ಭಾನುವಾರ, ಜನವರಿ 24, 2021
18 °C
ಲಾಕ್‌ಡೌನ್‌ನಿಂದ ಚೇತರಿಕೆಯಾಗದ ಉದ್ಯಮ, ಕಾರ್ಮಿಕರಿಗೆ ತಪ್ಪದ ಪರದಾಟ

ಲಾಕ್‌ಡೌನ್‌ ಪರಿಣಾಮ: ಇನ್ನೂ ಹಳಿಗೆ ಬಾರದ ಕಟ್ಟಡ ಕಾರ್ಮಿಕರ ಬದುಕು

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೊರೊನಾ ಲಾಕ್‌ಡೌನ್‌ ಕಾರಣದಿಂದ ಕಟ್ಟಡ ಕಾರ್ಮಿಕರ ಬದುಕು ಇನ್ನೂ ಹಳಿಗೆ ಬಂದಿಲ್ಲ. ಅರ್ಧದಷ್ಟು ಕಾರ್ಮಿಕರಿಗೆ ಉದ್ಯೋಗ ಸಿಗುತ್ತಿಲ್ಲ.

ನಗರ ಸೇರಿ ಜಿಲ್ಲೆಯಾದ್ಯಂತ 32 ಸಾವಿರ ಕಟ್ಟಡ ಕಾರ್ಮಿಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 27 ಸಾವಿರ ಮಂದಿಗೆ ಲಾಕ್‌ಡೌನ್ ಅವಧಿಯ ಪರಿಹಾರ ಸಿಕ್ಕಿದೆ. 539 ಕಾರ್ಮಿಕರಿಗೆ ದಾಖಲಾತಿ ಸರಿ ಇಲ್ಲದ ಕಾರಣ ಅವರಿಗೆ ಪರಿಹಾರ ಬಂದಿಲ್ಲ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.

ಶೇ 50ರಷ್ಟು ಮಾತ್ರ ಕೆಲಸ: ಲಾಕ್‌ಡೌನ್‌ ತೆರವಾದ ನಂತರ ಬೇರೆ ಎಲ್ಲ ಉದ್ಯಮಗಳು ನಿಧಾನವಾಗಿ ಚೇತರಿಕೆ ಕಾಣುತ್ತಿದ್ದರೂ ಕಟ್ಟಡ ಉದ್ಯಮ ಮಾತ್ರ ಹಣಕಾಸಿನ ಮುಗ್ಗಟ್ಟಿನಿಂದ ಮೊದಲಿನಂತೆ ನಡೆಯುತ್ತಿಲ್ಲ. ಶೇ 50ರಷ್ಟು ಮಾತ್ರ ಕಟ್ಟಡ ಕೆಲಸಗಳು ಅಲ್ಲಲ್ಲಿ ನಡೆಯುತ್ತಿವೆ. ಎಲ್ಲ ಕಡೆ ಉದ್ಯಮಿಗಳಿಗೆ ನಷ್ಟವಾಗಿದ್ದರಿಂದ ಕಟ್ಟಡ ನಿರ್ಮಾಣಕ್ಕೆ ಮುಂದೆ ಬರುತ್ತಿಲ್ಲ. ಇದರಿಂದ ಕಟ್ಟಡ ಕಾಮಗಾರಿಗಳು ಹೆಚ್ಚಾಗಿ ನಡೆಯುತ್ತಿಲ್ಲ ಎಂದು ಮೇಸ್ತ್ರಿಗಳು ತಿಳಿಸುತ್ತಾರೆ.

‘ನಗರ ಪ್ರದೇಶದಲ್ಲಿ ಲಾಕ್‌ಡೌನ್‌ ಮುಂಚೆ ಕೈತುಂಬ ಕೆಲಸವಿತ್ತು. ಲಾಕ್‌ಡೌನ್‌ ಕಾರಣ 3 ತಿಂಗಳು ಅಕ್ಷರಶಃ ಕೈ ಕಟ್ಟಿ ಕೂರಬೇಕಾಯಿತು. ಈಗ ನಗರ ಪ್ರದೇಶಗಳಲ್ಲಿ ಮಾತ್ರ ಕಾಮಗಾರಿ ನಡೆಯುತ್ತಿದ್ದು, ಅದು ಅಷ್ಟಕಷ್ಟೇ ಎನ್ನುವಂತಾಗಿದೆ’ ಎಂದು ಕಟ್ಟಡ ಕಾರ್ಮಿಕರ ಮೇಸ್ತ್ರಿ ಬಸಪ್ಪ ಸಾಬಣ್ಣ ಪ್ರತಿಕ್ರಿಯಿಸುತ್ತಾರೆ.

‘ನಗರ ಪ್ರದೇಶದಲ್ಲಿಯೂ ಹಣಕಾಸು ಸ್ಥಿತಿಗತಿ ಉತ್ತಮವಾಗಿದ್ದವರು ಮಾತ್ರ ಮನೆಕಟ್ಟಲು ಮುಂದೆ ಬರುತ್ತಿದ್ದಾರೆ. ಸಣ್ಣಪುಟ್ಟ ಕೆಲಸ ಮಾಡುವವರು ಮನೆಕಟ್ಟುವ ಯೋಜನೆ ಮುಂದೂಡಿದ್ದಾರೆ. ಇದರಿಂದ ನಮಗೆ ಹೆಚ್ಚು ಕೆಲಸವಿಲ್ಲದಂತಾಗಿದೆ’ ಎನ್ನುತ್ತಾರೆ ಅವರು.

ಹಳ್ಳಿಗಳಲ್ಲಿ ಕಟ್ಟಡ ಕೆಲಸ ಸ್ಥಗಿತ: ಬಹುತೇಕ ಹಳ್ಳಿಗಳಲ್ಲಿ ಕಟ್ಟಡ ಕೆಲಸಗಳು ಸ್ಥಗಿತಗೊಂಡಿವೆ. ಆದರೆ, ಅಲ್ಲೊಂದು ಇಲ್ಲೊಂದಿಷ್ಟು ಜನ ಹಳ್ಳಿಗಳಲ್ಲಿ ಹೊಸ ಮನೆ ನಿರ್ಮಿಸಿಕೊಳ್ಳುತ್ತಾರೆ. ಹಳ್ಳಿಗಳಲ್ಲಿ ಕೆಲಸವಿಲ್ಲದಿದ್ದಾಗ ನಗರ ಪ್ರದೇಶಕ್ಕೆ ಹೋಗಿ ಬರುತ್ತೇವೆ ಎನ್ನುತ್ತಾರೆ ಕಟ್ಟಡ ಕಾರ್ಮಿಕರು.

‘ಜಿಲ್ಲೆಯಲ್ಲಿ ಅಧಿಕ ಮಳೆ, ಪ್ರವಾಹ ಬಂದು ರೈತರು ಬಹಳ ಹೈರಾಣಾಗಿದ್ದಾರೆ. ಮನೆ ಕಟ್ಟಿಕೊಳ್ಳಬೇಕು ಎನ್ನುವ ಯೋಜನೆ ಇದ್ದವರು ಹಿಂದೆ ಸರಿದಿದ್ದಾರೆ. ಹಳ್ಳಿಗಳಲ್ಲಿ ಕೆಲಸಗಳು ನಮಗೆ ಕಡಿಮೆ ಸಿಗುತ್ತಿವೆ. ಹೇಗೋ ನಗರ ಪ್ರದೇಶಗಳಲ್ಲಿ ಕೆಲಸ ನಡೆಯುತ್ತಿವೆ. ಇದರಿಂದ ಕಾರ್ಮಿಕರ ಜೀವನ ಸಾಗಿದೆ’ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಹಾಗೂ ಕಾರ್ಮಿಕರ ಒಕ್ಕೂಟ (ಐಎನ್‍ಟಿಯುಸಿ) ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೈಯ್ಯಾಳಪ್ಪ ಅಚಕೇರಿ ಬಸವಂತಪುರ ಮಾಹಿತಿ ನೀಡುತ್ತಾರೆ.

ಕಾರ್ಮಿಕರಲ್ಲದವರಿಗೆ ಕಾರ್ಡ್‌: ಶಹಾಪುರ, ಸುರಪುರ ಭಾಗದಲ್ಲಿ ಕಟ್ಟಡ ಕಾರ್ಮಿಕರಲ್ಲವರಿಗೆ ಕಾರ್ಡ್‌ ವಿತರಿಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ‘ಕಟ್ಟಡ ಕಾರ್ಮಿಕರು ಅಲ್ಲದೆ ಇರುವವರು ಕಚೇರಿಗೆ ತೆರಳಿ ಕಾರ್ಡ್‌ ಮಾಡಿಸಿಕೊಳ್ಳುತ್ತಿದ್ದಾರೆ. ಪ್ರಶ್ನಿಸಿದರೆ ನಮ್ಮನ್ನೇ ಬಾಯಿ ಮುಚ್ಚಿಸುತ್ತಾರೆ. ಇದರಿಂದ ಅರ್ಹರಿಗೆ ಸರ್ಕಾರದ ಸೌಲಭ್ಯ ಸಿಗುತ್ತಿಲ್ಲ’ ಎಂದು ನೋವು ವ್ಯಕ್ತಪಡಿಸುತ್ತಾರೆ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೈಯ್ಯಾಳಪ್ಪ ಅಚಕೇರಿ ಬಸವಂತಪುರ.

ಓಟಿಪಿ ಸಮಸ್ಯೆ: ಕಟ್ಟಡ ಕಾರ್ಮಿಕರು ಕಾರ್ಡ್‌ ಮಾಡಿಸಲು ಕಚೇರಿಗೆ ತೆರಳಿದರೆ ಓಟಿಪಿ ಬರುವುದಿಲ್ಲ. ಇದಕ್ಕಾಗಿ ದಿನಗಟ್ಟಲೆ ಕಾಯಬೇಕಾಗಿದೆ. ಇದರಿಂದಲೂ ಕಾರ್ಡ್‌ ಸಿಗುವುದು ತಡವಾಗುತ್ತಿದೆ. ಕಾರ್ಡ್‌ ಇದ್ದರೆ ಕಟ್ಟಡ ಕಾರ್ಮಿಕರಿಗೆ ಬಹಳಷ್ಟು ಲಾಭಗಳಿವೆ.

ಕಟ್ಟಡ ನಿರ್ಮಾಣದ ವೇಳೆ ಕಾರ್ಮಿಕರ ಸತ್ತರೆ ಸರ್ಕಾರರಿಂದ ₹50 ಸಾವಿರ ಪರಿಹಾರ ಬರುತ್ತದೆ. ಕಾರ್ಮಿಕರ ಮಕ್ಕಳು ಎಸ್ಸೆಸ್ಸೆಲ್ಸಿ ಪಾಸಾದರೆ ₹10 ಸಾವಿರ, ₹11 ಸಾವಿರ ಸಹಾಯಧನ ಸಿಗುತ್ತದೆ. ಹೆಣ್ಣುಮಕ್ಕಳ ಮದುವೆಗಾಗಿ ₹50 ಸಾವಿರ ಸಿಗುತ್ತದೆ. ಹೀಗಾಗಿ ಕಟ್ಟಡ ಕಾರ್ಮಿಕರ ಕಾರ್ಡ್‌ಗೆ ಬೇಡಿಕೆ ಇದೆ.

ಕೂಲಿಕಾರರಿಗೆ ಹೆಚ್ಚು ಸಮಸ್ಯೆ: ಕೂಲಿ ಕಾರ್ಮಿಕರಿಗೆ ಕೂಲಿ ಸಿಗುತ್ತಿಲ್ಲ. ಹಳ್ಳಿಗಳಲ್ಲಿ ಮೇಸ್ತ್ರಿಗೆ ₹500, ನಗರದಲ್ಲಿ ₹600 ಸಿಗುತ್ತಿದೆ. ಆದರೆ, ಕೂಲಿ ಕಾರ್ಮಿಕರಿಗೆ ನಗರದಲ್ಲಿ ₹350, ಹಳ್ಳಿಯಲ್ಲಿ ₹250 ಸಿಗುತ್ತಿದೆ. ಇದು ಪುರುಷ ಕಾರ್ಮಿಕರಿಗಾದರೆ ಮಹಿಳಾ ಕಾರ್ಮಿಕರಿಗೆ ಇನ್ನೂ ಕಡಿಮೆ ಕೂಲಿ ಇದೆ. ನಗರದಲ್ಲಿ ₹200, ಹಳ್ಳಿಯಲ್ಲಿ ₹150 ಕೂಲಿ ಇದೆ. ಈಗ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಕಡಿಮೆ. ಹೀಗಾಗಿ ಕೊಟ್ಟಷ್ಟು ಕೂಲಿಗೆ ಹೋಗಬೇಕಾಗಿದೆ ಎನ್ನುತ್ತಾರೆ ಮಹಿಳಾ ಕಾರ್ಮಿಕರು.

ಜಿಲ್ಲೆಯ ಕಟ್ಟಡ ಕಾರ್ಮಿಕರ ವಿವರ
32,500:
ನೋಂದಾಯಿತ ಕಾರ್ಮಿಕರು
27,056: ಕಾರ್ಮಿಕರಿಗೆ ₹5 ಸಾವಿರ ಪರಿಹಾರ
539: ಕಾರ್ಮಿಕ ದಾಖಲಾತಿ ಲಭ್ಯವಿಲ್ಲ
(ಆಧಾರ: ಕಾರ್ಮಿಕ ಇಲಾಖೆ)

ರಿಯಲ್ ಎಸ್ಟೇಟ್ ನಿಧಾನ ಚೇತರಿಕೆ
ಶಹಾಪುರ:
ಕೊರೊನಾ ಹಾವಳಿಯಿಂದ ನೆಲಕಚ್ಚಿದ್ದ ರಿಯಲ್ ಎಸ್ಟೇಟ್ ಉದ್ಯಮ ಈಗ ನಿಧಾನವಾಗಿ ಚೇತರಿಕೆ ಕಂಡಿದೆ. ಮನೆ, ಸರ್ಕಾರಿ ಕಟ್ಟಡ ಹೀಗೆ ಹಲವು ಬಗೆಯ ಕಟ್ಟಡ ನಿರ್ಮಾಣ ಸ್ಥಗಿತಗೊಂಡಿದ್ದರಿಂದ ಕಟ್ಟಡ ಕಾರ್ಮಿಕರು ತೊಂದರೆ ಅನುಭವಿಸಿದ್ದರು.

ತಾಲ್ಲೂಕಿನಲ್ಲಿ ಕಟ್ಟಡ ಕಾರ್ಮಿಕ ಸಂಘ ಸ್ಥಾಪನೆಯಾಗಿದ್ದು, ಸುಮಾರು 6,000 ಕಾರ್ಮಿಕರು ನೋಂದಣಿಯಾಗಿದ್ದಾರೆ. ಹೆರಿಗೆ ಭತ್ಯೆ, ಶಿಕ್ಷಣ, ರಸ್ತೆ ಅಪಘಾತ, ಸಹಜ ಸಾವು, ಶಾಶ್ವತ ಅಂಗಹೀನತೆ ಹೀಗೆ ಹಲವು ಬಗೆಯ ಸಹಾಯ ಧನ ಬರುತ್ತದೆ. ತಾಲ್ಲೂಕಿನಲ್ಲಿ 8ಕ್ಕೂ ಹೆಚ್ಚು ಕಾರ್ಮಿಕರಿಗೆ ಸಹಾಯ ಧನ ಬಂದಿದೆ. ಆದರೆ, ಕಾರ್ಮಿಕರ ಬಹುಮುಖ್ಯ ಬೇಡಿಕೆ ಮತ್ತು ಆದ್ಯತೆಯಾಗಿರುವ ಮನೆ ನಿರ್ಮಿಸಿಕೊಳ್ಳಲು ಸಾಲ ಸೌಲಭ್ಯವನ್ನು ನೀಡಿಲ್ಲ. ಕಾರ್ಮಿಕ ಇಲಾಖೆಯಲ್ಲಿ ಸಾಲ ಸೌಲಭ್ಯವಿದೆ. ಆದರೆ, ಇಂದಿಗೂ ನಯಾ ಪೈಸೆ ಬಿಡುಗಡೆಯಾಗಿಲ್ಲ. ಬರುವ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು. ಕಾರ್ಮಿಕ ಸೌಲಭ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಜಾಗೃತಿ ಹಾಗೂ ಅರಿವು ಮೂಡಿಸಲಾಗುವುದು ಎಂದು ತಾಲ್ಲೂಕು ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಭೀಮರಾಯ ಕದರಾಪುರ ತಿಳಿಸಿದ್ದಾರೆ.

‘ಕೊರೊನಾ ಸಂಕಷ್ಟದಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನೋಂದಾಯಿತ ಸದಸ್ಯರಿಗೆ ತಲಾ ₹5ಸಾವಿರ ಹಣವನ್ನು ನೇರವಾಗಿ ಅವರ ಖಾತೆಗೆ ವರ್ಗಾಯಿಸಲಾಗಿದೆ’ ಎಂದು ತಾಲ್ಲೂಕು ಕಾರ್ಮಿಕ ನಿರೀಕ್ಷಕ ಅಧಿಕಾರಿ ಸಾಬೇರಾ ಬೇಗಂ ತಿಳಿಸಿದರು.

ಕಟ್ಟಡ ಕಾರ್ಮಿಕರಿಗಿಲ್ಲ ಸೌಲಭ್ಯಗಳ ಮಾಹಿತಿ
ಹುಣಸಗಿ:
ತಾಲ್ಲೂಕಿನ ವಜ್ಜಲ, ಯಡಹಳ್ಳಿ, ಹುಣಸಗಿ, ಕೊಡೇಕಲ್ಲ, ನಾರಾಯಣಪುರ, ಹೆಬ್ಬಾಳ ಸೇರಿದಂತೆ ಇತರ ಗ್ರಾಮಗಲ್ಲಿ ನೂರಾರು ಜನ ಕಟ್ಟಡ ಕಾರ್ಮಿಕರಿದ್ದಾರೆ. ಆದರೆ, ಅವರಿಗೆ ತಿಳಿವಳಿಕೆ ಕೊರತೆ ಹಾಗೂ ಅಧಿಕಾರಿಗಳ ಸಕಾರಾತ್ಮಕ ಸ್ಪಂದನೆ ಇಲ್ಲದ್ದರಿಂದಾಗಿ ಅರ್ಹರಿದ್ದರೂ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಟ್ಟಡ ಕಾರ್ಮಿಕರ ಹಾಗೂ ಗೌಂಡಿಗಳ ಸಂಘದ ವಜ್ಜಲ ಗ್ರಾಮದ ಅಧ್ಯಕ್ಷ ಮಲ್ಲಿಕಾರ್ಜುನ ಗೌಂಡಿ ಈ ಕುರಿತು ಮಾತನಾಡಿ, ‘ತಾಲ್ಲೂಕಿನ ವಜ್ಜಲ ಗ್ರಾಮ ಒಂದರಲ್ಲಿಯೇ ಬೋವಿ ವಡ್ಡರ್, ವಡ್ಡರ್ ಸೇರಿದಂತೆ ಇತರ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳಿವೆ. ಆದರೆ, ನಮಗೆ ಇಲ್ಲಿಯವರೆಗೂ ಸರ್ಕಾರಿ ಸೌಲಭ್ಯಗಳು ಸಮರ್ಪಕವಾಗಿ ದೊರೆತಿಲ್ಲ. ಇದರಿಂದಾಗಿ ನಾವು ನಿತ್ಯ ಗೌಂಡಿ ಹಾಗೂ ಗಾರೆ ಕೆಲಸದಲ್ಲಿಯೇ ಜೀವನ ಸವೆಸುತ್ತಿದ್ದೇವೆ’ ಎಂದರು.

ಹುಣಸಗಿ ತಾಲ್ಲೂಕಿನ ನಾಗಯ್ಯ ಬಂಡಿವಡ್ಡರ ಮಾತನಾಡಿ, ತಾಲ್ಲೂಕಿನಲ್ಲಿರುವ ಗೌಂಡಿಗಳು ಹಾಗೂ ಅವರ ಕೈಯಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ (ದುಂಡಾಳ) ಸರ್ಕಾರದ ಸೌಭ್ಯಗಳನ್ನು ಒದಗಿಸಿಕೊಡಬೇಕಿದೆ. ಅಲ್ಲದೆ ಅನಕ್ಷರಸ್ಥರಾಗಿರುವ ಕುಟುಂಬಗಳೇ ಹೆಚ್ಚಾಗಿದ್ದು, ಅವರಿಗೆ ಕುಲಕಸುಬಿನ ಕೆಲಸಕ್ಕಾಗಿ ಅಗತ್ಯವಿರುವ ಸಾಮಗ್ರಿಗಳನ್ನು ಪ್ರತಿ ವರ್ಷವೂ ಒದಗಿಸಲಿ ಎನ್ನುತ್ತಾರೆ.

‘ಕಟ್ಟಡ ಕಾರ್ಮಿಕರೆಲ್ಲರಿಗೂ ಸರ್ಕಾರದಿಂದ ಗುರುತಿನ ಚೀಟಿ, ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ಸಾಲ ಸೌಲಭ್ಯ ಹಾಗೂ ಹಿರಿಯ ನಾಗರಿಕರಿಗೆ ಜೀವನ ಭದ್ರತೆ ಮಾಡಿಸಿಕೊಡುವುದು ಅಗತ್ಯವಿದೆ’ ಎಂದು ಪಟ್ಟಣದ ಸಾಮಾಜಿಕ ಕಾರ್ಯಕರ್ತ ಬಸವರಾಜ ಮೇಲಿನಮನಿ ಹೇಳಿದರು.

ಪೂರಕ ಮಾಹಿತಿ: ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು