ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್‌: ಮೀನುಗಾರರ ಮೇಲೆ ಚಿರತೆ ದಾಳಿ

Last Updated 28 ಜನವರಿ 2021, 17:13 IST
ಅಕ್ಷರ ಗಾತ್ರ

ಗುರುಮಠಕಲ್: ಮೀನುಗಳಿಗೆ ಆಹಾರ ನೀಡಲು ಕೆರೆಯ ಪಕ್ಕದಲ್ಲಿ ಮಲಗಿದ್ದ ಮೀನುಗಾರರು ಹಾಗೂ ರೈತರು ಗುಂಪಿನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ಒಬ್ಬರ ಕೈ ಹಾಗೂ ಮತ್ತೊಬ್ಬರ ಕಾಲಿಗೆ ಗಂಭೀರ ಗಾಯಗಳಾದ ಘಟನೆ ತಾಲ್ಲೂಕಿನ ಮಿನಾಸಪುರ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಜರುಗಿದೆ.

ಗಾಯಗೊಂಡವರನ್ನು ಮಿನಾಸಪುರ ಗ್ರಾಮದ ಚಂದ್ರಪ್ಪ ರಾಜಮೂರಿ, ರಾಜಪ್ಪ ರಾಜಮೂರಿ ಎಂದು ಗುರುತಿಸಲಾಗಿದೆ. ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮದ ಹೊರವಲಯದ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲಾಗುತ್ತಿದ್ದು, ಪ್ರತಿದಿನ ಬೆಳಿಗ್ಗೆ ಮೀನಿಗೆ ಆಹಾರ ಹಾಕಲಾಗುತ್ತದೆ. ಆಹಾರವಾಗಿ ಸೆಗಣಿ, ಅಕ್ಕಿ, ಗೋಧಿ, ಶೇಂಗದ ಗಾಣದಪುಡಿ, ಕವಳೆ ಹೊಟ್ಟಿ, ಬೆಲ್ಲದ ಮಿಶ್ರಣವನ್ನು ರಾತ್ರಿ ಸಿದ್ಧಗೊಳಿಸಿ ಬೆಳಿಗ್ಗೆ ಕೆರೆಯಲ್ಲಿ ಮೀನುಗಳಿಗೆ ನೀಡಲಾಗುತ್ತದೆ. ಆದರೆ, ನೆನೆಯಲೆಂದು ಸಿದ್ಧಗೊಳಿಸುವ ಮೀನಿನ ಆಹಾರವನ್ನು ಈಚೆಗೆ ಕಾಡು ಹಂದಿಗಳು ರಾತ್ರಿ ಹಾಳು ಮಾಡುತ್ತಿದ್ದವು.

ಆದ್ದರಿಂದ ಐದು ಜನರು ಬುಧವಾರ ರಾತ್ರಿ ಮಿಶ್ರಣವನ್ನು ತಯಾರಿಸಿದ ನಂತರ ಅಲ್ಲೇ ಮಲಗಿದ್ದರು. ಬೆಳಗಿನ ಜಾವ ಇರುವೆ ಕಚ್ಚಿದ್ದರಿಂದ ಎಚ್ಚರಗೊಂಡ ಗುಂಪು ಬಟ್ಟೆಗಳನ್ನು ಜಾಡಿಸಿಕೊಳ್ಳುವಾಗ ಬೆಟ್ಟದ ಮೇಲಿನಿಂದ ಕೆರೆಯ ನೀರು ಕುಡಿಯಲು ಚಿರತೆ ಇಳಿದು ಬಂದಿದೆ. ಗುಂಪಿನ ಪಕ್ಕದಿಂದಲೇ ಕೆರೆಗೆ ಹೋದ ಚಿರತೆ, ಇವರ ಸದ್ದುಕೇಳಿ ಹಿಂದಿರುಗಿ ಬಂದು ದಾಳಿ ಮಾಡಿದೆ.

ದಾಳಿ ಮಾಡುತ್ತಿದ್ದಂತೆ ಕೈಯನ್ನು ಅಡ್ಡ ಹಿಡಿದು ತಡೆಯಲು ಮುಂದಾದ ಚಂದ್ರಪ್ಪ ರಾಜಮೂರಿ ಅವರ ಕೈಯನ್ನು ಕಚ್ಚಿದ ಚಿರತೆ, ಪಕ್ಕದಲ್ಲಿದ್ದ ರಾಜಪ್ಪ ರಾಜಮೂರಿ ಅವರ ಕಾಲಿಗೆ ಪರಚಿದೆ. ಕೂಡಲೇ ಚಿರತೆಯನ್ನು ಹಿಡಿದು ನೆಲಕ್ಕುರುಳಿಸಿ ಬಿದಿರಿನ ಕಟ್ಟಿಗೆಯಿಂದ ಹೊಡೆಯಲಾಯಿತು. ಹೊಡೆತ ಬೀಳುತ್ತಿದ್ದಂತೆ ಪೊದೆಯೊಳಗೆ ನುಸುಳಿ ಬೆಟ್ಟದ ಕಡೆ ಚಿರತೆ ಓಡಿತು ಎಂದು ಹಣಮಂತ ಅಗಸರ ಅವರು ಘಟನೆಯ ಮಾಹಿತಿ ನೀಡಿದರು.

ಈ ಮೊದಲು ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ನಡೆಸಿತ್ತು. ಮನುಷ್ಯರ ಮೇಲೆ ದಾಳಿ ಮಾಡಿದ ಪ್ರಕರಣ ಇದೇ ಮೊದಲು. ದಾಳಿಯಿಂದ ಗ್ರಾಮಸ್ಥರಲ್ಲಿ ಭೀತಿ ಮೂಡಿದೆ. ರಾತ್ರಿಯಲ್ಲಿ ಜಮೀನಿನ ರಕ್ಷಣೆಗೆ ಹೋಗುವುದು ಅನಿವಾರ್ಯವಾದ್ದರಿಂದ, ಕೂಡಲೇ ಅರಣ್ಯ ಇಲಾಖೆಯವರು ಚಿರತೆಯನ್ನು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT