ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಠರೋಗಿಗಳ ವಸತಿಗೃಹಗಳು ಶಿಥಿಲ

ಈರೇಡದ ನೇತಾರ ಕೊಲೂರು ಮಲ್ಲಪ್ಪನವರ ಆಶಯ
Last Updated 7 ನವೆಂಬರ್ 2018, 11:48 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಹೊರವಲಯದಲ್ಲಿ ನಿರ್ಮಾಣಗೊಂಡಿರುವ ಕುಷ್ಠರೋಗಿಗಳ ಕಾಲೊನಿಯಲ್ಲಿರುವ ವಸತಿಗೃಹಗಳೆಲ್ಲ ಶಿಥಿಲಗೊಂಡಿದ್ದು, ಇಲ್ಲಿ ಆಶ್ರಯ ಪಡೆದುಕೊಂಡಿರುವ ರೋಗಿಗಳು ಸಂಕಷ್ಟಪಡುತ್ತಿದ್ದಾರೆ.

ನೇತಾರ ಕೊಲೂರು ಮಲ್ಲಪ್ಪ ಸಂಸದರಾಗಿದ್ದ ಅವಧಿಯಲ್ಲಿ ವಿಶೇಷ ಆಸಕ್ತಿ ವಹಿಸಿ ಕುಷ್ಠರೋಗಿಗಳಿಗೆ ನೆಲೆ ಕಲ್ಪಿಸಿದ್ದರು.10.15 ಎಕರೆ ಪ್ರದೇಶದಲ್ಲಿ ಒಟ್ಟು 52 ವಸತಿಗೃಹಗಳನ್ನು ನಿರ್ಮಿಸಿ ಸಕಲ ಸೌಕರ್ಯವನ್ನು ಒದಸಿಕೊಡುವ ಮೂಲಕ ಕುಷ್ಠರೋಗಿಗಳಿಗೆ ಆಸರೆಯಾಗಿದ್ದರು. ಒಟ್ಟು 55 ಎಕರೆ ಪ್ರದೇಶದಲ್ಲಿ ಗುಡಿಕೈಗಾರಿಕೆಗಳನ್ನು ಸ್ಥಾಪಿಸಿ ಕುಷ್ಠರೋಗಿಗಳನ್ನು ಸ್ವಾವಲಂಬಿಗಳನ್ನಾಗಿ ರೂಪಿಸಲು ಯೋಜಿಸಿದ್ದರು.

ಅವರ ಅವಿರತ ಶ್ರಮದಿಂದಲೇ ಇಡೀ ದೇಶ, ರಾಜ್ಯ ಮತ್ತು ಜಿಲ್ಲೆಗಳಲ್ಲಿ ಕುಷ್ಠರೋಗ ನಿರ್ಮೂಲನೆ ವಿರುದ್ಧ ಆಗಿನ ಇಂದಿರಾಗಾಂಧಿ ನೇತೃತ್ವದಲ್ಲಿ ಸರ್ಕಾರ ಜಾರಿಗೊಳಿಸಿದ 20 ಅಂಶಗಳ ಆರೋಗ್ಯ ಕಾರ್ಯಕ್ರಮದಲ್ಲಿ ಪ್ರಧಾನ ಗುರಿಯನ್ನಾಗಿಸಿಕೊಳ್ಳಲಾಯಿತು. ಅದಕ್ಕಾಗಿ ಇಂದಿರಾಗಾಂಧಿ ಸರ್ಕಾರದಲ್ಲಿ ಆರೋಗ್ಯಮಂತ್ರಿಯಾಗಿದ್ದ ಮೊಹಸಿನಾ ಕಿದ್ವಾಯಿ ಅವರಿಗೆ ಕೊಲೂರು ಮಲ್ಲಪ್ಪ ವಿಶೇಷ ಮನವಿ ಸಲ್ಲಿಸಿ ರೋಗ ನಿರ್ಮೂಲನೆಗೆ ಆದ್ಯತೆ ನೀಡುವಂತೆ ಒತ್ತಡ ಹೇರಿದ್ದರು.

‘ಕುಷ್ಠ’ ಅಂಟುರೋಗವಲ್ಲ. ಆದರೂ ಈ ರೋಗ ಪೀಡಿತರು ಸಮಾಜದಲ್ಲಿ ಅನುಭವಿಸುವ ಕೀಳರಿಮೆ ಎಂಥದ್ದು ಎಂಬುದನ್ನು ಕೊಲೂರು ಮಲ್ಲಪ್ಪ ಅರಿತಿದ್ದರು. ಹಾಗಾಗಿ, ಕುಷ್ಠರೋಗಿಗಳಿಗೆ ಆಶ್ರಯ ಕಾಲೊನಿ ಸ್ಥಾಪಿಸಿ ಚಿಕಿತ್ಸಾ ಕ್ರಮ ಏರ್ಪಡಿಸಿದ್ದರು. ಕುಷ್ಠರೋಗಿಗಳ ಚಿಕಿತ್ಸಾ ಆರೈಕೆ ಮಾಡಲು ವಡಗೇರಾದ ವೈದ್ಯ ಸುಭಾಷ ಕಿರಣಗಿ ಅವರನ್ನು ವಿಶೇಷ ತರಬೇತಿಗಾಗಿ ಮದ್ರಾಸಿಗೆ ಕಳುಹಿಸಿಕೊಟ್ಟಿದ್ದರು. ತರಬೇತಿಯ ನಂತರ ಅವರು ಕುಷ್ಠರೋಗಿಗಳಿಗೆ ಆರೈಕೆ ಮಾಡಿದ್ದರು.

ರೋಗ ವಾಸಿಯಾಗುವುದಿಲ್ಲ. ಆದರೆ, ರೋಗ ವ್ಯಾಪಿಸದಂತೆ ಚಿಕಿತ್ಸೆ ನೀಡಲಾಗುತ್ತದೆ. ಈ ರೀತಿಯಲ್ಲಿ ಆರೈಕೆ ನಡೆದಿದ್ದರಿಂದ ಕುಷ್ಠರೋಗ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಂದಿದೆ. ಈಗ ಲೊನಿಯಲ್ಲಿ ಒಟ್ಟು 52 ಕುಷ್ಠರೋಗಿಗಳು ನೆಲೆಸಿದ್ದಾರೆ. ಆದರೆ, 20 ವರ್ಷಗಳ ಹಿಂದೆ ಅವರಿಗೆ ಸರ್ಕಾರ ನಿರ್ಮಿಸಿಕೊಟ್ಟಿದ್ದ ಮನೆಗಳು ಸಂಪೂರ್ಣ ಶಿಥಿಲಗೊಂಡಿವೆ. ಛಾವಣಿ ಮತ್ತು ಗೋಡೆಗಳಲ್ಲಿ ಬೃಹತ್‌ ಬಿರುಕುಗಳು ಕಾಣಿಸಿಕೊಂಡಿವೆ. ಇದರಿಂದಾಗಿ ಕುಷ್ಠರೋಗಿಗಳು ಚಳಿಗಾಲದಲ್ಲೂ ಸಂಕಷ್ಟಕ್ಕೊಳಗಾಗಿದ್ದಾರೆ.

ಕೊಲೂರು ಮಲ್ಲಪ್ಪ ಅವರ ನಂತರ ಕುಷ್ಠರೋಗಿಗಳ ಬಗ್ಗೆ ಜಿಲ್ಲೆಯ ಯಾವ ರಾಜಕಾರಣಿಯೂ ಕಿಂಚಿತ್ತು ಕಾಳಜಿ ತೋರಿಲ್ಲ. ಜಿಲ್ಲಾಡಳಿತ ಕುಷ್ಠರೋಗಿಗಳು ನೆಲೆಸಿರುವ ಕಾಲೊನಿಯತ್ತ ಕಣ್ಣೂ ಹಾಯಿಸಿಲ್ಲ ಎನ್ನುತ್ತಾರೆ ಇಲ್ಲಿನ ಕುಷ್ಠರೋಗಿಗಳು.

₹3.50 ಲಕ್ಷ ವೆಚ್ಚದಲ್ಲಿ ಶೌಚಾಲಯ

ಕುಷ್ಠರೋಗಿಗಳ ಕಾಲೊನಿಯಲ್ಲಿ ನಗರಸಭೆ ಶೇ 3ರ ಮೀಸಲು ಯೋಜನೆಯಡಿ ಒಟ್ಟು ₹3.50 ಲಕ್ಷ ವೆಚ್ಚದಲ್ಲಿ ನೀರಿನ ಟ್ಯಾಂಕ್‌ ಹಾಗೂ ಮೂರು ಶೌಚಾಲಯ ನಿರ್ಮಿಸಿಕೊಟ್ಟಿದೆ. ಜತೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದೆ. ಆದರೂ, ಚರಂಡಿ ವ್ಯವಸ್ಥೆ ಇಲ್ಲದೇ ಕುಷ್ಠರೋಗಿಗಳು ಕೊಳಚೆ ಪ್ರದೇಶದಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT