ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ವಲಸೆ ನಿಲ್ಲಿಸುವತ್ತ ’ನರೇಗಾ’ ದಾಪುಗಾಲು

ಕಲ್ಯಾಣಿ ಜೀರ್ಣೋದ್ಧಾರ, ಕೆರೆ ಸ್ವಚ್ಛತೆಯಂತಹ ಉಪೊಯೋಗಿ ಕಾಮಗಾರಿಗಳು
Last Updated 10 ಜುಲೈ 2020, 19:30 IST
ಅಕ್ಷರ ಗಾತ್ರ

ಗುರುಮಠಕಲ್: ದೂರದ ನಗರಗಳಿಗೆ ಉದ್ಯೋಗವನ್ನು ಹುಡುಕಿಕೊಂಡು ಬದುಕು ಕಟ್ಟಿಕೊಳ್ಳಲೆಂದು ವಲಸೆ ಹೋಗುತ್ತಿರುವವರ ಸಂಖ್ಯೆ ತಾಲ್ಲೂಕಿನಲ್ಲಿ ಹೆಚ್ಚುತ್ತಲೇ ಇದ್ದು, ಅದನ್ನು ನಿಯಂತ್ರಿಸಿ ವಲಸೆಯನ್ನು ನಿಲ್ಲಿಸುವ ನಿಟ್ಟಿನಲ್ಲಿ ನರೇಗಾ ಯೋಜನೆ ದಾಪುಗಾಲು ಹಾಕುತ್ತಿದೆ.

ಉದ್ಯೋಗ ಸೃಷ್ಟಿಯಿಂದ ವಲಸೆ ತಡೆಯುವುದು ಒಂದು ಉಪಯೋಗವಾದರೆ ಉದ್ಯೋಗ ಖಾತರಿ ಯೋಜನೆಯಲ್ಲಿ ಕೈಗೊಂಡಿರುವಂತಹ ಕಾಮಗಾರಿಗಳು ಮುಂದಿನ ಹಂತದಲ್ಲಿಯೂ ಲಾಭದಾಯಕವಾಗಿರಬೇಕು ಎನ್ನುವ ಕಲ್ಪನೆಯೊಡನೆ ಕಲ್ಯಾಣಿಗಳ ಜೀರ್ಣೋದ್ಧಾರ, ಕೆರೆಗಳ ಹೂಳೆತ್ತುವುದು, ಬೆಟ್ಟಗಳ ಫೆನ್ಸಿಂಗ್, ಇಂಗು ಗುಂಡಿಗಳ ನಿರ್ಮಾಣದಂತಹ ಅಂತರ್ಜಲವನ್ನು ಹೆಚ್ಚಿಸುವುದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಾನವ ದಿನಗಳನ್ನು ಸೃಷ್ಟಿಸುವಂತಹ ಕಾಮಗಾರಿಗಳನ್ನು ಮಾಡಲಾಗುತ್ತಿದೆ.

ನರೇಗಾದಲ್ಲಿ ಬದುಗಳ ನಿರ್ಮಾಣ, ಬದು ಕೃಷಿ, ಕೃಷಿ ಹೊಂಡದಂತಹ ವೈಯಕ್ತಿಕ ಲಾಭದಾಯಕ ಕಾಮಗಾರಿಗಳ ಮೂಲಕ ರೈತರು ಕೃಷಿಯೇತರ ಸಮಯದಲ್ಲಿ ತಮ್ಮ ಜಮೀನಿನಲ್ಲಿಯೇ ಕೆಲಸ ಮಾಡಿ ಕೂಲಿ ಪಡೆಯುವುದರ ಜೊತೆಗೆ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಜೊತೆಗೆ ಫಲವತ್ತತೆಯನ್ನೂ ಉಳಿಸುತ್ತದೆ. ಇದರಿಂದ ಕೃಷಿಯಿಂದ ಬಿಡುವಾದ ಸಮಯದಲ್ಲಿ ಉದ್ಯೋಗಕ್ಕಾಗಿ ವಲಸೆ ಹೋಗುವವರು ಈಗ ಇಲ್ಲಿಯೆ ಉದ್ಯೋಗ ಪಡೆಯುವಂತಾಗುತ್ತದೆ ಎನ್ನುವುದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ ಅವರ ವಿವರಣೆ.

ತಾಲ್ಲೂಕಿನ ಅಜಲಾಪೂರ ಕೆರೆ ಕಾಮಗಾರಿಯಲ್ಲಿ ಅತಿ ಹೆಚ್ಚು 15,775 ಮಾನವ ದಿನಗಳ ಕೆಲಸವಾಗಿದೆ.

ಹೊಸದಾಗಿ ಒಟ್ಟು 6,481 ಜಾಬ್ ಕಾರ್ಡ್‌ಗಳನ್ನು ನೀಡುವ ಮೂಲಕ 11,815 ಜನ ತಾಲ್ಲೂಕಿಗೆ ಹಿಂದಿರುಗಿದ ವಲಸೆ ಕಾರ್ಮಿಕರಿಗೆ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. 6214 ಜನ ಪರಿಶಿಷ್ಟ ಜಾತಿ, 2182 ಪರಿಶಿಷ್ಟ ಪಂಗಡದ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲಾಗಿದೆ.

ತಾಲ್ಲೂಕಿಗೆ ಹಿಂದಿರುಗುತ್ತಿರುವವರ ಮಾಹಿತಿಯನ್ನು ಪಡೆಯುವಾಗಲೇ ಪಂಚಾಯಿತಿಗಳಲ್ಲಿ ಅವರ ಜಾಬ್ ಕಾರ್ಡ್ ಇದೆಯೇ ಎನ್ನುವುದು ಪರಿಶೀಲಿಸಿ ಇಲ್ಲದವರಿಗೆ ಹೊಸ ಜಾಬ್ ಕಾರ್ಡ್ ವಿತರಿಸುವ ಅಭಿಯಾನ ಮಾಡಿದ ಫಲವಾಗಿ ಇಷ್ಟೊಂದು ಜನರಿಗೆ ಸ್ಥಳೀಯವಾಗಿ ಉದ್ಯೋಗ ಸಿಕ್ಕಿದೆ.

ಇದರ ಜೊತೆಗೆ ಈ ಮೊದಲಿನಂತಲ್ಲದೆ, ಕಾಮಗಾರಿಗಳಲ್ಲಿ ಸೃಷ್ಟಿಯಾದ ಮಾನವ ದಿನಗಳ ವೇತನವನ್ನು 8 ದಿನಗಳ ಅವಧಿಯೊಳಗೆ ಕಾರ್ಮಿಕರ ಖಾತೆಗಳಿಗೆ ಜಮಾವಣೆ ಮಾಡುತ್ತಿರುವುದರಿಂದ ಇಲ್ಲೆ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವ ಆಸೆ ಚಿಗುರುತ್ತಿದೆ ಎನ್ನುತ್ತಾರೆ ಕಾರ್ಮಿಕಾರಾದ ಮಲ್ಲಪ್ಪ, ಪೋಷಪ್ಪ, ವೆಂಕಟೇಶ ಹಾಗೂ ಮಾಣಿಕಮ್ಮನವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT