ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯಸ್ಸಾದ ಗೋವುಗಳನ್ನು ಗೋ ಶಾಲೆಗೆ ಬಿಡಿ

ರಾಚನಹಳ್ಳಿ; ಗೋಶಾಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಂಕುಸ್ಥಾಪನೆ
Last Updated 8 ಜುಲೈ 2022, 16:27 IST
ಅಕ್ಷರ ಗಾತ್ರ

ಯಾದಗಿರಿ: ‘ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರದಿಂದ ಗೋಶಾಲೆ ಆರಂಭಿಸಲಾಗಿದೆ. ಸಾಕಲು ಆಗದವರು ಇಲ್ಲಿ ತಂದು ಬಿಡಬಹುದು. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದು, ವಯಸ್ಸಾದ ಗೋವುಗಳನ್ನು ಕಸಾಯಿಖಾನೆಗೆ ರವಾನಿಸದೆ ತಂದು ಬಿಡಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ.ಚವಾಣ್ ರೈತರಿಗೆ ಸಲಹೆ ನೀಡಿದರು.

ತಾಲ್ಲೂಕಿನ ರಾಚನಹಳ್ಳಿ ಗ್ರಾಮದಲ್ಲಿ ನಿರ್ಮಿಸಲಿರುವ ಗೋಶಾಲೆ ನಿರ್ಮಾಣ ಕಾಮಗಾರಿಗೆ ಯಾದಗಿರಿ ನಗರದ ಜಿಲ್ಲಾ ಪಾಲಿ ಕ್ಲಿನಿಕ್‌ನಲ್ಲಿ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‌ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಗೋ ಹತ್ಯೆ ನಿಷೇಧ ಜಾರಿಗೆ ತರಲಾಗಿದೆ. ಕರ್ನಾಟಕ ಜಾನುವಾರು ವಧೆ ಪ್ರತಿಬಂಧಕ ಮತ್ತು ಸಂರಕ್ಷಣೆ ಕಾಯ್ದೆ-2020 ( ಗೋ ಹತ್ಯೆ ನಿಷೇಧ ಕಾಯ್ದೆ) ಜಾರಿಯಾದ ಬಳಿಕ ಗೋ ಹತ್ಯೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ವಯಸ್ಸಾದ ಗೋವುಗಳನ್ನು ಸಾಕಲು ಕಷ್ಟವಾಗಿ ಕಸಾಯಿಖಾನೆಗೆ ಕಳುಹಿಸದಬೇಡಿ. ಅಂಥ ಗೋವುಗಳನ್ನು ಗೋಶಾಲೆಗೆ ಕಳುಹಿಸಿ. ಕಾಯ್ದೆ ಜಾರಿ ಬಳಿಕ ಜಿಲ್ಲೆಗೊಂದು ಸೇರಿದಂತೆ ರಾಜ್ಯದಲ್ಲಿ ಒಟ್ಟು 100 ಗೋ ಶಾಲೆ ಸ್ಥಾಪಿಸಲಾಗುತ್ತದೆ. ಈ ನಿಟ್ಟಿನಲ್ಲಿ ಯಾದಗಿರಿ ತಾಲ್ಲೂಕಿನ ರಾಚನಹಳ್ಳಿ ಹಾಗೂ ಸುರಪುರ ತಾಲ್ಲೂಕಿನ ಗುಡಿಹಾಳ (ಜೆ)ಯಲ್ಲಿ ಒಂದು ಗೋಶಾಲೆ ತೆರೆಯಲಾಗುತ್ತದೆ ಎಂದು ವಿವರಿಸಿದರು.

25 ಎಕರೆ ಪ್ರದೇಶದಲ್ಲಿ ರಾಚನಹಳ್ಳಿಯಲ್ಲಿ ಗೋಶಾಲೆ ನಿರ್ಮಿಸುತ್ತಿದ್ದು, ಈಗಾಗಲೇ ಸರ್ಕಾರದಿಂದ ₹50 ಲಕ್ಷ ಬಿಡುಗಡೆ ಮಾಡಲಾಗಿದೆ. ಬಿಡಾದಿ ದನಗಳನ್ನು ಗೋಶಾಲೆಯಲ್ಲಿ ಬಿಡಬಹುದು ಎಂದು ಹೇಳಿದರು.

ಉತ್ತರ ಪ್ರದೇಶ, ಗುಜರಾತ್‌, ಮಹಾರಾಷ್ಟ್ರ, ತೆಲಂಗಾಣ ಮುಂತಾದ ರಾಜ್ಯಗಳಿಗೆ ಹೋಗಿ ಅಲ್ಲಿಯ ಗೋಶಾಲೆಗಳನ್ನು ಅಧ್ಯಯನ ಮಾಡಿ, ನಮ್ಮ ರಾಜ್ಯದಲ್ಲಿ ಗೋಶಾಲೆ ನಿರ್ಮಿಸಲಾಗುತ್ತಿದೆ. ಸಗಣಿ, ಮೂತ್ರದಿಂದ ಹಲವಾರು ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತದೆ. ಈಗ ಶಂಕುಸ್ಥಾಪನೆಯಾಗಿರುವ ಗೋಶಾಲೆ 3 ತಿಂಗಳೊಳಗೆ ಉದ್ಘಾಟನೆಯಾಗಬೇಕು ಅಧಿಕಾರಿಗಳಿಗೆ ಸೂಚಿಸಿದರು.

ಪ್ರಾಣಿ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದ್ದು, ಜಾನುವಾರುಗಳಿಗೆ ಯಾವುದೇ ರೋಗ-ರುಜಿನ ಬಂದಲ್ಲಿ ಸಹಾಯವಾಣಿ- 1962ಗೆ ಕರೆ ಮಾಡಿದಲ್ಲಿ, ಆಂಬುಲೆನ್ಸ್ ಬಂದು ಜಾನುವಾರುಗಳನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ರೈತರು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದರು.

ಇದಕ್ಕೂ ಮುನ್ನ ಪಾಲಿ ಕ್ಲಿನಿಕ್‌ನಲ್ಲಿ ಆಯೋಜಿಸಿದ್ದ ಹೋಮ ಹವನದಲ್ಲಿ ಸಚಿವರು ಪಾಲ್ಗೊಂಡಿದ್ದರು. 1962ಆಂಬುಲೆನ್ಸ್ ಪರಿಶೀಲಿಸಿದರು. ಸಸಿಗೆ ನೀರೆದರು. ನಂತರ ಗೋವಿಗೆ ಪೂಜೆ ಮಾಡಿ ಸಿಹಿ ತಿನ್ನಿಸಿದರು.

ರಾಚನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶಂಕುಸ್ಥಾಪನೆ ಕಾರ್ಯಕ್ರಮ ಮಳೆಯಿಂದ ರದ್ದಾಗಿದ್ದರಿಂದ ಪಾಲಿಕ್ಲಿನಿಕ್‌ನಲ್ಲಿ ಅಯೋಜಿಸಲಾಗಿತ್ತು. ಸಾರ್ವಜನಿಕರ ಸಂಖ್ಯೆಯೂ ವಿರಳವಾಗಿತ್ತು.
ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ, ಉಪವಿಭಾಗಾಧಿಕಾರಿ ಶಾ ಆಲಂ, ಸಚಿವರ ಆಪ್ತ ಕಾರ್ಯದರ್ಶಿ ಭಾಸ್ಕರ್ ನಾಯ್ಕ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ರಾಜು ದೇಶಮುಖ, ಪಾಲಿ ಕ್ಲಿನಿಕ್‌ನ ಪ್ರಭಾರಿ ಉಪನಿರ್ದೇಶಕ ಡಾ. ಶರಣ ಭೂಪಾಲರೆಡ್ಡಿ, ಯಾದಗಿರಿ ಕುರಿ ಮಂಡಳಿಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ, ಸೈದಾಪುರ ಗ್ರಾ. ಪಂ ಅಧ್ಯಕ್ಷ ಮಾಳಪ್ಪ ಅರಿಕೇರಿ, ಉಪಾಧ್ಯಕ್ಷೆ ನೇತ್ರಾವತಿ ರಾಜು ದೊರೆ ಇದ್ದರು. ಡಾ. ಸಂಗೀತಾ ವಂದಿಸಿದರು.

***

ಅಧಿಕಾರಿಗಳಿಗೆ ಮುಜುಗರ

ಗೋ ಶಾಲೆಗೆ ಶಂಕುಸ್ಥಾಪನೆ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮವಾಗಿದ್ದರೂ ಬಿಜೆಪಿ ಪಕ್ಷದ ರಾಜ್ಯಮಟ್ಟದ ಕಾರ್ಯದರ್ಶಿ, ಜಿಲ್ಲಾ ಘಟಕದ ಅಧ್ಯಕ್ಷ ಸೇರಿ ಪದಾಧಿಕಾರಿಗಳು ವೇದಿಕೆಯಲ್ಲಿ ಆಸೀನರಾಗಿದ್ದರು. ಇದರಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು ಮುಜುಗರಕ್ಕೆ ಒಳಗಾದ ಪ್ರಸಂಗ ಪಾಲಿಕ್ಲಿನಿಕ್‌ ಆವರಣದಲ್ಲಿ ನಡೆಯಿತು.

ಸರ್ಕಾರಿ ಅಧಿಕಾರಿಗಳಿಗಿಂತ ಬಿಜೆಪಿ ಪಕ್ಷದ ಪ್ರಮುಖರು ವೇದಿಕೆಯಲ್ಲಿ ಹೆಚ್ಚಿದ್ದರು. ಪಕ್ಷದ ಮುಖಂಡರ ಜತೆ ಎರಡನೇ ಸಾಲಿನಲ್ಲಿ ಅಧಿಕಾರಿಗಳು ಕುಳಿತುಕೊಂಡಿದ್ದರು. ಇದು ಸರ್ಕಾರಿ ಕಾರ್ಯಕ್ರಮವೋ ಅಥವಾ ಪಕ್ಷದ ಕಾರ್ಯಕ್ರಮವೋ ಎಂದು ಸಾರ್ವಜನಿಕರು ಪ್ರಶ್ನಿಸಿಕೊಳ್ಳುವಂತಾಗಿತ್ತು.

ಪಶು ಇಲಾಖೆಯ ಅಧಿಕಾರಿಗಳು ಸರಿಯಾಗಿ ಆಸ್ಪತ್ರೆಗೆ ಬರಬೇಕು. ತಾಲ್ಲೂಕು ಕೇಂದ್ರ, ಗ್ರಾಮಗಳಿಗೆ ತೆರಳಬೇಕು. ಈ ಮೂಲಕ ಸೇವೆ ನೀಡಬೇಕು
- ಪ್ರಭು ಚವಾಣ್‌, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT