ಹೆಚ್ಚುತ್ತಿರುವ ಪ್ರವಾಹ ಸ್ಥಿತಿ

ಯಾದಗಿರಿ: ನಾರಾಯಣಪುರ ಬಸವಸಾಗರ ಜಲಾಶಯದಿಂದ ಬುಧವಾರ 4.57 ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿಸುತ್ತಿದ್ದು, ಪ್ರವಾಹದ ಪರಿಸ್ಥಿತಿ ದಿನೇ ದಿನೇ ಹೆಚ್ಚಳವಾಗುತ್ತಿದೆ. ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬಸವಸಾಗರ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಇದರಿಂದ ನದಿ ಪಾತ್ರದ ಗ್ರಾಮಸ್ಥರ ಜನ ಜೀವನ ಅಸ್ತವ್ಯಸ್ತವಾಗಿದ್ದು, ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ.
ಜಿಲ್ಲಾಡಳಿತ ನದಿ ಪಾತ್ರದ ಮುಳುಗಡೆ ಭೀತಿ ಎದುರಿಸುತ್ತಿರುವ ಗ್ರಾಮಸ್ಥರನ್ನು ಗಂಜಿ ಕೇಂದ್ರಗಳಿಗೆ ಕರೆ ತರುವ ಪ್ರಯತ್ನ ಮಾಡುತ್ತಿದೆ. ಕೆಲ ಗಡ್ಡಿ ಪ್ರದೇಶದ ಜನರು ಅಧಿಕಾರಿಗಳು ಮನವೊಲಿಸಿದರೂ ಗ್ರಾಮ ಬಿಟ್ಟು ಬರುವುದಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇದರಿಂದ ಗಂಜಿ ಕೇಂದ್ರಗಳಿಗೆ ಜನರನ್ನು ಸ್ಥಳಾಂತರಿಸಲು ಸಮಸ್ಯೆಯಾಗಿದೆ.
ವಡಗೇರಾ ತಾಲ್ಲೂಕಿನ ಚನ್ನೂರು, ಗೊಂದೇನೂರು ಗ್ರಾಮಗಳ ಜನರು ಬಿಡಲು ಒಪ್ಪುತ್ತಿಲ್ಲ. ಆದರೂ ಅಧಿಕಾರಿಗಳು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.
ನೀಲಕಂಠರಾಯನ ಗಡ್ಡಿ ಸೇತುವೆ ಮುಳುಗುವ ಹಂತಕ್ಕೆ ಬಂದಿದೆ. ಇದರಿಂದ ಮತ್ತೆ ಸಂಪರ್ಕ ಕಡೆದುಕೊಳ್ಳುವ ಭೀತಿ ಎದುರಾಗಿದೆ. ಕೊಳ್ಳೂರು (ಎಂ) ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜಿಲ್ಲಾಡಳಿದ ವತಿಯಿಂದ 10 ಕಡೆ ಗಂಜಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ.
ನೀರು ಹೆಚ್ಚು ಹರಿಬಿಟ್ಟ ಹಿನ್ನೆಲೆಯಲ್ಲಿ ಕೊಳ್ಳೂರು(ಎಂ)–ಮರಕಲ್, ಹಯ್ಯಾಳ–ಐಕೂರು ರಸ್ತೆ ಕಡಿತಗೊಂಡಿದೆ. ಇದರಿಂದ ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.