ಗುರುವಾರ , ಏಪ್ರಿಲ್ 15, 2021
23 °C
ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎನ್.ಕೃಷ್ಣಮೂರ್ತಿ ಸೂಚನೆ

‘ದರದಲ್ಲಿ ವ್ಯತ್ಯಾಸ ಕಂಡರೆ ಪರವಾನಗಿ ರದ್ದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಜಿಲ್ಲೆಯ ವಿವಿಧ ನ್ಯಾಯಬೆಲೆ ಅಂಗಡಿಗಳಲ್ಲಿ ತೂಕದಲ್ಲಿ ವ್ಯತ್ಯಾಸ ಮಾಡಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿರುವ ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ’ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎನ್.ಕೃಷ್ಣಮೂರ್ತಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನುಷ್ಠಾನ ಕುರಿತಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಜಿಲ್ಲೆಯ ಅಂಗನವಾಡಿ ಕೇಂದ್ರ, ಎಂಎಸ್‍ಪಿಟಿಸಿ, ಮಧ್ಯಾಹ್ನದ ಬಿಸಿಯೂಟ ಯೋಜನೆ, ಆಹಾರ ಧಾನ್ಯ ಸಗಟು ಮಳಿಗೆ, ನ್ಯಾಯಬೆಲೆ ಅಂಗಡಿ, ಜಿಲ್ಲಾ ಅಪೌಷ್ಟಿಕ ಮಕ್ಕಳ ಉಪಚಾರ ಘಟಕ, ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ 1 ರಿಂದ 2 ಕೆ.ಜಿ. ಕಡಿಮೆ ಪ್ರಮಾಣದ ಧಾನ್ಯ ವಿತರಣೆಯಾಗಿರುವು ಕಂಡುಬಂದಿದೆ’ ಎಂದು ತಿಳಿಸಿದರು. 

 ‘ನ್ಯಾಯಬೆಲೆ ಅಂಗಡಿಗಳಲ್ಲಿ ಡಿಜಿಟಲ್ ತೂಕದ ಯಂತ್ರಗಳನ್ನು ಅಳವಡಿಸಬೇಕು. ಅಲ್ಲದೆ, ಅಂತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್ ಪಡಿತರ ಚೀಟಿಗಳಿಗೆ ನೀಡುವ ಉಚಿತ ಅಕ್ಕಿ ಪ್ರಮಾಣ ಹಾಗೂ ನಿಯಮಾನುಸಾರ ವಿತರಿಸುವ ಬೇಳೆ, ಇನ್ನಿತರ ಧಾನ್ಯ, ಸೀಮೆ ಎಣ್ಣೆಯ ನಿಗದಿತ ದರದ ಫಲಕ ಅಳವಡಿಸಬೇಕು. ಪಡಿತರ ವಿತರಣೆ ಬಗ್ಗೆ ದೂರುಗಳಿದ್ದಲ್ಲಿ ಸಾರ್ವಜನಿಕರು ಯಾವ ಅಧಿಕಾರಿಯನ್ನು ಸಂಪರ್ಕಿಸಬೇಕು ಮತ್ತು ಅವರ ದೂರವಾಣಿ ಹಾಗೂ ಸಹಾಯವಾಣಿ- 1967 ಸಂಖ್ಯೆಯನ್ನೊಳಗೊಂಡ ಮಾಹಿತಿ ಫಲಕದಲ್ಲಿರಬೇಕು’ ಎಂದು ತಿಳಿಸಿದರು.

ಅಂಗನವಾಡಿಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡುತ್ತಿಲ್ಲ. ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ತಪಾಸಣೆ ನಡೆಸುವ ವೈದ್ಯರ ವಾಹನಗಳಿಗೆ ಜಿಪಿಎಸ್ ಅಳವಡಿಕೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ವಿಧಾನ ಸಫಲವಾದರೆ ಬೇರೆ ಜಿಲ್ಲೆಗಳಲ್ಲಿಯೂ ಅನುಸರಿಸಲು ಶಿಫಾರಸು ಮಾಡಲಾಗುವುದು’ ಎಂದು ತಿಳಿಸಿದರು.

‘ರಾಮಸಮುದ್ರ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ 200 ಹೆಣ್ಣುಮಕ್ಕಳಿದ್ದು, ಅಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ಎರಡೇ ಶೌಚಾಲಯಗಳು ಇರುವುದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಒಂದು ಕೋಣೆಯಲ್ಲಿ 30 ವಿದ್ಯಾರ್ಥಿನಿಯರು ವಾಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಯಾವ ಜಿಲ್ಲೆಯಲ್ಲಿಯೂ ಕಂಡುಬಂದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರಾದ ವಿ.ಬಿ.ಪಾಟೀಲ, ಎಚ್.ವಿ.ಶಿವಶಂಕರ್, ಡಿ.ಜಿ.ಹಸಬಿ, ಬಿ.ಎ.ಮಹಮ್ಮದ್ ಅಲಿ, ಮಂಜುಳಾಬಾಯಿ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ದತ್ತಪ್ಪ ಕಲ್ಲೂರ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.