ಶಹಾಪುರ: ಇಲ್ಲಿನ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್)ದ ₹2.6 ಕೋಟಿ ಮೌಲ್ಯದ ಪಡಿತರ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರ ಜಾಮೀನು ಅರ್ಜಿಯನ್ನು ಶನಿವಾರ ಜೆಎಂಎಫ್‌ಸಿ ನ್ಯಾಯಾಲಯ ವಜಾಗೊಳಿಸಿದೆ.
ಶಹಾಪುರ ಠಾಣೆಯ ಪೊಲೀಸರು ಜುಲೈ 16ರಂದು ಕಲಬುರಗಿಯಲ್ಲಿ ಮಣಿಕಂಠ ರಾಠೋಡ್ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಜಾಮೀನು ನೀಡಬಾರದು ಎಂದು ನ್ಯಾಯಾಲಯಕ್ಕೆ ಸಾಕಷ್ಟು ದಾಖಲೆಗಳ ಸಮೇತ ಮನವರಿಕೆ ಮಾಡಲಾಗಿತ್ತು. ಅದರಂತೆ ಜಾಮೀನು ಅರ್ಜಿ ವಜಾಗೊಂಡಿದೆ ಎಂದು ಸರ್ಕಾರಿ ಸಹಾಯಕ ಅಭಿಯೋಜಕಿ ದಿವ್ಯಾರಾಣಿ ನಾಯಕ ಸುರಪುರ ಮಾಹಿತಿ ನೀಡಿದರು.
ಬಂಧನದ ವೇಳೆ ಪೊಲೀಸರಿಗೆ ಗತ್ತು ಪ್ರದರ್ಶಿಸಿದ ಮಣಿಕಂಠ ರಾಠೋಡ್ ಅವರು ವಿಚಾರಣೆ ವೇಳೆ ಪೊಲೀಸರ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದರು.
ಭೇಟಿಗೆ ನಿರಾಕರಣೆ: ಶ್ರೀರಾಮ ಸೇನೆಯ ರಾಜ್ಯ ಘಟಕದ ಸಂಚಾಲಕ ಪ್ರಮೋದ ಮುತಾಲಿಕ ಅವರು ಈಚೆಗೆ ಪೊಲೀಸ್ ಕಸ್ಟಡಿಯಲ್ಲಿ ಇದ್ದ ಮಣಿಕಂಠ ರಾಠೋಡ್ ಅವರನ್ನು ಭೇಟಿಯಾಗಲು ಬಂದಿದ್ದರು. ಆಗ ಪೊಲೀಸರು ಭೇಟಿ ನಿರಾಕರಿಸಿದ್ದರು. ಇದು ಸಹ ಚರ್ಚೆಗೆ ಗ್ರಾಸವಾಗಿತ್ತು.
‘ಹಿಂದೂ ಸಮಾಜದ ಸಂರಕ್ಷಣೆಯ ವಕ್ತಾರರಂತೆ ವರ್ತಿಸುವ ಪ್ರಮೋದ ಮುತಾಲಿಕ ಅವರು ಮಣಿಕಂಠ ರಾಠೋಡ್ ಅವರನ್ನು ಭೇಟಿಯಾಗಲು ಬಂದಿರುವುದು, ಅವರ ನಿಜವಾದ ಬಣ್ಣ ಬಯಲಾಗಿದೆ’ ಎಂದು ಸಿಪಿಐ(ಎಂ) ಮುಖಂಡ ಸಿದ್ದಯ್ಯ ಹಿರೇಮಠ ಲೇವಡಿ ಮಾಡಿದ್ದಾರೆ.