ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರಿನ ಮೊದಲ ಹಬ್ಬ ಕಾರಹುಣ್ಣಿಮೆ ಸಂಭ್ರಮ, ಎತ್ತುಗಳಿಗೆ ಶೃಂಗಾರ, ಪೂಜೆ

Last Updated 24 ಜೂನ್ 2021, 13:45 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ವಿವಿಧೆಡೆ ರೈತರ ಮುಂಗಾರಿನ ಮೊದಲ ಹಬ್ಬ ಕಾರಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ರೈತರು ತಮ್ಮ ಎತ್ತು, ಹಸುಗಳಿಗೆ ಹಳ್ಳ, ಕೆರೆ, ನದಿ ದಂಡೆಗಳಲ್ಲಿ ಸ್ನಾನ ಮಾಡಿಸಿ ವಿವಿಧ ಬಗೆಯ ಅಲಂಕಾರ ಮಾಡಿದರು.

ತಲೆಗೆ ಹೂವಿನ ಗೊಂಡೆ, ಕೊರಳಿಗೆ ಗೆಜ್ಜೆ, ಟೊಂಕಕ್ಕೆ ಕಪ್ಪುದಾರ, ಕೋಡಿಗೆ ಬಣ್ಣ, ದೇಹಕ್ಕೆ ಕೆಂಪು, ಹಳದಿ ಬಣ್ಣ ಹಚ್ಚಿ, ಶೃಂಗಾರಗೊಳಿಸಿ, ಗ್ರಾಮದ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಕುಣಿದು, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಸಂಜೆ ವೇಳೆ ರೈತರು ಎತ್ತುಗಳಿಂದ ಕರಿ ಹರಿಯುವ ಮೂಲಕ ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಿದರು. ಮುಂಗಾರು ಮಳೆ ಆಗಾಗ ಸಿಂಚನವಾಗುತ್ತಿದ್ದು, ಹೊಲಗಳಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ. ಹೀಗಾಗಿ ಗುರುವಾರ ಬಿಡುವು ನೀಡಿ ರೈತಾಪಿ ವರ್ಗ ಖುಷಿ ಪಟ್ಟರು.

ವಿಡಿಯೊ ನೋಡಿ

ಯರಗೋಳ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಾರಹುಣ್ಣಿಮೆ ಅಂಗವಾಗಿ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಿದರು. ಯುವಕರು ಎತ್ತುಗಳ ಜೊತೆಯಲ್ಲಿ ಕುಣಿದು ಕುಪ್ಪಳಿಸಿದರು. ಹಿರಿಯರು ಜನಪದ ಹಾಡುಗಳು ಹಾಡಿದರು. ಮೆರವಣಿಗೆಯನ್ನು ವೀಕ್ಷಿಸಲು ನೂರಾರು ಸಂಖ್ಯೆಯ ಜನರು ಸೇರಿದ್ದರು.

ಟೆಂಗಿನಕಾಯಿ ಒಡೆದು, ನೈವೇದ್ಯ ಅರ್ಪಿಸಿ, ಭಕ್ತಿ ಸಮರ್ಪಿಸಿದರು. ಯುವತಿಯರು ಹೊಸ ಸೀರೆ ಉಟ್ಟು ಆರತಿ ಬೆಳಗಿದರು.

ಯರಗೋಳ, ಅಲ್ಲಿಪುರ, ಹೆಡಗಿಮದ್ರ, ಹೊನಗೇರಾ, ಹತ್ತಿಕುಣಿ, ಬಂದಳ್ಳಿ, ಯಡ್ಡಳ್ಳಿ, ಚಾಮನಳ್ಳಿ, ಬೆಳಗೇರಾ, ಖಾನಳ್ಳಿ, ಬಸವಂತಪುರ, ಕ್ಯಾಸಪನಳ್ಳಿ, ಹೋರುಂಚಾ, ಅಚ್ಚೋಲ, ಮುದ್ನಾಳ, ಮಲಕಪ್ಪನಳ್ಳಿ, ಕಂಚಗಾರಳ್ಳಿ, ಅಬ್ಬೆತುಮಕೂರು, ಬಾಚವಾರ, ಬೊಮ್ಮಚಟ್ನಳ್ಳಿ, ಸಮಣಪುರ ಗ್ರಾಮಗಳಲ್ಲಿ ಕಾರ ಹುಣ್ಣಿಮೆ ಸಂಭ್ರಮ ಜೋರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT