ಶನಿವಾರ, ಏಪ್ರಿಲ್ 4, 2020
19 °C
ಯಾದಗಿರಿ: ನಗರಸಭೆ ರಚನೆಯಾದಂದಿನಿಂದ ಒಬಿಸಿ ಬಿ ಮಹಿಳೆಗೆ ನಿಗದಿಯಾಗದ ಮೀಸಲಾತಿ

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರಸಭೆ, ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ರಾಜ್ಯ ಸರ್ಕಾರವು ಮೀಸಲಾತಿ ಪಟ್ಟಿ ಅಧಿಸೂಚನೆ  ಹೊರಡಿಸಿದ್ದು, ಆಕಾಂಕ್ಷಿಗಳಲ್ಲಿ ಪೈಪೋಟಿ ಏರ್ಪಟ್ಟಿದೆ. ಮೀಸಲಾತಿ ಪಟ್ಟಿ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು
ಗರಿಗೆದರಿವೆ.

ಯಾದಗಿರಿಯಲ್ಲಿ 31 ಸ್ಥಾನ: ಯಾದಗಿರಿ ನಗರಸಭೆಗೆ ಅಧ್ಯಕ್ಷ ಸ್ಥಾನ ಎಸ್‌ಸಿ, ಉಪಾಧ್ಯಕ್ಷ ಸ್ಥಾನ ಸಮಾನ್ಯ ಮಹಿಳೆಗೆ ಮೀಸಲಾಗಿದೆ. 31 ಸ್ಥಾನಗಳಲ್ಲಿ 16 ಬಿಜೆಪಿ ಸದಸ್ಯರು, ಕಾಂಗ್ರೆಸ್‌ 11 ಸದಸ್ಯರು, ಜೆಡಿಎಸ್‌ 3 ಸದಸ್ಯರು, ಪಕ್ಷೇತರ ಒಂದು ಸ್ಥಾನದಲ್ಲಿ ಗೆಲವು ಸಾಧಿಸಿದ್ದಾರೆ. ಅದರಲ್ಲಿ ಬಿಜೆಪಿಯ 16 ಸದಸ್ಯರಲ್ಲಿ ಎಸ್‌ಸಿ ಸಮುದಾಯಕ್ಕೆ ಸೇರಿದ ಮೂವರು ಪುರುಷರು ಮತ್ತು ಇಬ್ಬರು ಮಹಿಳೆಯರಿದ್ದಾರೆ.

ಹಣಮಂತ ಇಟಗಿ ಎರಡು ಬಾರಿ  ಸದಸ್ಯರಾಗಿದ್ದು, ಎರಡು ಬಾರಿ ಗೆದ್ದಿದ್ದಾರೆ. ಸ್ವಾಮಿದೇವ ದಾಸನಕೇರಿ ಒಂದು ಬಾರಿ ಗೆದ್ದಿದ್ದಾರೆ. ಒಮ್ಮೆ ನಾಮನಿರ್ದೇಶಿತ ಸದಸ್ಯರಾಗಿದ್ದರು. ಮಂಜುನಾಥ ದಾಸನಕೇರಿ, ಬಸಮ್ಮ ಮಹೇಶ, ಲಕ್ಷ್ಮಿ ರಾಥೋಡ್‌  ಹೊಸಬರು. ಐವರಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದು ಕುತೂಹಲಕಾರಿ ಸಂಗತಿ.

ಸುರಪುರ: ಸುರಪುರ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ನಿಗದಿ ಪಡಿಸ ಲಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪಡೆಯಲು ಪೈಪೋಟಿ ಶುರುವಾಗಿದೆ. 

ವಾರ್ಡ್ ಸಂಖ್ಯೆ–6ರ ಸದಸ್ಯೆ ಸುಜಾತಾ ವೇಣುಗೋಪಾಲ ಜೇವರ್ಗಿ, ವಾರ್ಡ್ ಸಂಖ್ಯೆ 30ರ ಸದಸ್ಯೆ ಮುತ್ತಮ್ಮ ಅಯ್ಯಪ್ಪ ಅಕ್ಕಿ ಮಧ್ಯೆ ಅಧ್ಯಕ್ಷೆ ಸ್ಥಾನಕ್ಕೆ ಪೈಪೋಟಿ ಇದೆ ಎನ್ನಲಾಗಿದೆ. 

ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್ ಸಂಖ್ಯೆ–9ರ ಸದಸ್ಯ ವೇಣುಮಾಧವ ನಾಯಕ, ವಾರ್ಡ್ ಸಂಖ್ಯೆ 16ರ ಸದಸ್ಯ ವಿಷ್ಣು ಗುತ್ತೇದಾರ ಲಾಬಿ ನಡೆಸಿದ್ದಾರೆ. 

ಶಹಾಪುರ: ಶಹಾಪುರ ನಗರಸಭೆಯಲ್ಲಿ 31 ಸ್ಥಾನಗಳಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್‌ಟಿಗೆ ಮೀಸಲಾಗಿದೆ. ‌16 ಕಾಂಗ್ರೆಸ್‌, 12 ಬಿಜೆಪಿ, 2 ಎಸ್‌ಡಿಪಿಐ 2 ಮತ್ತು ಪಕ್ಷೇತರ 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.

ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ವಾರ್ಡ್‌ ಸಂಖ್ಯೆ 8ರ ಸದಸ್ಯೆ ಕಮಲಬಾಯಿ ಚಂದ್ರಶೇಖರ ಲಿಂಗದಳ್ಳಿ, ವಾರ್ಡ್‌ ಸಂಖ್ಯೆ 23ರ ಸದಸ್ಯೆ ಶಹಾನವಾಜ ಬೇಗಂ ದರ್ಬಾನ ಹೆಸರು ಚಾಲ್ತಿ ಇದೆ. ಉಪಾಧ್ಯಕ್ಷ ಸ್ಥಾನ ಎಸ್‌ಟಿಗೆ ಮೀಸಲಾಗಿದ್ದು, ವಾರ್ಡ್‌ ಸಂಖ್ಯೆ 16 ರ ಸದಸ್ಯೆ ಭೀಮಬಾಯಿ ದೇವಿಂದ್ರಪ್ಪ ಏಕೈಕ ಅಭ್ಯರ್ಥಿಯಾಗಿದ್ದಾರೆ. 

ಕೆಂಭಾವಿ: ಕೆಂಭಾವಿ ಪುರಸಭೆ ಅಧಿಕಾರ ಪಡೆಯಲು ಗದ್ದುಗೆಗೆ ಗುದ್ದಾಟ ಆರಂಭಗೊಂಡಿದೆ. 23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ 14, ಬಿಜೆಪಿ 8 ಹಾಗೂ ಪಕ್ಷೇತರ ಒಬ್ಬರು ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ವಾರ್ಡ್‌ ಸಂಖ್ಯೆ 2ರ ಸದಸ್ಯ ಬಸವರಾಜ ಬಸರಿಗಿಡ ಹಾಗೂ ವಾರ್ಡ್‌ ಸಂಖ್ಯೆ 16ರ ದುರ್ಗಪ್ಪ ಅವರ ಮಧ್ಯೆ ಅಧ್ಯಕ್ಷರ ಸ್ಥಾನಕ್ಕೆ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ.

ಕಕ್ಕೇರಾ: ಕಕ್ಕೇರಾ ಪುರಸಭೆಯಲ್ಲಿ ಒಟ್ಟು 23 ಸ್ಥಾನಗಳಿದ್ದು, 13 ಬಿಜೆಪಿ, 10 ಕಾಂಗ್ರೆಸ್ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್‌ಟಿಗೆ ಮೀಸಲಾಗಿದೆ.  

7ನೇ ವಾರ್ಡ್‌ ಸದಸ್ಯೆ ಮಲ್ಲಮ್ಮ ಪವಾಡೆಪ್ಪ ಮ್ಯಾಗೇರಿ, 14ನೇ ವಾರ್ಡ್‌ ಸದಸ್ಯೆ ಗುಬ್ಬವ್ವ ತಿರುಪತಿ ಪವಾರ ಇಬ್ಬರೂ ಮಹಿಳೆಯರು ಮಹಿಳೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ಉಪಾಧ್ಯಕ್ಷ ಸ್ಥಾನ ಎಸ್‌ಟಿಗೆ ಮೀಸಲಾತಿ ಇರುವುದರಿಂದ ಹಲವಾರು ಸದಸ್ಯರು ಆಕಾಂಕ್ಷಿಗಳಿದ್ದಾರೆ.

ಒಂದೂವರೆ ವರ್ಷ ಅಧಿಕಾರಿಗಳ ದರ್ಬಾರು ಇತ್ತು. ಈಗ ಮೀಸಲಾತಿ ನಿಗದಿಗೊಳಿಸಿದ್ದು, ದಿನಾಂಕ ನಿಗದಿ ಪಡಿಸಬೇಕಿದೆ. ಆದರೆ, ಇದಕ್ಕೂ ಅನಿಶ್ಚತೆ ಕಾಡುತ್ತಿದೆ. ಮೀಸಲಾತಿ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಇನ್ನೂ ಬಗೆಹರಿದಿಲ್ಲ. ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)