ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಸ್ವಚ್ಛತೆ ಕಾಪಾಡಲು ಸಚಿವರ ಸೂಚನೆ

ಅಶುಚಿತ್ವ ಕುರಿತು ಸಾಕಷ್ಟು ದೂರು ಬರುತ್ತಿರುವ ಹಿನ್ನೆಲೆ
Last Updated 18 ಜುಲೈ 2020, 16:32 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಾದ್ಯಂತ ಅಶುಚಿತ್ವ ಕುರಿತು ಸಾಕಷ್ಟು ದೂರುಗಳು ಬರುತ್ತಿದ್ದು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಜಿಲ್ಲೆಯಾದ್ಯಂತ ರಸ್ತೆ ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಡಿಯುಡಿಸಿ ಯೋಜನಾ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮಳೆಗಾಲ ಆರಂಭವಾದ್ದರಿಂದ ಮಲೇರಿಯಾ, ಡೆಂಗಿ ಸೇರಿದಂತೆ ನಾನಾ ಕಾಯಿಲೆಗಳು ಉಲ್ಬಣಿಸುವ ಸಾಧ್ಯತೆಗಳಿವೆ. ಹಾಗೆಯೇ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತು ಎಲ್ಲ ಗ್ರಾಮಗಳಲ್ಲೂ ತುಂಬಿಕೊಂಡಿರುವ ಚರಂಡಿಗಳನ್ನು ಸ್ಚಚ್ಛಗೊಳಿಸಬೇಕು. ರಸ್ತೆಗಳನ್ನು ಸ್ವಚ್ಛಗೊಳಿಸಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ನಗರದೆಲ್ಲೆಡೆ ಫಾಗಿಂಗ್ ಮತ್ತು ಸ್ಯಾನಿಟೈಸಿಂಗ್ ಮಾಡುವುದು, ಬ್ಲೀಚಿಂಗ್ ಸಿಂಪಡಿಸುವ ಕಾರ್ಯ ಚುರುಕುಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಯಾದಗಿರಿ ನಗರ ಮತ್ತು ವಿವಿಧ ತಾಲ್ಲೂಕುಗಳಲ್ಲಿ ಚರಂಡಿಗಳು ತುಂಬಿಕೊಂಡು ದುರ್ನಾತ ಬೀರುತ್ತಿರುವ ಬಗ್ಗೆ ಜನರು ದೂರವಾಣಿ ಮೂಲಕ ದೂರು ನೀಡುತ್ತಿದ್ದಾರೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿರುವ ಕಾರಣ ಅಂಗಡಿ ಮುಂದಿನ ಚರಂಡಿಗಳನ್ನು ಸ್ವಚ್ಛಗೊಳಿಸಲು ಅನುಕೂಲಕರ ವಾತಾವರಣವಿದೆ. ಜನ ಸಂಚಾರವೂ ಕಡಿಮೆ ಇರುವುದರಿಂದ ಆದಷ್ಟು ಶೀಘ್ರ ಚರಂಡಿ ಸ್ಚಚ್ಛತೆ ಕೈಗೊಳ್ಳಬಹುದು. ಅಲ್ಲದೇ ಸ್ವಚ್ಛತಾ ಕಾರ್ಯದ ಬಗ್ಗೆ ತಮಗೆ ವಾಟ್ಸ್‌ಆ್ಯಪ್‍ನಲ್ಲಿ ಫೋಟೋ ಕಳುಹಿಸುವಂತೆ ನಗರಸಭೆಯ ಪೌರಾಯುಕ್ತರಿಗೆ ತಾಕೀತು ಮಾಡಿದ್ದಾರೆ.

ಕೊರೊನಾ ಸೋಂಕಿತ ಅಧಿಕಾರಿಯ ಸಂಪರ್ಕಕ್ಕೆ ಬಂದಿರುವ ಕಾರಣ ವೈದ್ಯರ ಸಲಹೆ ಮೇರೆಗೆ ಕ್ವಾರಂಟೈನ್‍ಗೆ ಒಳಗಾಗಿರುವ ಸಚಿವರು, ಮನೆಯಿಂದಲೇ ಅಧಿಕಾರಿಗಳಿಗೆ ಅಗತ್ಯ ಸಲಹೆ- ಸೂಚನೆಗಳನ್ನು ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT