ಬುಧವಾರ, ಸೆಪ್ಟೆಂಬರ್ 28, 2022
26 °C

ಯಾದಗಿರಿ: ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ, 2.19 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಗುರುವಾರ 2.19 ಲಕ್ಷ ಕ್ಯುಸೆಕ್ ನೀರು ಹರಿಸಲಾಗುತ್ತಿದ್ದು, ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ.

2.10 ಲಕ್ಷ ಕ್ಯುಸೆಕ್ ನೀರು ಬಸವಸಾಗರ ಜಲಾಶಯಕ್ಕೆ ಒಳಹರಿವು ಇದ್ದರೆ, 2,19,550 ಹೊರ ಹರಿವು ಇದೆ.

25 ಕ್ರಸ್ಟ್ ಗೇಟುಗಳ ಮೂಲಕ 1.60 ಮೀಟರ್ ಗೇಟುಗಳನ್ನು ಎತ್ತರಿಸಲಾಗಿದೆ. ‌2.13 ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ,  6,000 ಕ್ಯುಸೆಕ್ ಪವರ್ ಹೌಸ್ ಗೆ ಹರಿಸಲಾಗುತ್ತಿದೆ. 

ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದ್ದು, ಹೆಚ್ಚುವರಿ ನೀರು ನದಿಗೆ ಹರಿಬಿಡಲಾಗುತ್ತಿದೆ.
ನಾರಾಯಣಪುರ ಜಲಾಶಯಕ್ಕೆ ಬುಧವಾರ ರಾತ್ರಿ 9.30ಕ್ಕೆ 1.70 ಲಕ್ಷ ಕ್ಯುಸೆಕ್ ಒಳಹರಿವು‌ ಇದ್ದರೆ, 1.90 ಲಕ್ಷ ಕ್ಯುಸೆಕ್ ಹೊರ ಹರವು ಇತ್ತು. ಗುರುವಾರ ಬೆಳಿಗ್ಗೆ ಒಳಹರಿವು ಹೆಚ್ಚಳಗೊಂಡಿದ್ದರಿಂದ‌ ಹೊರ ಹರಿವು ಹೆಚ್ಚಳ ಮಾಡಲಾಗಿದೆ. 

ನದಿ ಪಾತ್ರದಲ್ಲಿ ಆತಂಕ:
ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹದ ಆತಂಕ ಕಾಣಿಸಿಕೊಂಡಿದ್ದು, ನದಿ ದಡದಲ್ಲಿರುವ ನೀರಿನ ಪೈಪ್, ಮೋಟಾರ ಅನ್ನು ರೈತರು ಹೊರ ತೆಗೆಯುತ್ತಿದ್ದಾರೆ. ನೀರಿನಲ್ಲಿ ಮುಳುಗಡೆಯಾಗಿದೆ ಮೋಟಾರು ಗಳು ಕೆಟ್ಟು ಹೋಗುವ ಸಂಭವವಿದೆ.

2.50 ಲಕ್ಷ ಕ್ಯುಸೆಕ್ ಬಂದರೆ ಸೇತುವೆ ಮುಳುಗಡೆ: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 2.50 ಲಕ್ಷ ಕ್ಯುಸೆಕ್ ನೀರು ಹರಿಸಿದರೆ, ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ) ಸೇತುವೆ ಮುಳುಗಡೆಯಾಗಲಿದೆ. ಇದರಿಂದ ಯಾದಗಿರಿ, ರಾಯಚೂರು, ಕಲಬುರಗಿ ಮಾರ್ಗ ಬಂದ್ ಆಗಲಿದೆ. ತಿಂಥಣಿ ಸೇತುವೆ ಮೂಲಕ ಸುತ್ತುವರೆದು ಬರಬೇಕಾಗುತ್ತದೆ. ನದಿ ಪಾತ್ರದಲ್ಲಿ ಭತ್ತ, ಹತ್ತಿ ಬೆಳೆಯಲಾಗಿದ್ದು, ಮುಳಗಡೆ ಆತಂಕ ಕಾಡುತ್ತಿದೆ.

'ಪ್ರತಿ ವರ್ಷ ಕೃಷ್ಣಾ ನದಿಗೆ ಪ್ರವಾಹ ಬಂದಾಗ ಕೊಳ್ಳೂರು ‍(ಎಂ) ಗ್ರಾಮದ ನದಿ ಪಾತ್ರದ ಜಮೀನುಗಳು ಮುಳುಗಡೆಯಾಗಲಿವೆ‌. ಗ್ರಾಮಸ್ಥರು ಹಲವಾರು ಬಾರಿ ಸೇತುವೆಗೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲು ಒತ್ತಾಯಿಸಿದರೂ ಯಾವುದೇ ಉಪಯೋಗವಿಲ್ಲದಂತಾಗಿದೆ'‌ಎಂದು ಕೊಳ್ಳೂರು ನಿವಾಸಿ ಶಿವಾರೆಡ್ಡಿ ಪಾಟೀಲ‌ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು