ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ಲೋಕಸಭೆ; ಸುರಪುರದ ಆಕಾಂಕ್ಷಿಗಳು

ಸುರಪುರ ಕೇಂದ್ರಿಕೃತವಾದ ರಾಜಕೀಯ ಚಟುವಟಿಕೆ
Published 14 ಮಾರ್ಚ್ 2024, 5:44 IST
Last Updated 14 ಮಾರ್ಚ್ 2024, 5:44 IST
ಅಕ್ಷರ ಗಾತ್ರ

ಸುರಪುರ: ಲೋಕಸಭೆ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಸುರಪುರದಲ್ಲಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ರಾಯಚೂರು ಲೋಕಸಭಾ ಕ್ಷೇತ್ರ ಸುರಪುರದತ್ತ ಮುಖ ಮಾಡುವಂತೆ ಮಾಡಿದೆ.

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‍ನಿಂದ ದಿವಂಗತ ರಾಜಾ ವೆಂಕಟಪ್ಪನಾಯಕ ಅವರನ್ನು ಹುರಿಯಾಳು ಮಾಡಲು ಸಿದ್ಧತೆ ನಡೆದಿತ್ತು. ವೆಂಕಟಪ್ಪನಾಯಕ ಅವರಿಗೆ ಇಚ್ಛೆಯಿರಲಿಲ್ಲ. ಆದರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳಿಕೊಂಡಿದ್ದರು.

ವೆಂಕಟಪ್ಪನಾಯಕ ಅವರ ತಮ್ಮನ ಮಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜಾ ಕುಮಾರನಾಯಕ ಅವರ ಹೆಸರೂ ಲೋಕಸಭೆಗೆ ಕೇಳಿಬರುತ್ತಿತ್ತು. ದೊಡ್ಡಪ್ಪನ ನಿಧನ ಮತ್ತು ವಿಧಾನಸಭೆಗೆ ಅಣ್ಣನನ್ನು ಗೆಲ್ಲಿಸುವ ಜವಾಬ್ದಾರಿ ಇರುವುದರಿಂದ ಲೋಕಸಭೆ ಚುನಾವಣೆಯ ಆಕಾಂಕ್ಷಿಯಲ್ಲ ಎಂದು ರಾಜಾ ಕುಮಾರನಾಯಕ ತಿಳಿಸಿದರು.

ಮಾಜಿ ಸಚಿವ ರಾಜೂಗೌಡ ಅವರನ್ನು ಬಿಜೆಪಿಯಿಂದ ಲೋಕಸಭೆಗೆ ಕಣಕ್ಕಿಳಿಸುವ ಮಾತುಗಳು ಕೇಳಿ ಬಂದಿದ್ದವು. ಶಾಸಕರಾಗಿದ್ದ ರಾಜಾ ವೆಂಕಟಪ್ಪನಾಯಕ ಅವರ ಅಕಾಲಿಕ ನಿಧನದಿಂದ ಲೋಕಸಭಾ ಕ್ಷೇತ್ರದ ಚುನಾವಣೆಯ ರಾಜಕೀಯ ಚಿತ್ರಣ ಅದಲು ಬದಲು ಆಗುವಂತೆ ಮಾಡಿದೆ.

ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿಯಿಂದ ರಾಜೂಗೌಡ ಸ್ಪರ್ಧಿಸುವುದು ಖಚಿತ. ಕಾಂಗ್ರೆಸ್‍ನಿಂದ ರಾಜಾ ವೆಂಕಟಪ್ಪನಾಯಕ ಅವರ ಪುತ್ರ ರಾಜಾ ವೇಣುಗೋಪಾಲನಾಯಕ ಅವರಿಗೆ ಟಿಕೆಟ್ ನೀಡುವ ಸಂಭವವಿದೆ ಎನ್ನಲಾಗುತ್ತಿದೆ.

ಹೀಗಾಗಿ ಸುರಪುರದಿಂದ ಮೂರು ಜನರ ಹೆಸರು ಲೋಕಸಭೆಗೆ ಪ್ರಬಲವಾಗಿ ಕೇಳಿ ಬರುತ್ತಿವೆ. ಕಾಂಗ್ರೆಸ್‍ನಿಂದ ಸುರಪುರ ಅರಸು ಮನೆತನದ ರಾಜಾ ಕೃಷ್ಣಪ್ಪನಾಯಕ, ಅವರ ಸಹೋದರ ಸಂಬಂಧಿ ಡಾ. ರಾಜಾ ವೆಂಕಪ್ಪನಾಯಕ ಮತ್ತು ಬಿಜೆಪಿಯಿಂದ ರಾಜಾ ಹನುಮಪ್ಪನಾಯಕ ತಾತಾ,
ಸಂಸ್ಥಾನಿಕ ರಾಜಾ ಕೃಷ್ಣಪ್ಪನಾಯಕ ಅವರ ಅಜ್ಜ ರಾಜಾ ಪಿಡ್ಡನಾಯಕ ಮೂರು ಬಾರಿ ಸುರಪುರ ಶಾಸಕರಾಗಿದ್ದರು. ಮತ್ತೊಬ್ಬ ಅಜ್ಜ ಬ್ಯಾರಿಸ್ಟರ್ ರಾಜಾ ವೆಂಕಟಪ್ಪನಾಯಕ ಒಂದು ಬಾರಿ ಸಂಸದ ಮತ್ತು ಶಾಸಕರಾಗಿದ್ದರು. ತಂದೆ ರಾಜಾ ವೆಂಕಟಪ್ಪನಾಯಕ ಒಂದು ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ದರು. ಕೃಷ್ಣಪ್ಪನಾಯಕ ಅವರೂ 2018 ರಲ್ಲಿ ಸ್ಪರ್ಧೆ ಮಾಡಿದ್ದರು.

‘ರಾಜಕೀಯ ಹಿನ್ನೆಲೆ ಹೊಂದಿದ್ದು ಜನರ ಸೇವೆ ಮಾಡುವ ಇಚ್ಛೆ ಹೊಂದಿದ್ದೇನೆ. ಈಗಾಗಲೇ ಪಕ್ಷದ ಹಿರಿಯ ಮುಖಂಡರನ್ನು ಭೇಟಿಯಾಗಿದ್ದೇನೆ. ಹೈಕಮಾಂಡ್ ಸ್ಕ್ರೀನಿಂಗ್ ಸಮಿತಿಯಲ್ಲಿ ನನ್ನ ಹೆಸರೂ ಇದ್ದು ಬಹುತೇಕ ಟಿಕೆಟ್ ಸಿಗುವ ಭರವಸೆ ಇದೆ’ ಎಂದು ರಾಜಾ ಕೃಷ್ಣಪ್ಪನಾಯಕ ತಿಳಿಸಿದರು.

ರಾಜಾ ಹನುಮಪ್ಪನಾಯಕ ಅವರ ಸಹೋದರ ರಾಜಾ ಮದನಗೊಪಾಲ ನಾಯಕ ಮೂರು ಬಾರಿ ಶಾಸಕರಾಗಿದ್ದು, ಒಮ್ಮೆ ಸಚಿವರಾಗಿದ್ದರು. 2016 ರಲ್ಲಿ ಗುಲಬರ್ಗಾ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ, ಯಾದಗಿರಿ ಜಿಲ್ಲೆ ಘೋಷಣೆಯ ನಂತರ ಪ್ರಥಮ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಪ್ರಸ್ತುತ ಸಂಸದ ರಾಜಾ ಅಮರೇಶ್ವರ ನಾಯಕ ಅವರ ಅಳಿಯನೂ ಹೌದು.
‘ರಾಜೂಗೌಡ ಅವರಿಗೆ ಆತ್ಮೀಯನಾಗಿದ್ದೇನೆ. ಬಿಜೆಪಿಗೆ ನಿಷ್ಠೆಯಿಂದಿದ್ದು ಎಲ್ಲ ಚುನಾವಣೆಗಳಲ್ಲಿ ದುಡಿದಿದ್ದೇನೆ. ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ರಾಜೂಗೌಡ ಸ್ಪರ್ಧಿಸುತ್ತಿರುವುದರಿಂದ ಲೋಕಸಭೆಗೆ ಆಕಾಂಕ್ಷಿಯಾಗಿದ್ದೇನೆ. ಪಕ್ಷದಲ್ಲಿ ರಾಜೂಗೌಡ ಅವರ ಪ್ರಭಾವ ಇರುವುದರಿಂದ ಟಿಕೆಟ್ ಸಿಗುವ ಭರವಸೆ ಇದೆ’ ಎಂದು ರಾಜಾ ಹನುಮಪ್ಪನಾಯಕ ತಿಳಿಸಿದರು.

ಡಾ. ರಾಜಾ ವೆಂಕಪ್ಪನಾಯಕ ಸುರಪುರ ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  
‘ನನಗೆ ಮೊದಲಿನಿಂದಲೂ ಜನರ ಸೇವೆ ಮಾಡುವ ಮಹದಾಸೆ. ಜನಸೇವೆಯನ್ನು ಮಾಡಲು ಪ್ರಜಾಪ್ರಭುತ್ವ ವ್ಯವಸ್ಥೆ ಪ್ರಬಲ ಮತ್ತು ಅತ್ಯುತ್ತಮ ವೇದಿಕೆ. ಈಗಾಗಲೇ ಕಾಂಗ್ರೆಸ್ ಹಿರಿಯ ಮುಖಂಡರನ್ನು ಭೇಟಿಯಾಗಿದ್ದು, ಅವರೆಲ್ಲರೂ ನನ್ನ ಬಗ್ಗೆ ಒಲುವು ಹೊಂದಿದ್ದಾರೆ. ರಾಯಚೂರು ಕ್ಷೇತ್ರದಲ್ಲಿ ನನ್ನ ನೆಂಟರೂ, ಸ್ನೇಹಿತರು ಅಧಿಕ ಸಂಖ್ಯೆಯಲ್ಲಿದ್ದಾರೆ. ಟಿಕೆಟ್ ದೊರೆತರೆ ಗೆಲ್ಲುವ ವಿಶ್ವಾಸವಿದೆ’ ಎನ್ನುತ್ತಾರೆ ಡಾ. ರಾಜಾ ವೆಂಕಪ್ಪನಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT