.

ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತಹಶೀಲ್ದಾರ್ ಜಗನಾಥರಡ್ಡಿ ಅವರು ನಿಷೇಧಾಜ್ಞೆ ಜಾರಿಯಲ್ಲಿಗೊಳಿಸಿದ್ದರಿಂದ ರಥೋತ್ಸವ ಕಾರ್ಯಕ್ರಮಕ್ಕೆ ಭಕ್ತರು ಬರಬಾರದು ಎಂದು ಶಹಾಪುರ ಠಾಣೆಯ ಪೊಲೀಸರು ಶನಿವಾರ ಗ್ರಾಮದಲ್ಲಿ ಧ್ವನಿವರ್ಧಕದ ಮೂಲಕ ಡಂಗೂರ ಸಾರಿ ಜಾಗೃತಿ ಮೂಡಿಸಿದರು. ಅಲ್ಲದೆ ಜಾತ್ರೆಯ ಅಂಗವಾಗಿ ಮಠದ ಸುತ್ತಮುತ್ತಲು ಹಾಕಿದ್ದ ದಿನಸಿ ಅಂಗಡಿ ಹಾಗೂ ಹೊಟೇಲ್ ತೆರವಗೊಳಿಸಲಾಗಿದೆ .

ಜಾನುವಾರುಗಳ ಜಾತ್ರೆಯೂ ರದ್ದು: ನಿಷೇಧಾಜ್ಞೆ ಜಾರಿಯಲ್ಲಿ ಇರುವುದರಿಂದ ಗ್ರಾಮೀಣ ಪ್ರದೇಶದ ರೈತರು ಹಾಗೂ ಜಾನುವಾರುಗಳನ್ನು ಮಾರಾಟ ಹಾಗೂ ಖರೀದಿಗೆ ಆಗಮಿಸಬಾರದು. ಜಾನುವಾರುಗಳ ಜಾತ್ರೆಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ರದ್ದುಪಡಿಸಲಾಗಿದೆ ಎಂದು ಹಯ್ಯಾಳ ಗ್ರಾಮದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ಡಂಗೂರ ಸಾರಿ ಜಾಗೃತಿ ಮೂಡಿಸಿದರು.

ಬೂದಿ ಮುಚ್ಚಿದ ಕೆಂಡ: ‘ಗ್ರಾಮದಲ್ಲಿ ಸದ್ಯಕ್ಕೆ ಶಾಂತಿ ಇದೆ. ಆದರೆ ಯಾವ ಸಂದರ್ಭದಲ್ಲಿ ಏನಾಗುತ್ತದೆ ಎಂಬ ಆತಂಕ ನಮ್ಮನ್ನು ಕಾಡುತ್ತಲಿದೆ. ಕೆಳವರ್ಗ ಹಾಗೂ ಮೇಲ್ಜಾತಿ ಎಂಬ ಹಣೆಪಟ್ಟಿಯನ್ನು ಕೆಲ ವ್ಯಕ್ತಿಗಳು ಅಂಟಿಸಿದ್ದಾರೆ. ಗ್ರಾಮದಲ್ಲಿ ತಕ್ಷಣ ಶಾಂತಿಸಭೆಯನ್ನು ಕರೆದು ಪರಿಸ್ಥಿತಿಯನ್ನು ತಿಳಿಗೊಳಿಸಬೇಕು. ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಇದೆ’ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT