ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗದಿತ ಅವಧಿಯಲ್ಲಿ ಗುರಿ ಸಾಧಿಸಿ: ಜಿಲ್ಲಾಧಿಕಾರಿ

ಕ.ಕ ಪ್ರದೇಶ ಅಭಿವೃದ್ಧಿ ಮಂಡಳಿಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ
Last Updated 25 ಸೆಪ್ಟೆಂಬರ್ 2020, 1:35 IST
ಅಕ್ಷರ ಗಾತ್ರ

ಯಾದಗಿರಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಡಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವ ಮೂಲಕ ನಿಗದಿತ ಗುರಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾಮಗಾರಿಗಳ ಪ್ರಗತಿ ಪರೀಶಿಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಮಂಡಳಿಯಿಂದ ಜಿಲ್ಲೆಗೆ ವಾರ್ಷಿಕ ₹155.05 ಕೋಟಿ ಆರ್ಥಿಕ ಗುರಿ ನಿಗದಿಪಡಿಸಲಾಗಿದೆ. ಅದರಂತೆ 621 ಕಾಮಗಾರಿಗಳ ಭೌತಿಕ ಗುರಿಯನ್ನು ನಿಗದಿ ಪಡಿಸಲಾಗಿರುತ್ತದೆ. ಈ ಅನುದಾದಡಿ ಕೈಗೊಂಡಿರುವ ಸಿ.ಸಿ ರಸ್ತೆ, ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡ, ರಸ್ತೆಗಳ ನಿರ್ಮಾಣ, ಕಾಂಪೌಂಡ್ ನಿರ್ಮಾಣ, ಶೌಚಾಲಯ ಕಟ್ಟಡ, ನಮ್ಮ ಹೊಲ ನಮ್ಮ ದಾರಿ ಹಾಗೂ ಕ್ರೀಡಾಂಗಣ ಸೇರಿದಂತೆ ಇತರೆ ಕಾಮಗಾರಿಗಳನ್ನು ಕಾಲ ವಿಳಂಬ ಮಾಡದೆ ನಿರ್ವಹಣೆ ಮಾಡಬೇಕು’ ಎಂದು ತಿಳಿಸಿದರು.

‘ಕೆಆರ್‌ಐಡಿಎಲ್ ಇಲಾಖೆಗೆ 183 ಕಾಮಗಾರಿಗಳ ವಾರ್ಷಿಕ ಗುರಿ ನಿಗದಿಪಡಿಸಲಾಗಿದ್ದು, ಈವರೆಗೆ 28 ಕಾಮಗಾರಿಗಳು ಪೂರ್ಣಗೊಂಡಿವೆ. ಲೋಕೋಪಯೋಗಿ ಇಲಾಖೆಗೆ ನಿಗದಿಪಡಿಸಲಾದ 121 ಕಾಮಗಾರಿಗಳ ವಾರ್ಷಿಕ ಭೌತಿಕ ಗುರಿಗೆ 28 ಕಾಮಗಾರಿಗಳ ಭೌತಿಕ ಗುರಿ ಸಾಧಿಸಲಾಗಿದೆ. ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ 216 ಕಾಮಗಾರಿಗಳ ಭೌತಿಕ ಗುರಿಯಲ್ಲಿ ಇಲ್ಲಿಯವರೆಗೆ 91 ಕಾಮಗಾರಿಗಳ ಭೌತಿಕ ಸಾಧನೆ ಮಾಡಲಾಗಿದೆ. ಅದರಂತೆ ಇನ್ನುಳಿದ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗೆ ಬಂದಿರುವ ಅನುದಾನ ಸರಿಯಾಗಿ ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸಬೇಕು’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ನಿರ್ಮಿತಿ ಕೇಂದ್ರಕ್ಕೆ ₹5 ಕೋಟಿ ಕಾಮಗಾರಿಗಳ ಗುರಿಗೆ 53 ಕಾಮಗಾರಿಗಳ ವಾರ್ಷಿಕ ಗುರಿ ನಿಗದಿಪಡಿಸಿತ್ತು. ನಿಗದಿತ ಗುರಿಯಲ್ಲಿ ಪ್ರಸ್ತುತ ಒಟ್ಟು 17 ಗುರಿಯ ಸಾಧನೆ ಮಾಡಲಾಗಿದೆ. ಇನ್ನೂ ಹಲವು ಕಾಮಗಾರಿಗಳು ಚಾಲನೆಯಲ್ಲಿವೆ’ ಎಂದು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಕಿರಣಕುಮಾರ ಸಭೆಯಲ್ಲಿ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿಮುಖ್ಯ ಯೋಜನಾಧಿಕಾರಿ ಸುನೀಲ್‌ಬಿಸ್ವಾಸ್, ಮಂಡಳಿಯ ಯಾದಗಿರಿ ಕೋಶದ ತಾಂತ್ರಿಕ ಸಲಹೆಗಾರ ಸಂಗಮೇಶ ಗುಬ್ಬೇವಾಡ, ಲೋಕೊಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ದೇವಿದಾಸ್ ಚವ್ಹಾಣ, ಕೆಆರ್‌ಐಡಿಎಲ್ ಕಾರ್ಯಪಾಲಕ ಎಂಜಿನಿಯರ್‌ ಶೇಖ ಸಲಿಮುದ್ದೀನ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಸತೀಶ್ ಗುದಿಗೆನವರ, ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಶಂಕರ ಎ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಭಗವಂತ ಅನವಾರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾರಾಯಣಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾಕರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT