ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ

7
ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಬಿ.ಪಾಟೀಲ್ ಅಭಿಮತ

ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ

Published:
Updated:
Deccan Herald

ಯಾದಗಿರಿ: ‘ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರ ಬದ್ಧವಾಗಿದೆ’ ಎಂದು ಗಣಿ ಮತ್ತು ಭೂ ವಿಜ್ಞಾನ, ಮುಜರಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಬಿ.ಪಾಟೀಲ್ ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ ಆಯೋಜಿಸಿದ್ದ 72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ ಕೊಡೆಕಲ್‌ನ ಸಂಗಪ್ಪ ಬಸಪ್ಪ ಮಂಟೆ, ಸುರಪುರದ ವಿರೂಪಾಕ್ಷಪ್ಪಗೌಡ, ಕೊಲ್ಲೂರ ಮಲ್ಲಪ್ಪ, ವಿದ್ಯಾಧರ್, ಗುರೂಜೀ,ಈಶ್ವರಲಾಲ್ ಭಟ್ಟಡ್, ವಿಶ್ವನಾಥರೆಡ್ಡಿ ಮುದ್ನಾಳ ಮುಂತಾದವರು ದೇಶವನ್ನು ದಾಸ್ಯದಿಂದ ಬಿಡಿಸಲು ರೂಪಿಸಿದ ಚಳವಳಿಗೆ ಬೆಂಬಲ ನೀಡುವ ಮೂಲಕ ದೇಶಕ್ಕಾಗಿ ಜೀವ ಸವೆಸಿದ್ದಾರೆ. ಅಂತಹವರ ಸ್ಮರಣೆಯನ್ನು ಮಾಡಬೇಕಿದೆ’ ಎಂದರು.

‘ಧೀಮಂತ ಸ್ವಾತಂತ್ರ್ಯ ಸೇನಾನಿಗಳನ್ನು ನಮ್ಮ ಸರ್ಕಾರ ಸದಾ ಸ್ಮರಿಸುತ್ತಿದ್ದು, ಈ ನಿಟ್ಟಿನಲ್ಲಿ ಕೊಲ್ಲೂರ ಮಲ್ಲಪ್ಪ ಅವರ ಸ್ಮಾರಕ ಭವನ ನಿರ್ಮಾಣಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹2 ಕೋಟಿ ಬಿಡುಗಡೆ ಮಾಡಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಸತಿ ಯೋಜನೆಯಡಿ 2018–19ನೇ ಸಾಲಿಗೆ ಮನೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಒಟ್ಟು 8,261 ಮನೆಗಳ ಗುರಿ ನಿಗದಿಪಡಿಸಿದ್ದು, ಸದರಿ ನಿಗದಿಪಡಿಸಲಾದ ಗುರಿಗೆ ಅನುಗುಣವಾಗಿ, ಮೊದಲನೆ ತ್ರೈಮಾಸಿಕದಲ್ಲಿ ಒಟ್ಟು 3,457 ಮನೆಗಳು ಪೂರ್ಣಗೊಳಿಸಲಾಗಿದೆ. ಒಟ್ಟಾರೆ ಶೇ.42 ರಷ್ಟು ಸಾಧನೆ ಮಾಡಿದ್ದು, ಮನೆಗಳ ನಿರ್ಮಾಣದ ಪ್ರಗತಿಯಲ್ಲಿ ಯಾದಗಿರಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ’ ಎಂದು ವಿವರಿಸಿದರು.

‘ನೀತಿ ಆಯೋಗವು ವಿವಿಧ ಮಾನದಂಡಗಳನ್ನು ಇಟ್ಟುಕೊಂಡು ದೇಶದ ಹಿಂದುಳಿದ 115 ಜಿಲ್ಲೆಗಳನ್ನು ಮಹತ್ವಾಕಾಂಕ್ಷೆ ಜಿಲ್ಲೆಗಳೆಂದು ಗುರುತಿಸಿದೆ. ಅವುಗಳಲ್ಲಿ ರಾಜ್ಯದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಆಯ್ಕೆಯಾಗಿವೆ. ಆರೋಗ್ಯ, ಶಿಕ್ಷಣ, ಕೃಷಿ, ಆರ್ಥಿಕ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಇತರೆ ಜಿಲ್ಲೆಗಳಿಗಿಂತ ವೇಗವಾಗಿ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಜಾರಿಗೊಳಿಸಿರುವ ಗ್ರಾಮ ಸ್ವರಾಜ್ ಅಭಿಯಾನದ ಅಡಿ ಜಿಲ್ಲೆಯ 349 ಹಳ್ಳಿಗಳನ್ನು ಆಯ್ಕೆ ಮಾಡಲಾಗಿದೆ. ಈ ಹಳ್ಳಿಗಳ ಜನರು ಸರಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ತಾವು ಅಭಿವೃದ್ಧಿ ಹೊಂದುವ ಮೂಲಕ ದೇಶದ ಪ್ರಗತಿಗೆ ಸಹಕರಿಸಬೇಕು’ ಎಂದರು.

ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸರೆಡ್ಡಿ ಮಾಲಿಪಾಟೀಲ್ ಅನಪುರ, ಮಾಜಿ ಶಾಸಕರಾದ ಬಾಬುರಾವ್ ಚಿಂಚನಸೂರ, ಮಾಜಿ ಉಪ ಸಭಾಪತಿ ಡೇವಿಡ್ ಸಿಮಿಯೋನ್, ಜಿ.ಪಂ ಉಪಾಧ್ಯಕ್ಷೆ ಚಂದ್ರಕಲಾ ಶರಣಗೌಡ ಹೊಸಮನಿ, ನಗರಸಭೆಯ ಅಧ್ಯಕ್ಷೆ ಲಲಿತಾ ಮೌಲಾಲಿ ಅನಪುರ, ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್, ಉಪ ವಿಭಾಗಾಧಿಕಾರಿ ಬಿ.ಎಸ್. ಮಂಜುನಾಥಸ್ವಾಮಿ ಇದ್ದರು.

ಆಕರ್ಷಕ ಪಥ ಸಂಚಲನ:
72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ವಿದ್ಯಾರ್ಥಿಗಳಿಗೆ ಸನ್ಮಾನ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ನಮೀರಾ ಉಮಾಮ್, ಧನ್ಯಶ್ರೀ, ನರೇಶಕುಮಾರ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಲಕ್ಷ್ಮೀ, ರೂಪಾ, ಅನೀಸ್ ಫಾತಿಮಾ, ಮಲ್ಲಮ್ಮ ಅವರನ್ನು ಹಾಗೂ ವಿವಿಧ ಕ್ರೀಡೆಗಳ ಉತ್ತಮ ಕ್ರೀಡಾಪಟುಗಳಾದ ಅನೀಲಕುಮಾರ, ಅಹ್ಮದ್ ಹುಸೇನ್, ಮಹಾಂತೇಶ, ವಿನಯ್, ಸಂಧ್ಯಾ, ರಮೇಶ ಅವರನ್ನು ಕೂಡ ಸನ್ಮಾನಿಸಲಾಯಿತು.

ನಂತರ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !