ಶುಕ್ರವಾರ, ಆಗಸ್ಟ್ 12, 2022
27 °C
ಗ್ರಾಮಗಳಲ್ಲಿ ರೋಗದ ಕುರಿತು ಡಂಗೂರ ಸಾರುವ ಮೂಲಕ ಜಾಗೃತಿ: ಡಾ.ಷಣ್ಮುಖಪ್ಪ

ಜಾನುವಾರುಗಳಿಗೆ ‘ಲಂಪಿಸ್ಕಿನ್’ ಕಾಟ

ಟಿ.ನಾಗೇಂದ್ರ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ಕೊರೊನಾ ಹಾವಳಿಯಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಿ ಬಂದಿವಿ. ನಮ್ ಪಾಲಿನ ಜೀವದಂತೆ ಇರುವ ಜಾನುವಾರುಗಳಿಗೆ ವಿಚಿತ್ರ ರೋಗ ಬಂದೈತೆ. ನಮ್ ಬಸವಣ್ಣ ಹೈರಾಣಗೊಂಡಾನ್. ದವಖಾನೆಗೆ ಹ್ವಾದರು ಸಹ ಆರಾಮ ಆಗುತ್ತಿಲ್ಲ. ಬದುಕಿಗೆ ಆಸರೆಯಾಗಿರುವ ಎತ್ತು ನರಳಾಡುವುದನ್ನು ಕಂಡು ಜೀವ ಹಿಂಡಿದಂತೆ ಆಗುತ್ತಿದೆ..

ಇದು ಗ್ರಾಮೀಣ ಪ್ರದೇಶದಲ್ಲಿ ‘ಲಂಪಿಸ್ಕಿನ್’ ರೋಗದಿಂದ ಬಳುತ್ತಿರುವ ಜಾನುವಾರುಗಳ ದುಸ್ಥಿತಿಯನ್ನು ಕಂಡು ಅಸಹಾಯತೆಯನ್ನು ವ್ಯಕ್ತಪಡಿಸುತ್ತಿರುವ ರೈತರ ನೋವಿನ ಮಾತುಗಳಿವು.

ತಾಲ್ಲೂಕಿನ ವನದುರ್ಗ, ಹೊಸಕೇರಾ, ಶೆಟ್ಟಿಕೇರಾ, ಕಕ್ಕಸಗೇರಾ ಗ್ರಾಮಗಳಲ್ಲಿ ರೋಗಜಾನುವಾರುಗಳಿಗೆ ಕಾಣಿಸಿಕೊಂಡಿದೆ. ಕಾಲು, ಭುಜ, ಗಂಟಲು ಭಾಗದಲ್ಲಿ ಗುಳ್ಳೆಯಾಗಿ ಸಣ್ಣದಾದ ಗಡ್ಡೆಯಾಗಿ ರಕ್ತ ಹೆಪ್ಪುಗಟ್ಟಿ ಕೀವು ಬಿಳುವುದರ ಜತೆಗೆ ಹುಳ ಬಿದ್ದಿವೆ. ಇದರಿಂದ ಜಾನುವಾರುಗಳು ನಿತ್ರಾಣಗೊಳ್ಳುತ್ತಲಿವೆ. ಪಶು ವೈದ್ಯರು ಚಿಕಿತ್ಸೆ ನೀಡುತ್ತಿದ್ದರು ಸಹ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಬೇರೆ ಜಾನುವಾರುಗಳಿಗೂ ರೋಗ ಪಸರಿಸುವ ಆತಂಕ ಶುರುವಾಗಿದೆ ಎನ್ನುತ್ತಾರೆ ವನದುರ್ಗ ಗ್ರಾಮದ ರೈತ ಮುಖಂಡ ಯಲ್ಲಪ್ಪ ಕಾಶಿರಾಜ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಪಶು ಸಂಗೋಪನೆ ಸಚಿವರಾಗಿದ್ದರು ಸಹ ಇತ್ತ ಗಮನಹರಿಸುತ್ತಿಲ್ಲ. ಎಲ್ಲಾ ಜಾನುವಾರು ಸತ್ತ ಮ್ಯಾಲ್ ಬಂದು ಹೋಗುತ್ತಾರೇನು?. ಗೋ ಮಾತೆ ಸಂರಕ್ಷಣೆ ಮಾಡಿ ಎನ್ನುವ ಸಂಘಟಕರು ಎಲ್ಲಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿಲ್ಲ ಎಂದು ರೈತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ರೈತರು ಆತಂಕಪಡುವ ಅಗತ್ಯವಿಲ್ಲ:  ‘ಲಂಪಿಸ್ಕಿನ್’ ಮಾರಣಾಂತಿಕ ಕಾಯಿಲೆ ಅಲ್ಲ. ಲಂಪಿಸ್ಕಿನ್ ವೈರಲ್ ಕಾಯಿಲೆಯಾಗಿದೆ. ಮಾತ್ರೆಯನ್ನು ನೀಡಿ ಗುಣಪಡಿಸಲಾಗುತ್ತಿದೆ. 5-6 ದಿನ ಜಾನುವಾರು ಗುಣಮುಖವಾಗಲು ಬೇಕಾಗುತ್ತದೆ ಎಂದು  ಪಶು ಸಂಗೋಪನೆ ಸಹಾಯಕ ನಿರ್ದೇಶಕ ಡಾ.ಷಣ್ಮುಖಪ್ಪ ತಿಳಿಸಿದ್ದಾರೆ.

ಸೋಂಕು ತಗುಲಿದ ಜಾನುವಾರನ್ನು ಪ್ರತ್ಯೇಕವಾಗಿ ಇರಿಸಬೇಕು. ತಾಲ್ಲೂಕಿನ ವನದುರ್ಗ, ಹೊಸಕೇರಾ, ಕಕ್ಕಸಗೇರಾ, ಶೆಟ್ಟಿಕೇರಾ ಗ್ರಾಮದಲ್ಲಿ ರೋಗ ಕಾಣಿಸಿಕೊಂಡಿದೆ. ಈಗಾಗಲೇ ದೋರನಹಳ್ಳಿ ಹಾಗೂ ಹುಲಕಲ್ ಗ್ರಾಮದಲ್ಲಿ ಜಾಗೃತಿ ಅಭಿಯಾನ ಕೈಗೊಂಡು ಚಿಕಿತ್ಸೆ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ರೋಗದ ಬಗ್ಗೆ ಅರಿವು ಮೂಡಿಸಲು ಡಂಗೂರ ಸಾರಿ ಅಭಿಯಾನ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.