ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಹರಿಗೆ ಕೋವಿಡ್ ಆರ್ಥಿಕ ಪ್ಯಾಕೇಜ್ ಸಿಗಲಿ

ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಸೂಚನೆ
Last Updated 2 ಜುಲೈ 2021, 3:57 IST
ಅಕ್ಷರ ಗಾತ್ರ

ಯಾದಗಿರಿ: ಸರ್ಕಾರದಿಂದ ಸಿಗುವ ಕೋವಿಡ್ ಪ್ಯಾಕೇಜ್‌ ಅನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್ ಪ್ಯಾಕೇಜ್ ಅರ್ಹ ಫಲಾನುಭವಿಗಳ ವಿವರ ಕುರಿತು ಗುರುವಾರ ನಡೆದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್ ಸಪೋರ್ಟ್ ಪ್ಯಾಕೇಜ್‌ ನೀಡುವ ನಿಟ್ಟಿನಲ್ಲಿ ನೋಂದಣಿ ಮಾಡಿಕೊಂಡ ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮಾವಣೆ ಹಾಗೂ ಫಲಾನುಭವಿಗಳ ವಿವರಗಳನ್ನು ಅಧಿಕಾರಿಗಳಿಂದ ಮಾಹಿತಿ ಪಡೆದರು.

‘ಜಿಲ್ಲೆಯಲ್ಲಿ ಒಟ್ಟು 64 ಸಾವಿರ ಕಟ್ಟಡ ಕಾರ್ಮಿಕರಿದ್ದಾರೆ. ಅದರಲ್ಲಿ 18,720 ಜನರಿಗೆ ಹಣ ಜಮಾ ಆಗಿದ್ದು, ಇನ್ನುಳಿದವರಿಗೆ ಶೀಘ್ರದಲ್ಲೇ ಜಮಾ ಆಗುತ್ತದೆ. 6,122 ಅಸಂಘಟಿತ ಕಾರ್ಮಿಕರಿದ್ದು, ಅವರಲ್ಲಿ 4,515 ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗಿದೆ. ಅಸಂಘಟಿತ ಕಾರ್ಮಿಕರಿಗೆ ಜುಲೈ 20ರವರೆಗೆ ಕೊನೆಯ ದಿನಾಂಕ ನಿಗದಿ ಪಡಿಸಿ ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿಯವರೆಗೆ 13,269 ಅರ್ಜಿಗಳು ಬಂದಿದ್ದು, ಅದರಲ್ಲಿ 5,200 ಅರ್ಜಿ ಗಣನೆಗೆ ಬಂದಿವೆ. ಇನ್ನುಳಿದ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತದೆ’ ಎಂದು ಜಿಲ್ಲಾ ಕಟ್ಟಡ ಕಾರ್ಮಿಕ ಅಧಿಕಾರಿ ಶ್ವೇತಾ ಎಸ್., ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಒಟ್ಟು 1,363 ಅಂಗನವಾಡಿ ಕಾರ್ಯಕರ್ತೆಯರಲ್ಲಿ 902 ಫಲಾನುಭವಿಗಳಿಗೆ 1,336 ಸಹಾಯಕ ಕಾರ್ಯಕರ್ತರಲ್ಲಿ 857 ಫಲಾನುಭವಿಗಳಿಗೆ ಪರಿಹಾರ ನೀಡಿದ್ದು, ಇನ್ನುಳಿದವರಿಗೆ ನೀಡಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪ್ರಭಾಕರ ಎಸ್ ಕವಿತಾಳ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 1,81,426 ಶಾಲಾ ವಿದ್ಯಾರ್ಥಿಗಳಿದ್ದಾರೆ. ಜೂನ್, ಜುಲೈ ತಿಂಗಳಿನ ಕೆನೆಭರಿತ ಹಾಲಿನ ಪುಡಿ ಒಂದು ಕೆ.ಜಿ.ಗೆ ₹75 ರಂತೆ ಇದನ್ನು ಕೆಎಂಎಫ್ ಮೂಲಕ ಎಲ್ಲಾ ಶಾಲೆಗಳಿಗೆ ಸರಬರಾಜು ಮಾಡಲಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಕಣ್ಣನ್ ಪ್ರಭು ತಿಳಿಸಿದರು.

‘ಜಿಲ್ಲಾ ಕೌಶಲ ಅಭಿವೃದ್ಧಿ ಇಲಾಖೆಯಲ್ಲಿ ಒಟ್ಟು 3,091 ಅರ್ಜಿಗಳಲ್ಲಿ 2,139 ಫಲಾನುಭವಿಗಳಿಗೆ ಪರಿಹಾರ ನೀಡಿದೆ. ಇನ್ನುಳಿದವರಿಗೆ ಶೀಘ್ರದಲ್ಲೇ ನೀಡುತ್ತೇವೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಆಶಾ ಕಾರ್ಯಕರ್ತೆಯರ 995 ಫಲಾನುಭವಿಗಳಲ್ಲಿ 990 ಅರ್ಹರಿಗೆ ಆರ್ಥಿಕ ಪ್ಯಾಕೇಜ್‌ ನೀಡಲಾಗಿದೆ’ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದರು.

‘ಹೂ, ಹಣ್ಣು, ತರಕಾರಿ ಬೆಳೆಗಾರರಲ್ಲಿ ಒಟ್ಟು 431 ಫಲಾನುಭವಿಗಳಿದ್ದು, ಅವರಲ್ಲಿ 350 ಫಲಾನುಭವಿಗಳಿಗೆ ನೀಡಲಾಗಿದೆ. ಇನ್ನುಳಿದವರಿಗೆ ಪ್ಯಾಕೇಜ್ ತಲುಪಿಸಲಾಗುವುದು’ ಎಂದು ತೋಟಗಾರಿಕೆ ಉಪನಿರ್ದೇಶಕ ರಾಘವೇಂದ್ರ ಉಕ್ಕನಾಳ ಮಾಹಿತಿ ನೀಡಿದರು.

‘ಸಾರಿಗೆ ಇಲಾಖೆಯ 4,567 ಫಲಾನುಭವಿಗಳಿದ್ದು, ಇಲ್ಲಿಯವರೆಗೆ 1,135 ಅರ್ಜಿಗಳು ಬಂದಿವೆ. ಅದರಲ್ಲಿ 175 ಫಲಾನುಭವಿಗಳಿಗೆ ಪರಿಹಾರ ತಲುಪಿದೆ’ ಎಂದು ಇಲಾಖೆಯ ಅಧೀಕ್ಷಕ ಮೌನೇಶ ಮಾಹಿತಿ ನೀಡಿದರು.

‘ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಬಿಪಿಎಲ್ ಕಾರ್ಡ್, ಅಂತ್ಯೋದಯ ಹೊಂದಿದವರಿಗೆ ಪ್ರತಿ ತಿಂಗಳ 5 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗಿದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಡಾ.ವಿಕ್ರಮ್ ಸಿ., ಮಾಹಿತಿ ನೀಡಿದರು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ, ಯಾದಗಿರಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT