ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ತಿಂಗಳಾದರೂ ಬಾರದ ‘ಇನ್ಸೆಂಟಿವ್‌’: ಆರೋಗ್ಯ, ಕ್ಷೇಮ ಕೇಂದ್ರ ಸಿಬ್ಬಂದಿ ಪರದಾಟ

ಯಾದಗಿರಿ ಜಿಲ್ಲೆಯ 150 ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸಿಬ್ಬಂದಿ ಪರದಾಟ
Published 7 ಮಾರ್ಚ್ 2024, 6:14 IST
Last Updated 7 ಮಾರ್ಚ್ 2024, 6:14 IST
ಅಕ್ಷರ ಗಾತ್ರ

ಯಾದಗಿರಿ: ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸಿಬ್ಬಂದಿಗೆ ಕಳೆದ 11 ತಿಂಗಳಿಂದ ಸೇವಾಧಾರಿತ ಭತ್ಯೆ (ಇನ್ಸೆಂಟಿವ್‌) ಜಮಾ ಆಗದೇ ಸಿಬ್ಬಂದಿ ಪರದಾಡುತ್ತಿದ್ದಾರೆ.

ಜಿಲ್ಲೆಯಲ್ಲಿ 150 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿದ್ದು, 2023ರ ಏಪ್ರಿಲ್‌ ತಿಂಗಳಿನಿಂದ ಇಲ್ಲಿಯ ತನಕ ಇನ್ಸೆಂಟಿವ್‌ ಬಂದಿಲ್ಲ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

ರೋಗಿ ಮನೆ ಬಾಗಿಲಿಗೆ ಔಷಧಿ ನೀಡುವ ಕೇಂದ್ರ ಇದಾಗಿದೆ. 4ರಿಂದ 5 ಸಾವಿರ ಜನರಿಗೆ ಒಂದು ಆರೋಗ್ಯ ಕೇಂದ್ರ ಇರುತ್ತದೆ. ಆದರೆ, ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವಿನಾಃಕಾರಣ ಕಿರುಕುಳ ನೀಡುವುದನ್ನು ಪಾಠ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಕಳೆದ 11 ತಿಂಗಳಿಂದ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಉದ್ದೇಶ ಪೂರ್ವಕವಾಗಿ ಸೇವಾಧಾರಿತ ಭತ್ಯೆ ನೀಡದೆ ಸತಾಯಿಸಲಾಗುತ್ತಿದೆ. ಇದರಿಂದ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಬೆಳವಣಿಗೆ ಕುಂಠಿತವಾಗಿದೆ ಎಂದು ಸಿಬ್ಬಂದಿ ಹೇಳುವ ಮಾತಾಗಿದೆ.

15ನೇ ಹಣಕಾಸು ಯೋಜನೆಯಲ್ಲಿ ಸಹಿ ಬದಲಾವಣೆಯಿಂದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಿಬ್ಬಂದಿಗೆ ಸೇವಾಧಾರಿತ ಭತ್ಯೆ (ಇನ್ಸೆಂಟಿವ್‌) ಜಮಾ ಆಗಿಲ್ಲ. ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು
ಡಾ.ಪ್ರಭುಲಿಂಗ ಮಾನಕರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ 
ಪ್ರತಿ ತಿಂಗಳು 21ಕ್ಕೆ ವೇತನ ಜಮಾ ಆಗುತ್ತದೆ. ಸೇವಾಧಾರಿತ ಭತ್ಯೆ ಇಲ್ಲದೇ ಸಿಬ್ಬಂದಿ ಮೇಲಾಧಿಕಾರಿಗಳನ್ನು ಅಂಗಲಾಚುವಂತೆ ಆಗಿದೆ. ಧ್ವನಿ ಎತ್ತಿದ ಸಿಬ್ಬಂದಿಗೆ ಕಿರುಕುಳ ನೀಡಲಾಗುತ್ತಿದೆ. ಅಲ್ಲದೇ ಟಾರ್ಗೆಟ್‌ ಮಾಡಿ ಕೆಲಸಕ್ಕೆ ಕುತ್ತು ತರಲಾಗುತ್ತಿದೆ
ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ
15 ಅಂಶಗಳ ಕಾರ್ಯಕ್ರಮ
‘ಗರ್ಭಿಣಿಯರ ತಪಾಸಣೆ ಟಿ.ಬಿ. ಲಸಿಕೆ ಆರೋಗ್ಯ ತಪಾಸಣೆ ರಕ್ತ ತಪಾಸಣೆ ಸೇರಿ ಪ್ರತಿ ನಿತ್ಯ ಇಲಾಖೆ ನಿಗದಿಪಡಿಸಿದ 15 ಇಂಡಿಕೇಟರ್‌ಗಳನ್ನು ಭರ್ತಿ ಮಾಡಿ ವರದಿ ಸಲ್ಲಿಸಬೇಕು. 15 ಅಂಶಗಳನ್ನು ಸರಿಯಾಗಿ ಮಾಡಿದರೆ ₹8 ಸಾವಿರ ಇನ್ಸೆಂಟಿವ್‌ ನೀಡಲಾಗುತ್ತಿದೆ. ಶೇ 60ರಿಂದ 70 ಮಾಡಿದರೆ ₹6ರಿಂದ ₹7 ಸಾವಿರ ನೀಡಲಾಗುತ್ತಿದೆ. ಇದು ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಮೇಲೆ ಅವಲಂಬಿತವಾಗಿರುತ್ತದೆ’ ಎಂದು ಸಿಎಚ್‌ಸಿ ಸಿಬ್ಬಂದಿ ನೀಡುವ ಮಾಹಿತಿಯಾಗಿದೆ.

ಅಂತರಾ ಚುಚ್ಚು ಮದ್ದು ಅನಾವರಣ ಇಂದು

ಯಾದಗಿರಿ: ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂತರಾ (ಎಸ್‌ಸಿ) ಚುಚ್ಚು ಮದ್ದು ಅನಾವರಣ ಕಾರ್ಯಕ್ರಮ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಾರ್ಚ್ 7 ರಂದು ಮಧ್ಯಾಹ್ನ 2.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್ ತಿಳಿಸಿದ್ದಾರೆ. ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ ಶರಣಗೌಡಬಸಪ್ಪ ದರ್ಶನಾಪುರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿಸುವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸುವರು. ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರು ಅಧ್ಯಕ್ಷತೆ ವಹಿಸುವರು. ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಕಲಬುರಗಿ ಸಂಸದ ಡಾ.ಉಮೇಶ ಜಿ.ಜಾಧವ ಮುಖ್ಯ ಅತಿಥಿಗಳಾಗಿ ಆಗಮಿಸುವರು. ವಿಧಾನ ಪರಿಷತ್ತು ಸದಸ್ಯರಾದ ಬಿ.ಜಿ.ಪಾಟೀಲ ಡಾ.ಚಂದ್ರಶೇಖರ ಬಿ.ಪಾಟೀಲ ಶಶೀಲ್ ನಮೋಶಿ ಛಲವಾದಿ ಟಿ.ನಾರಾಯಣಸ್ವಾಮಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅತಿಥಿಗಳಾಗಿ ಪಾಲ್ಗೊಳ್ಳುವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಟಿ.ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆಯುಕ್ತ ಡಿ.ರಂದೀಪ್ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಭಿಯಾನ ನಿರ್ದೇಶಕ ಡಾ.ನವೀನ್ ಭಟ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ನಿರ್ದೇಶಕ ಡಾ.ಜಿ.ಎಸ್.ಪುಷ್ಪಲತಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಯೋಜನಾ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕುಟುಂಬ ಕಲ್ಯಾಣ ಸೇವೆಗಳು ಉಪ ನಿರ್ದೇಶಕ ಡಾ.ಚಂದ್ರಿಕಾ ಬಿ.ಆರ್ ಆರೋಗ್ಯ ಡಬ್ಲ್ಯೂಎಚ್‌ಒ ಲೈಂಗಿಕ ಮತ್ತು ಸಂತಾನೋತ್ಪತ್ತಿ ರಾಷ್ಟ್ರೀಯ ಪ್ರೋಫೆಶನನ್‌ ಅಧಿಕಾರಿ ಡಾ.ಪ್ರಗತಿ ಎಸ್.ಆರ್.ಎಚ್ ಡಬ್ಲ್ಯೂಎಚ್‌ಒ ಕಾರ್ಯಕ್ರಮ ವ್ಯವಸ್ಥಾಪಕ ರಾಷ್ಟ್ರೀಯ ಅಧಿಕಾರಿ ಡಾ.ನೇಹಾ ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗರಿಮಾ ಪಂವಾರ್ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜ್ಯೋತಿ ಕಟ್ಟಿಮನಿ ಉಪಸ್ಥಿತರಿರುವರು.

ಸಚಿವ ಗುಂಡೂರಾವ್ ಜಿಲ್ಲಾ ಪ್ರವಾಸ

ಯಾದಗಿರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸಚಿವ ದಿನೇಶ ಗುಂಡೂರಾವ್ ಅವರು ಮಾರ್ಚ್‌ 7 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಕೆ.ಎ.ಹಿದಾಯತ್ತುಲ್ಲ ತಿಳಿಸಿದ್ದಾರೆ. ಮಾರ್ಚ್ 7 ರಂದು ಬೆಳಿಗ್ಗೆ 8.30 ಗಂಟೆಗೆ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಗಮಿಸಿ ಬೆಳಿಗ್ಗೆ 9.30 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣ ಆಗಮಿಸಿ ಬೆಳಿಗ್ಗೆ 10.30 ಗಂಟೆಗೆ ಕಲಬುರಗಿ ನಗರದಲ್ಲಿ ಪ್ರೇರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ 12.30 ಗಂಟೆಗೆ ಕಲಬುರಗಿದಿಂದ ನಿರ್ಗಮಿಸಿ ರಸ್ತೆ ಮೂಲಕ ಮಧ್ಯಾಹ್ನ 1.30 ಗಂಟೆಗೆ ಆಗಮಿಸುವರು. ತದನಂತರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ dist family planning summit new choice new horizons ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಪಾಲ್ಗೊಳ್ಳುವರು. ಜಿಲ್ಲಾ ಕ್ರೀಡಾಂಗಣದಲ್ಲಿ ಜೀ ಕನ್ನಡ ಟಿವಿ ಚಾನಲ್ ಆಯೋಜಿಸಿರುವ ಸರಿಗಮಪ ಫಿನಾಲೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರಿ 10 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ತಜ್ಞ ವೈದ್ಯರ ಕೊರತೆ

ಯಾದಗಿರಿ ಜಿಲ್ಲೆಯ ನಗರ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ತಜ್ಞ ವೈದ್ಯರ ಕೊರತೆ ಇದ್ದು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಆಸ್ಪತ್ರೆಗಳು ನಿರ್ಮಿಸಿದ್ದರೂ ಸಾರ್ವಜನಿಕರಿಗೆ ಯಾವುದೇ ಉಪಯೋಗವಾಗುತ್ತಿಲ್ಲ. ಇದರಿಂದ ರೋಗಿಗಳ ಪರದಾಟ ತಪ್ಪಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ದರ್ಶನವೇ ಸಿಗುವುದಿಲ್ಲ. ಅಪರೂಪಕ್ಕೆ ಬರುವ ವೈದ್ಯರು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಮಾತ್ರ ಆಸ್ಪತ್ರೆಯಲ್ಲಿದ್ದು ನಂತರ ಪಟ್ಟಣ ನಗರಗಳಿಗೆ ತೆರಳುತ್ತಾರೆ. ಇದರಿಂದ ಹೆರಿಗೆ ಅಪಘಾತದಂತೆ ಘಟನೆಗಳು ಸಂಭವಿಸಿದಾಗ ವೈದ್ಯರು ಲಭ್ಯವಿಲ್ಲದೆ ರೋಗಿಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಹಲವಾರು ಕಡೆ ಸ್ಟಾಫ್‌ ನರ್ಸ್‌ಗಳೇ ವೈದ್ಯರಂತೆ ಕಾರ್ಯನಿರ್ವಹಿಸುತ್ತಿದ್ದಾರೆ.

₹1 ಸಾವಿರ ಸಂಗ್ರಹ

ಕಳೆದ 11 ತಿಂಗಳಿಂದ ಸೇವಾಧಾರಿತ ಭತ್ಯೆ (ಇನ್ಸೆಂಟಿವ್‌) ಬಾರದ ಕಾರಣ ಕೆಲವರು ಆರೋಗ್ಯ ಮತ್ತು ಕೇಂದ್ರದ ಸಿಬ್ಬಂದಿಯಿಂದ ₹1 ಸಾವಿರ ಸಂಗ್ರಹ ಮಾಡಲಾಗಿದೆ ಎನ್ನಲಾಗುತ್ತಿದೆ. ಸಂಗ್ರಹವಾದ ಮೇಲಾಧಿಕಾರಿಗಳಿಗೆ ನೀಡಬೇಕು ಎಂದು ವಸೂಲಿ ಮಾಡಲಾಗಿದೆ ಎಂದು ತಿಳಿದುಬಂದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT