ಬುಧವಾರ, ಡಿಸೆಂಬರ್ 8, 2021
28 °C
ನಿಯಮಗಳನ್ನು ಗಾಳಿಗೆ ತೂರಿದ ಜನ, ತರಕಾರಿ ಅಂಗಡಿಯಲ್ಲಿ ಸಂಜೆವರೆಗೆ ಖರೀದಿ

ಯಾದಗಿರಿ | ಲಾಕ್‌ಡೌನ್‌: ಎಂದಿನಂತೆ ಜನ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಒಂದು ವಾರ ಕಾಲ ಲಾಕ್‌ಡೌನ್ ಘೋಷಿಸಿದ್ದರೂ ಜನ ಸಂಚಾರ ಭಾನುವಾರ ಎಂದಿನಂತೆ ಸಾಗಿತ್ತು. ಸಂಜೆಯವರೆಗೂ ಅಂಗಡಿ ಮುಂಗಟ್ಟುಗಳಲ್ಲಿ ದಿನಸಿ, ತರಕಾರಿ, ಹಣ್ಣುಗಳ ವ್ಯಾಪಾರ ಜೋರಾಗಿ ನಡೆಯಿತು.

ಬ್ಯಾರಿಕೇಡ್ ತೆರವು: ನಗರದ ಪ್ರಮುಖ ವೃತ್ತಗಳಲ್ಲಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಪ್ರಮುಖ ವೃತ್ತಗಳಲ್ಲಿ ಮಾತ್ರ ಪೊಲೀಸರು ಕಂಡು ಬಂದರು. ಸಾರ್ವಜನಿಕರು ಮಾಸ್ಕ್‌ ಧರಿಸದೆ, ಅಂತರ ಕಾಪಾಡಿಕೊಳ್ಳದೆ ತರಕಾರಿ ಖರೀದಿಸುವುದು ನಗರದ ಚಿರಂಜೀವಿ ಶಾಲೆ ಪಕ್ಕದಲ್ಲಿರುವ ತರಕಾರಿ ಅಂಗಡಿಗಳ ಮುಂದೆ ಕಾಣಿಸಿತು.

ತರಕಾರಿ, ಹಾಲು ಇನ್ನಿತರ ಅವಶ್ಯಕ ಸಾಮಗ್ರಿ ಖರೀದಿಗೆ ಮಧ್ಯಾಹ್ನದ 1 ಗಂಟೆವರೆಗೆ ಸಮಯ ನಿಗದಿ ಪಡಿಸಿದ್ದರೂ, ತರಕಾರಿ ವ್ಯಾಪಾರ ಮಾತ್ರ ಸಂಜೆವರೆಗೆ ನಡೆಯಿತು. ಜನರು ಮುಗಿಬಿದ್ದು ಖರೀದಿ ಮಾಡುವುದು ಕಂಡು ಬಂದಿತು. ಲಾಕ್‌ಡೌನ್‌ ಇರುತ್ತದೆ ಎಂದು ಕೆಲವರು ಅಗತ್ಯ ಸಾಮಗ್ರಿಗಳನ್ನು ಶನಿವಾರವೇ ಖರೀದಿದ್ದರು. ಆದರೆ, ಭಾನುವಾರವೂ ಅಂಗಡಿ ಮುಂಗಟ್ಟುಗಳು ತೆರೆದಿದ್ದವು.

ಇನ್ನುಳಿದಂತೆ ಮಧ್ಯಾಹ್ನದ ನಂತರ ಜನ ಸಂಚಾರ ವಿರಳವಾಗಿತ್ತು. ಸಂಜೆ ವೇಳೆ ಮತ್ತೆ ಜನರು ಮನೆಯಿಂದ ಹೊರ ಬಂದು ರಸ್ತೆಯಲ್ಲಿ ಓಡಾಟ ನಡೆಸಿದ್ದರು. ನಗರದ ಅಲ್ಲಲ್ಲಿ ಗುಂಪುಗೂಡಿ ಹರಟೆ ಹೊಡೆಯುವುದು ಕಾಣಿಸಿತು.

ಜಿಲ್ಲೆಯಲ್ಲಿ ಅರ್ಧ ದಿನದ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಸಾಮಾನ್ಯ ದಿನದಂತೆ ಭಾನುವಾರವೂ ವ್ಯಾಪಾರ ವಹಿವಾಟು ನಡೆಯಿತು. ಆಟೊ, ಜೀಪ್‌, ಕಾರು, ಬೈಕ್‌ಗಳ ಓಡಾಟವೂ ನಿರಂತರವಾಗಿ ಸಾಗಿತ್ತು. 

ಪೊಲೀಸರು ದಂಡ ವಿಧಿಸುವ ಕೆಲಸ ಮತ್ತಷ್ಟು ಮಾಡಿದರೆ ಮಾತ್ರ ಲಾಕ್‌ಡೌನ್‌ಗೆ ಅರ್ಥ ಬರುತ್ತದೆ. ಆದರೆ, ಜಿಲ್ಲೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂದು ನಗರ ನಿವಾಸಿ ರಾಘವೇಂದ್ರ ಕೋಟಗೇರಾ ಆರೋಪಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು