ಕ್ರೀಡಾ ಕ್ಷೇತ್ರದಲ್ಲಿ ಬಲಿಷ್ಠರಾಗೋಣ: ಶಾಸಕ ವೆಂಕಟರೆಡ್ಡಿ ಮುದ್ನಾಳ

7
ವಿಭಾಗಮಟ್ಟದ ಕಬಡ್ಡಿ ಟೂರ್ನಿ ಉದ್ಘಾಟನೆ

ಕ್ರೀಡಾ ಕ್ಷೇತ್ರದಲ್ಲಿ ಬಲಿಷ್ಠರಾಗೋಣ: ಶಾಸಕ ವೆಂಕಟರೆಡ್ಡಿ ಮುದ್ನಾಳ

Published:
Updated:
Deccan Herald

ಯಾದಗಿರಿ: ‘ವಿಜ್ಞಾನ, ತಾಂತ್ರಿಕ, ಖಗೋಳ, ಎಂಜಿನಿಯರ್ ಕ್ಷೇತ್ರಗಳಲ್ಲಿ ಭಾರತ ಎಲ್ಲ ದೇಶಗಳನ್ನು ಮೀರಿಸಿದೆ. ಅಮೆರಿಕ ಸಹ ಭಾರತದ ಸಾಧನೆ ಕಂಡು ಬೆಚ್ಚಿದೆ. ಆದರೆ, ಕ್ರೀಡಾಕ್ಷೇತ್ರದತ್ತ ಕಣ್ಣರಳಿಸಿ ನೋಡಿದರೆ ನಾವು ಬಡವಾಗಿದ್ದೇವೆ. ಆದ್ದರಿಂದ ಇಡೀ ಜಗತ್ತೇ ನಿಬ್ಬೆರಗಾಗುವಂತೆ ನಾವು ಕ್ರೀಡಾಕ್ಷೇತ್ರದಲ್ಲಿ ಬಲಿಷ್ಠರಾಗುವ ಮೂಲಕ ಪುಟಿದೇಳಬೇಕು’ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಕರೆ ನೀಡಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಕಲಬುರ್ಗಿ ವಿಭಾಗಮಟ್ಟದ ಪಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ಕಬಡ್ಡಿ ಟೂರ್ನಿ ಉದ್ಘಾಟಿಸಿ ಅವರು ಮಾತನಾಡಿದರು.

‘ಕಲಿಕೆಯಲ್ಲಿ ಒತ್ತಡ ಹೆಚ್ಚುತ್ತಿದೆ. ಪಾಲಕರ ಒತ್ತಡ ಮತ್ತಷ್ಟೂ ಮಕ್ಕಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಶಿಕ್ಷಣ ಸಂಸ್ಥೆಗಳು ಕಲಿಕಾ ವ್ಯವಸ್ಥೆಯನ್ನು ವ್ಯವಹಾರಿಕವಾಗಿಸಿದ್ದು, ಪೈಪೋಟಿ ಹೆಚ್ಚಿಸಿವೆ. ಇದೆಲ್ಲದರ ಪರಿಣಾಮವಾಗಿ ಮಕ್ಕಳು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಂದ ದೂರ ಉಳಿಯುತ್ತಿದ್ದಾರೆ’ ಎಂದು ವಿಷಾದಿಸಿದರು.

‘ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ. ಆರೋಗ್ಯವೂ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಹೆಚ್ಚಾಗಿ ತೊಡಗಬೇಕು. ಕ್ರೀಡಾ ಸಾಧನೆಯಿಂದ ಇಡೀ ದೇಶದಲ್ಲಿ ಕೀರ್ತಿ ಗಳಿಸಲು ಸಾಧ್ಯ’ ಎಂದು ಹೇಳಿದರು.

ಡಿವೈಎಸ್‌ಪಿ ಚಂದ್ರಶೇಖರ ದೇಗಲಮಡಿ ಮಾತನಾಡಿ,‘ಶಿಕ್ಷಕರು ಕ್ರೀಡೆಗಳತ್ತ ಮಕ್ಕಳು ತೊಡಗುವಂತಹ ವಾತಾವರಣ ನಿರ್ಮಾಣ ಗೊಳಿಸಬೇಕು. ದೇಶದ ಕ್ರೀಡಾ ಸಾಧಕರನ್ನು ಶಾಲೆಗಳೇ ಸೃಷ್ಟಿಸಬೇಕು. ಈ ಕಾರ್ಯವನ್ನು ಮುಂಚೆ ಶಾಲಾ ಶಿಕ್ಷಕರೇ ಮಾಡುತ್ತಿದ್ದರು. ಆದರೆ, ಈಗ ಕ್ರೀಡಾ ತರಬೇತಿ ಕೇಂದ್ರಗಳು ಮಾತ್ರ ಕ್ರೀಡಾಸಕ್ತಿ ಬೆಳೆಸುವ ತಾಣಗಳಾಗುತ್ತವೆ. ಬಡ ಕ್ರೀಡಾಪಟು ಹಣನೀಡಿ ಕ್ರೀಡಾ ತರಬೇತಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ, ಕ್ರೀಡಾಪಟುಗಳನ್ನು ಸೃಷ್ಟಿಸುವ ಹೊಣೆ ಶಿಕ್ಷಕರ ಮೇಲಿದೆ’ ಎಂದರು.

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಕೆ.ವಿಶ್ವನಾಥ ಮಾತನಾಡಿ,‘ ಒಲಿಂಪಿಕ್ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವುದು ಭಾರತಕ್ಕೆ ಗಗನ ಕುಸುಮ ಇದ್ದಂತೆ. ಅಲ್ಲಿ ಕಂಚಿನ ಪದಕ ಪಡೆದರೂ ಕ್ರೀಡಾಪಟುವಿಗೆ ಭಾರೀ ಗೌರವ ಮನ್ನಣೆ ದೊರೆಯುತ್ತದೆ. ಒಲಿಂಪಿಕ್ ಸ್ಪರ್ಧೆಯಲ್ಲಿ ಭಾರತದ ಸಾಧನೆ ತೀರಾ ಕಡಿಮೆ. ಆದ್ದರಿಂದ, ಒಲಿಂಪಿಕ್ ಸ್ಪರ್ಧೆಯಲ್ಲಿ ಚಿನ್ನ ತರುವಂತಹ ಕ್ರೀಡಾ ಸಾಧಕರನ್ನು ಸಿದ್ಧಪಡಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ’ ಎಂದು ಹೇಳಿದರು.

‘ಕ್ರೀಡೆಯಿಂದ ಆಗುವ ಉಪಯೋಗಗಳ ಬಗ್ಗೆ ಪಾಲಕರಿಗೆ, ಮಕ್ಕಳಿಗೆ, ಶಿಕ್ಷಕರಿಗೂ ಅರಿವಿನ ಕೊರತೆ ಇದೆ. ದೇಶದಲ್ಲಿ ಹರಿಯಾಣ ರಾಜ್ಯದಲ್ಲಿ ಇದ್ದಷ್ಟು ಕ್ರೀಡಾಪಟುಗಳು ಉಳಿದ ರಾಜ್ಯದಲ್ಲಿ ಏಕಿಲ್ಲ? ಕ್ರೀಡಾಸಕ್ತಿ ಪೊರೆಯುವವರ ಕೈ, ಮನಸ್ಸುಗಳ ಕೊರತೆ ರಾಜ್ಯದಲ್ಲಿ ಇದೆ. ಸರ್ಕಾರ ಕೂಡ ಪ್ರತಿಯೊಂದು ಜಿಲ್ಲೆಗಳಲ್ಲಿ ವಿಶೇಷ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಕ್ರೀಡಾಪಟುಗಳಿಗೆ ಆರ್ಥಿಕ ಸಹಾಯ ಕಲ್ಪಿಸಿ ಪ್ರೋತ್ಸಾಹಿಸುವಂತಹ ಕೆಲಸವಾದರೆ ಒಲಿಂಪಿಕ್‌ ಎಂದಿಗೂ ನಮಗೆ ಗಗನಕುಸುಮ ಆಗಲಾರದು’ ಎಂದರು.

‘ಕಬಡ್ಡಿ ನಮ್ಮ ದೇಸೀಯ ಕ್ರೀಡೆ. ರಕ್ತಗತವಾಗಿ ಕನ್ನಡಿಗರಲ್ಲಿ ಬರುವ ಕ್ರೀಡೆಯಾಗಿದೆ. ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದೆ. ನಮ್ಮ ಮಕ್ಕಳನ್ನು ಶಾಲಾ ಹಂತದಲ್ಲಿಯೇ ಕಬಡ್ಡಿಯ ನೈಪುಣ್ಯತೆ, ಕೌಶಲ ಕಲಿಸಿ ಕೊಡುವ ಮೂಲಕ ಕ್ರೀಡೆಯಲ್ಲಿ ಬಲಿಷ್ಠರನ್ನಾಗಿಸಬೇಕಿದೆ’ ಎಂದೂ ಹೇಳಿದರು.

ಶಿಕ್ಷಣಾಧಿಕಾರಿ ಚಂದ್ರಶೇಖರಗೌಡ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಬಿ.ಆರ್. ಪಾಟೀಲ್, ಮನೋಹರ ವಡಿಗೇರಿ, ಚಂದ್ರಶೇಖರ ವೈದ್ಯ, ಬಸವನಗೌಡ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !