ಯಾದಗಿರಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಕನ್ನಡಪರ ಸಂಘಟನೆಗಳ ಒಕ್ಕೂಟ ಹೋರಾಟ ಪ್ರತಿಭಟನೆ, ಮನವಿಗೆ ಬಂದ್ ಸೀಮಿತವಾಗಿತ್ತು.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ರಾಜ್ಯ ಬಂದ್ ಹಿನ್ನೆಲೆ ಕರವೇ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರಿಂದ ನಗರದಲ್ಲಿ ಬೆಂಬಲ ವ್ಯಕ್ತಪಡಿಸಿ ಶುಕ್ರವಾರ ಬೆಳಿಗ್ಗೆ ರೈಲ್ವೆ ನಿಲ್ದಾಣದ ಮುಖ್ಯ ದ್ವಾರದ ಬಳಿಯೇ ಪ್ರತಿಭಟನೆ ನಡೆಸಿದರು. ನಂತರ ರೈಲ್ವೆ ನಿಲ್ದಾಣದಲ್ಲಿ ರೈಲು ತಡೆಯಲು ಕರವೇ ಕಾರ್ಯಕರ್ತರು ಮುಂದಾದರು. ಈ ವೇಳೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
‘ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯ ಸಹಿಸುವುದಿಲ್ಲ. ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಬಂದ್‌ಗೆ ಬೆಂಬಲ ನೀಡಿ ಪ್ರತಿಭಟನೆ ನಡೆಸಿ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ’ ಎಂದು ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ ಗದ್ದುಗೆ ತಿಳಿಸಿದರು.
ನಗರದ ನೇತಾಜಿ ಸುಭಾಷ ವೃತ್ತ ಹಾಗೂ ರೈಲ್ವೆ ನಿಲ್ದಾಣ ಮುಂಭಾಗದ ಬಳಿ ಪ್ರತಿಭಟನೆ ನಡೆಯಿತು. ಬೆಳಿಗ್ಗೆಯಿಂದ ಶುರುವಾರ ಪ್ರತಿಭಟನೆ ಸಂಜೆ ವರೆಗೆ ವಿವಿಧ ಸಂಘಟನೆಗಳು ಆಗಾಗ ಬಂದು ಪ್ರತಿಭಟನೆ ಮಾಡುತ್ತಿದ್ದರು.
ನಾರಾಯಣಗೌಡ ಬಣದ ಕರವೇ ನೇತೃತ್ವದಲ್ಲಿ ಸುಭಾಷ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಕೆಲ ಕಾಲ ಹೈದರಾಬಾದ್-ವಿಜಯಪುರ ರಾಜ್ಯ ಹೆದ್ದಾರಿ ತಡೆದು ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಬಂದ್‌ಗೆ ಬೆಂಬಲಿಸಿ ನಮ್ಮ ಕರ್ನಾಟಕ ರಕ್ಷಣೆ ಸೇನೆ ಕಾರ್ಯಕರ್ತರಿಂದ ರೈಲು ತಡೆದು ಪ್ರತಿಭಟನೆ ನಡೆಸಿರುವ ನಾಟಕೀಯ ಬೆಳವಣಿಗೆ ನಡೆಯಿತು.
ಮುಂಬೈಯಿಂದ ಚೆನ್ನೈಗೆ ತೆರಳುವ ಮೇಲ್ ರೈಲು ತಡೆಯಲು ಯತ್ನಿಸಿದ ಇಬ್ಬರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಇನ್ನೂ ಜಯಕರ್ನಾಟಕ ಸಂಘಟನೆಯಿಂದ ರೈಲ್ವೆ ನಿಲ್ದಾಣದಲ್ಲಿ ಖಾಲಿ ಮಡಿಕೆಗಳನ್ನು ಹೊತ್ತುಕೊಂಡು ವಿನೂತನ ಪ್ರತಿಭಟನೆ ನಡೆಯಿತು.
ಜಯ ಕರ್ನಾಟಕ ಜಿಲ್ಲಾಧ್ಯಕ್ಷ ವಿಶ್ವನಾಥ ನಾಯಕ ನೇತೃತ್ವದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಿಂದ ರೈಲ್ವೆ ನಿಲ್ದಾಣವರಗೆ ಪ್ರತಿಭಟನೆ ಮೆರವಣಿಗೆ ನಡೆಯಿತು.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ರೈಲ್ವೆ ನಿಲ್ದಾಣದೊಳಗೆ ನುಗ್ಗಲು ಯತ್ನಿಸಿದರು. ಈ ವೇಳೆ 20 ಕ್ಕೂ ಹೆಚ್ಚು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು.
‘ಕಾವೇರಿ ಮತ್ತು ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಬಂದ್ ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆ ಎಚ್.ಶಿವರಾಮೇಗೌಡ ಬಣದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ಜನತೆಗೆ ಕುಡಿಯಲು ನೀರಿಲ್ಲದಿರುವಾಗ ತಮಿಳುನಾಡಿಗೆ ಮೂರು ಬೆಳೆ ಬೆಳೆಯಲು ನೀರು ಬಿಡುವುದು ಎಷ್ಟು ಸೂಕ್ತ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಶೇ 100ರಷ್ಟು ಮಳೆ ಬೀಳುವ ಕಾವೇರಿ ಜಲಾನಯನ ಪ್ರದೇಶ ಕರ್ನಾಟಕದಾಗಿದ್ದೆ. ಆದ್ದರಿಂದ ಹೆಚ್ಚಿನ ಪಾಲು ನಮ್ಮದಾಗಿದೆ. ಆದರೆ, ನೀರು ಹಂಚಿಕೆಯಲ್ಲಿ ಸಿಂಹ ಪಾಲು ತಮಿಳುನಾಡಿಗೆ ಹಂಚಿಕೆಯಾಗಿದೆ. ಇದು ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.
ಎಂದಿನಂತೆ ಜನ ಸಂಚಾರ:
ಕರ್ನಾಟಕ ಬಂದ್‌ಗೆ ಕನ್ನಡಪರ ಒಕ್ಕೂಟಗಳು ಬಂದ್ ಕರೆ ನೀಡಿದ್ದರೂ ಜಿಲ್ಲೆಯಲ್ಲಿ ಯಾವುದೇ ಪರಿಣಾಮ ಬೀರಿಲ್ಲ. ಜಿಲ್ಲೆಯ ಯಾವುದೇ ಅಹಿತಕರ ಘಟನೆ ಘಟನೆ ನಡೆದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಾಹನ ಸಂಚಾರ, ಅಂಗಡಿ ಮುಂಗಟ್ಟುಗಳು ತೆಗೆದಿದ್ದವು. ಸರ್ಕಾರಿ ಕಚೇರಿಗಳು, ಎಪಿಎಂಸಿ ವಹಿವಾಟು ಎಂದಿನಂತೆ ನಡೆಯಿತು. ಶಾಲಾ-ಕಾಲೇಜಿಗೆ ಮಕ್ಕಳು ತೆರಳುವುದು ಕಂಡು ಬಂತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.