ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿ ಹಬ್ಬ: ಖರೀದಿ ಭರಾಟೆ ಜೋರು

ಎರಡು ವರ್ಷಗಳ ನಂತರ ಹೆಚ್ಚಿದ ಹಬ್ಬದ ಸಂಭ್ರಮ, ಹಣ್ಣು, ಹಂಪಲು ಖರೀದಿಗೆ ಮುಗಿಬಿದ್ದ ಜನತೆ
Last Updated 1 ಏಪ್ರಿಲ್ 2022, 15:56 IST
ಅಕ್ಷರ ಗಾತ್ರ

ಯಾದಗಿರಿ: ಕಳೆದ ಎರಡು ವರ್ಷಗಳಿಂದ ಕೋವಿಡ್‌ ಕಾರಣದಿಂದ ಕಳೆಗುಂದಿದ ಯುಗಾದಿ ಹಬ್ಬದ ಖರೀದಿ ಭರಾಟೆ ಈ ವರ್ಷ ಭರ್ಜರಿಯಾಗಿ ನಡೆದಿದೆ. ಇದಕ್ಕೆ ತಕ್ಕಂತೆ ಬೆಲೆಯೂ ಅಧಿಕವಾಗಿದ್ದು, ಹಬ್ಬಕ್ಕೆ ಬೇವು–ಬೆಲ್ಲ ಕಹಿಯಾಗಿದೆ.

2020 ಮತ್ತು 2021ರಲ್ಲಿ ಕೋವಿಡ್‌ ಲಾಕ್‌ಡೌನ್‌ ಕರಿನೆರಳು ಯುಗಾದಿ ಹಬ್ಬದ ಸಂಭ್ರಮದ ಮೇಲೆ ಬಿದ್ದಿತ್ತು. ಲಾಕ್‌ಡೌನ್‌ ಕಾರಣ ಯುಗಾದಿ ಹಬ್ಬಕ್ಕೆ ಖರೀದಿ ಮಾಡಲು ಜನ ಹಿಂಜರಿಯುವಂತೆ ಆಗಿತ್ತು. ಆದರೆ, ಈ ವರ್ಷ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಸಂಪೂರ್ಣ ಇಳಿಕೆಯಾಗಿದ್ದು, ಹಬ್ಬದ ಸಂಭ್ರಮ ಹೆಚ್ಚುವಂತೆ ಮಾಡಿದೆ.

ಬಟ್ಟೆ ಅಂಗಡಿ, ಕಿರಾಣಿ ಅಂಗಡಿ ಮತ್ತು ಆಭರಣದ ಅಂಗಡಿಗಳ ಮುಂದೆ ಜನದಟ್ಟಣೆ ಕಂಡು ಬಂತು.

ಹಬ್ಬಕ್ಕೆ ಹೆಚ್ಚಿದ ಬೆಲೆ:ಬೇವು–ಬೆಲ್ಲದ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದೆ. ನಗರದ ವಿವಿಧೆಡೆ ಹಬ್ಬದ ಸಾಮಗ್ರಿ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ. ಅಂಗಡಿ ಮುಂಗಟ್ಟುಗಳಲ್ಲಿ ಜನರು ತುಂಬಿದ್ದಾರೆ. ಪೂಜಾ ಸಾಮಗ್ರಿ ಸೇರಿದಂತೆ ವಿವಿಧ ಹಣ್ಣು ಹಂಪಲುಗಳು ದಿಢೀರ್ ಬೆಲೆ ಏರಿಕೆ ಕಂಡಿವೆ.

ಹೂವಿನ ಬೆಲೆ ಗುರುವಾರ ₹30 ಕ್ಕೆ ಒಂದು ಮೊಳ ಇದ್ದರೆ, ಶುಕ್ರವಾರ ₹50 ಕ್ಕೆ ಒಂದು ಮೊಳ ಆಗಿದೆ. ಶನಿವಾರವೂ ಇದೇ ದರ ಇರಲಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಗಾಂಧಿ ವೃತ್ತದಲ್ಲಿ ಖರೀದಿ ಭರಾಟೆ:ನಗರದ ಹೃದಯ ಭಾಗವಾದ ಮಹಾತ್ಮಗಾಂಧಿ ವೃತ್ತದಲ್ಲಿ ಹಬ್ಬದ ಖರೀದಿ ಜೋರಾಗಿದೆ. ತಳ್ಳುಗಾಡಿಗಳಲ್ಲಿ ಹಣ್ಣುಹಂಪಲು ಇಟ್ಟು ಮಾರಾಟ ಮಾಡಲಾಗುತ್ತಿದೆ. ವ್ಯಾಪಾರಿಗಳು ವಿವಿಧ ರಾಗದಲ್ಲಿ ಗ್ರಾಹಕರನ್ನು ಕೂಗಿ ಗಮನಸೆಳೆಯುತ್ತಿದ್ದಾರೆ. ಹಣ್ಣು, ಹೂವಿನ ವ್ಯಾಪಾರ ಭರ್ಜರಿಯಾಗಿದೆ.

ಇನ್ನೂ ನಗರದ ಸುಭಾಷ ವೃತ್ತದ ಹಳೆ ಬಸ್‌ ನಿಲ್ದಾಣ, ಹಳೆ ಪ್ರವಾಸಿ ಮಂದಿರ, ಹೊಸ ಬಸ್‌ ನಿಲ್ದಾಣ, ರೈಲ್ವೆ ಸ್ಟೆಷನ್‌ ರಸ್ತೆ, ಗಂಜ್‌ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ತಳ್ಳುಗಾಡಿಗಳಲ್ಲಿ ವ್ಯಾಪಾರಿಗಳು ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ.

ದಿಢೀರ್‌ ಬೆಲೆ ಏರಿಕೆ:ಯುಗಾದಿ ಹಬ್ಬದ ಅಂಗವಾಗಿ ವ್ಯಾಪಾರಿಗಳು ಬೆಲೆಯನ್ನು ಎರಡು ಪಟ್ಟು ಏರಿಕೆ ಮಾಡಿದ್ದಾರೆ. ವಿಧಿ ಇಲ್ಲದೇ ಗ್ರಾಹಕರು ಚೌಕಾಶಿ ಮಾಡಿ ಖರೀದಿ ಮಾಡುತ್ತಿದ್ದಾರೆ.

ತೆಂಗಿನಕಾಯಿ ₹20 ರಿಂದ ₹25, ಸೇಬು ₹20, ಸಂತ್ರ ₹25, ಸಪೋಟ ₹50, ಮಾವಿನ ಕಾಯಿ ₹50, ದ್ರಾಕ್ಷಿ ₹80 ಕೆಜಿ, ಡಜನ್‌ ಬಾಳೆಗೆ ₹50, ಖರ್ಜೂರ ಕೆ.ಜಿಗೆ ₹80, ದಾಳಿಂಬೆ ₹50ಕ್ಕೆ ನಾಲ್ಕು, ಬೇವು ಬೆಲ್ಲ ಪ್ಯಾಕೇಟ್‌ಗೆ ₹20 ದರ ಇದೆ.

ಕನಕಾಂಬರ, ಮಲ್ಲಿಗೆ ಚೆಂಡು ಹೂವು ಒಂದು ಮೊಳ ₹50, ಸಣ್ಣ ಗಾತ್ರದ ಕರ್ಬೂಜ ₹30, ದೊಡ್ಡ ಗಾತ್ರದ ಹಣ್ಣು ₹50, ಕಲ್ಲಂಗಡಿ ಹಣ್ಣು ಗಾತ್ರಕ್ಕೆ ಅನುಗುಣಗುವಾಗಿ ₹50, ₹60, ₹70 ದರ ಇದೆ.

ಗೋಡಂಬಿ, ಬಾದಾಮಿ, ಒಣದ್ರಾಕ್ಷಿ, ಸೌತೆಕಾಯಿ ಬೀಜ, ವಾಲ್ನಟ್‌, ಉತ್ತುತ್ತಿ, ಕಲ್ಲು ಸಕ್ಕರೆ, ಹೂವು, ಹಣ್ಣುಗಳಿಗೆ ಬೇಡಿಕೆ ಹೆಚ್ಚಿದೆ. ಬೇವಿನ ಎಲೆ ಮಾರಾಟ ಮಾಡುವುದು ಕಂಡು ಬಂದಿತು. ಹಣ್ಣು, ತರಕಾರಿ, ಹೂವು, ಪೂಜಾ ಸಾಮಗ್ರಿಗಳು ದುಬಾರಿಯಾಗಿವೆ ಎಂದು ಗ್ರಾಹಕರು ಅಲವತ್ತುಕೊಂಡರು.

ಸರಳ ಆಚರಣೆಗೆ ತಯಾರಿ
ಗುರುಮಠಕಲ್:
ಯುಗಾದಿ ಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ವಿವಿಧ ಬಗೆಯ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ಹಣ್ಣಿನ ಜತೆಗೆ ಹಬ್ಬದ ಸಾಮಗ್ರಿಗಳ ಬೆಲೆಯೂ ಕೊಂಚ ಏರಿಕೆಯಾಗಿದೆ. ಇದರ ನಡುವೆಯೂ ಗ್ರಾಹಕರು ಖರೀದಿಯಲ್ಲಿ ತೊಡಗಿದ್ದಾರೆ.

ಯುಗಾದಿ ಹಬ್ಬವು ವರ್ಷಾರಂಭದ ಹಬ್ಬವೆಂಬ ಪ್ರತೀತಿಯಿದ್ದು, ಬೇವು-ಬೆಲ್ಲದ ಪಾನಕ ತಯಾರಿಸಿ ಹಂಚಲಾಗುತ್ತದೆ. ಅದಕ್ಕೆ ಬೇಕಾದ ಒಣದ್ರಾಕ್ಷಿ, ದ್ರಾಕ್ಷಿ, ಗಸಗಸೆ, ಸೌತೆ ಬೀಜ, ಗೋಡಂಬಿ, ಬೆಲ್ಲ, ಚಿರಂಜೀವಿ ಬೀಜ ಒಳಗೊಂಡ ಬೇವು-ಬೆಲ್ಲದ ಮಸಾಲೆ ಖರೀದಿ ಮಾಡಲಾಗುತ್ತಿದೆ.

ಮೋಸಂಬಿಯ 18 ಕೆ.ಜಿ. ಬಾಕ್ಸ್ ಬೆಲೆ ₹900 ಇದ್ದದ್ದು ₹1250 ಆಗಿದೆ. ಬೆಲೆಯಲ್ಲಿ ಏರಿಕೆಯಾದರೂ ನಮಗೆ ಸಿಗುವ ಲಾಭದಲ್ಲಿ ಏರಿಕೆಯಾಗದು. ನಮಗೆ ಉಳಿಯುವುದು ₹100 ರಿಂದ ₹150 ಮಾತ್ರ. ಕಳೆದ ತಿಂಗಳಿಂದ ಹಣ್ಣಿನ ಬೆಲೆಯಲ್ಲಿ ಅಷ್ಟೇನೂ ವ್ಯತ್ಯಾಸವಾಗಿಲ್ಲ. ಗ್ರಾಹಕರಿಗೆ ಒಂದು ಕೆಜಿ ಹಣ್ಣಿಗೆ ₹10 ಅಥವಾ ₹20 ಹೆಚ್ಚಾಗಬಹುದು ಅಷ್ಟೇ ಎಂದು ಹೇಳುತ್ತಾರೆ ಹಣ್ಣಿನ ವ್ಯಾಪಾರಿ ಮಹಮ್ಮದ್ ಖಲೀಲ್.

ಹಬ್ಬಕ್ಕಾಗಿ ಹಣ್ಣು ಖರೀದಿಗೆ ಬಂದಿದ್ದೇನೆ. ಹಣ್ಣಿನ ಬೆಲೆಯಲ್ಲಿ ಹೆಚ್ಚಳವಾಗಿದೆ. ಹಬ್ಬಕ್ಕೆ ಹಣ್ಣು ಖರೀದಿ ಮಾಡದಿದ್ದರೆ ಹೇಗೆ. ಬೆಲೆಯಲ್ಲಿ ಸ್ವಲ್ಪವೇ ಏರಿಕೆಯಾಗಿದ್ದರೂ ಖರೀದಿಸುವವರಿಗೆ ಬೆಲೆ ಏರಿಕೆಯ ಹೊರೆ ತಪ್ಪದು ಎನ್ನುವುದು ಗ್ರಾಹಕ ವೆಂಕಟರೆಡ್ಡಿ ಬಾಗನೋಳ ಅವರ ಮಾತು.

ಖರ್ಜೂರ ಮತ್ತು ಬಾಳೆ ಹಣ್ಣಿನ ಬೆಲೆಯಲ್ಲಿ ಹೆಚ್ಚಿನ ಏರಿಕೆಯಾಗಿಲ್ಲ. ಬಾಳೆ ಡಜನ್ ₹30 ರಿಂದ 50, ಖರ್ಜೂರ ಕೆಜಿಗೆ ₹60, ದ್ರಾಕ್ಷಿ ಕಿಲೋ ₹60 ರಿಂದ 100, ಸೇಬು ಕಿಲೋ ₹160 ರಿಂದ 180, ಸಪೋಟಾ (ಚಿಕೂ) ₹40 ರಿಂದ 60, ಮೋಸಂಬಿ ₹100, ಕಿತ್ತಾಳೆ ₹160 ರಿಂದ 180, ದಾಳಿಂಬೆ ₹160, ಕಲ್ಲಂಗಡಿ ₹30, ಕರ್ಬೂಜಾ ₹60 ರಿಂದ 100 ಬೆಲೆ ನಿಗದಿಯಾಗಿದೆ.

ಕಳೆದ ಎರಡು ವರ್ಷಗಳಿಂದ ಕೋವಿಡ್‌ನಿಂದಾಗಿ ಹಬ್ಬಗಳು ಸಂಭ್ರಮವನ್ನು ಕಳೆದುಕೊಂಡಿದ್ದು, ಈ ಬಾರಿಯೂ ಜನ ಸರಳತೆಗೆ ಮೊರೆ ಹೋಗಿದ್ದಾರೆ.

ಬೆಲೆ ಏರಿಕೆ ಮಧ್ಯೆಯೂ ಖರೀದಿ ಜೋರು
ಹುಣಸಗಿ:
ಪಟ್ಟಣ ಸೇರಿದಂತೆ ಕೊಡೇಕಲ್ಲ, ನಾರಾಯಣಪುರ ಗ್ರಾಮಗಳಲ್ಲಿ ಯುಗಾದಿ ಹಬ್ಬದ ಖರೀದಿ ಜೋರಾಗಿತ್ತು.

ಶುಕ್ರವಾರ ಬೆಳಿಗ್ಗೆ ಹೆಚ್ಚಿನ ಜನ ಯುಗಾದಿ ಹಬ್ಬಕ್ಕಾಗಿ ಹೂವು, ತರಕಾರಿ, ಹಣ್ಣು ಮತ್ತಿತರ ವಸ್ತುಗಳ ಖರೀದಿಯಲ್ಲಿ ತೊಡಗಿಕೊಂಡಿದ್ದರು. ಬಿಸಿಲು ಹೆಚ್ಚಾದ ಕಾರಣ ಮಧ್ಯಾಹ್ನ ಪಟ್ಟಣದ ಬಜಾರ್‌ನಲ್ಲಿ ಜನ ಕಂಡುಬರಲಿಲ್ಲ.

ಸಂಜೆಯಾಗುತ್ತಿದ್ದಂತೆ ಮತ್ತೆ ಹಳ್ಳಿಗಳಿಂದ ಜನರು ಆಗಮಿಸಿ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದರು. ಮಾವಿನಕಾಯಿ ಈ ಬಾರಿ ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದ ಕಾರಣ ಒಂದು ಕಾಯಿ ₹20 ರಿಂದ 25 ರವರೆಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಬಾಳೆಹಣ್ಣು, ದ್ರಾಕ್ಷಿ, ಕರಬೂಜ, ಕಲ್ಲಂಗಡಿ ಧಾರಣೆ ಕಳೆದ ವರ್ಷದಂತೆ ₹50 ರಿಂದ 10ರ ಒಳಗೆ ಇತ್ತು. ಬೇವಿನ (ಎಚ್ಚ) ಕೂಡಾ ಹೆಚ್ಚಾಗಿರಲಿಲ್ಲ. ಆದರೂ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೇ ಜನತೆ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ ಎಂದು ಹಣ್ಣಿನ ವ್ಯಾಪಾರಿ ಪದ್ದಮ್ಮ ತಿಳಿಸಿದರು.

ಹೂವಿನ ಬೆಲೆ ಗಗನಕ್ಕೆ ಏರಿದ ಕಾರಣ ವ್ಯಾಪಾರ ಜೋರಾಗಿ ನಡೆಯಲಿಲ್ಲ.

ಮಡಿಕೆಗೆ ಬೇಡಿಕೆ: ಪ್ರತಿ ವರ್ಷವೂ ಹೊಸ ವರ್ಷದ ಅಂಗವಾಗಿ ಬೇವನ್ನು ಹೊಸ ಕುಡಿಕೆ, ಮಡಿಯಲ್ಲಿಯೇ ಕಲಿಸಬೇಕು ಎಂಬ ರೂಢಿಯ ಕಾರಣ ಸಣ್ಣ ಮಡಿಕೆ–ಕುಡಿಗೆಗಳನ್ನು ಖರೀದಿಸುತ್ತಿದ್ದಾರೆ ಎಂದು ಮಡಿಕೆ ವ್ಯಾಪಾರಿ ಶ್ರೀನಿವಾಸಪುರದ ಗ್ರಾಮದ ನಂದಣ್ಣ ಕುಂಬಾರ ಹೇಳಿದರು.

ಬೆಲೆ ಎಷ್ಟೇ ಏರಿಕೆಯಾಗಲಿ ಆದರೆ ಹಬ್ಬವನ್ನು ಆಚರಿಸಲೇಬೇಕು. ಆದ್ದರಿಂದ ಶನಿವಾರ ಹಬ್ಬಕ್ಕಾಗಿ ಹಣ್ಣುಗಳ ಖರೀದಿಗೆ ಆಗಮಿಸಿರುವುದಾಗಿ ಇಸಾಂಪುರ ಗ್ರಾಮದ ಮಹಿಳೆ ಹನುಮವ್ವ ತಿಳಿಸಿದರು.

***

ಯರಗೋಳ: ದೇವರಿಗೆ ಪುಣ್ಯಸ್ನಾನ
ಯರಗೋಳ:
ಸುತ್ತಲಿನ ಹಳ್ಳಿಗಳಲ್ಲಿ ಯುಗಾದಿ ಸಂಭ್ರಮ ಮನೆಮಾಡಿದೆ. ಗ್ರಾಮದ ದೇವರುಗಳಿಗೆ ಕೆರೆ ಮತ್ತು ನದಿಯಲ್ಲಿ ಪುಣ್ಯಸ್ನಾನ ಮಾಡಿಸಲಾಗುತ್ತಿದೆ.

ಅರಶಿಣ, ಕುಂಕುಮ, ಹೂವಿನಿಂದ ಅಲಂಕೃತಗೊಂಡ ದೇವಿ ಮೂರ್ತಿಯನ್ನು ತಲೆ ಮೇಲೆ ಹೊತ್ತ ಭಕ್ತರು, ಕೆರೆ, ನದಿ, ಹಳ್ಳಗಳಿಗೆ ತೆರಳಿ ಪುಣ್ಯಸ್ನಾನ ಮಾಡಿಸಿದರು. ಮಳೆ–ಬೆಳೆ ಕುರಿತು ಭವಿಷ್ಯ ಕೇಳಿದರು. ನಂತರ ಭಕ್ತಿಯಿಂದ ಹಾಡುತ್ತ, ಕುಣಿಯುತ್ತ ದೇವಿ ಮೂರ್ತಿಯನ್ನು ಮೆರವಣಿಗೆ ಮೂಲಕ ಗ್ರಾಮಗಳಿಗೆ ಕರೆತಂದರು.

ಹೊಸ ಸೀರೆಯುಟ್ಟ ಮಹಿಳೆಯರು, ಯುವತಿಯರು ತಲೆಯ ಮೇಲೆ ಕುಂಭ, ಕೈಯಲ್ಲಿ ಕಳಸ ಹಿಡಿದು ದೇವಿಯ ಮೆರವಣಿಗೆ ಹಿಂದೆ ಸಾಲಾಗಿ ತೆರಳುತ್ತಿದ್ದರು. ಯುವಕರು ಕೈಯಲ್ಲಿ ಛತ್ರಿ, ಕಬ್ಬು, ಬಾಳೆಗೊನೆ, ತಾಮ್ರದ ಕೊಡ ಹಿಡಿದು ಸಂಭ್ರಮಿಸಿದರು.

ಹಬ್ಬಕ್ಕೆ ಗ್ರಾಮಗಳಲ್ಲಿ ಬೇವು ತಯಾರಿಸುವ ಸಂಪ್ರದಾಯವಿದೆ. ಮಾರುಕಟ್ಟೆಯಲ್ಲಿ ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ಸಪೋಟ, ಬಾಳೆಹಣ್ಣು, ಮಾವಿನಕಾಯಿ, ಹುಣಸೆಹಣ್ಣು, ಖರ್ಜೂರ, ಗೋಡಂಬಿ, ಬಾದಾಮಿ, ಅಂಜೂರ, ಏಲಕ್ಕಿ, ಬೆಲ್ಲ ಖರೀದಿಸಿದರು. ಕುಟುಂಬ ಸಮೇತ ಯಾದಗಿರಿ ಪಟ್ಟಣಕ್ಕೆ ತೆರಳಿದ ಹಳ್ಳಿಗರು ಮಕ್ಕಳಿಗೆ ಹೊಸ ಬಟ್ಟೆಗಳನ್ನು ಕೊಡಿಸಿದರು.

ದೂರದ ಊರುಗಳಿಗೆ ತೆರಳಿದ್ದ ಕಾರ್ಮಿಕರು ಹಬ್ಬಕ್ಕೆ ಊರುಗಳಿಗೆ ಬಂದಿದ್ದಾರೆ.

ಅಲ್ಲಿಪುರ, ಕಂಚಗರಹಳ್ಳಿ, ವಡನಹಳ್ಳಿ, ಹೆಡಗಿಮದ್ರಾ, ಅಬ್ಬೆತುಮಕೂರು, ಬಂದಳ್ಳಿ, ಚಾಮನಹಳ್ಳಿ, ಖಾನಳ್ಳಿ, ಬಸವಂತಪುರ, ಹತ್ತಿಕುಣಿ, ಸಮಣ ಪುರ, ಮೋಟ್ನಳ್ಳಿ, ಕೋಟಗೇರಾ, ಬೆಳಗೆರಾ, ಅರಿಕೇರಾ( ಬಿ), ಮುದ್ನಾಳ, ಹೊನಗೇರಾ ಗ್ರಾಮಗಳಲ್ಲಿ ಯುಗಾದಿ ಸಂಭ್ರಮ ಮನೆ ಮಾಡಿದೆ.

***

ಹಣ್ಣಿಗೆ ಬೇಡಿಕೆ ಹೆಚ್ಚಳ
ಶಹಾಪುರ:
ಎರಡು ವರ್ಷಗಳ ಕಾಲ ಕೋವಿಡ್ ಸಂಕಷ್ಟದಿಂದ ಬಸವಳಿದ ಜನ ಬದುಕಿನ ಉತ್ಸಾಹ ಕಳೆದುಕೊಂಡಿದ್ದರು. ಕೋವಿಡ್ ಸಂಕಷ್ಟ ಸದ್ಯಕ್ಕೆ ಮಾಯವಾಗಿದ್ದರಿಂದ ಹೊಸ ವರ್ಷ ಯುಗಾದಿ ಹಬ್ಬವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲು ಜನರು ಸಿದ್ಧತೆ ಮಾಡಿಕೊಂಡಿದ್ದಾರೆ.

ಸಿದ್ಧತೆಯ ಭಾಗವಾಗಿ ಶುಕ್ರವಾರ ಸಾಮಗ್ರಿಗಳನ್ನು ಖರೀದಿಸಲು ಸಂತೆಯಲ್ಲಿ ಜನತೆ ಮುಗಿ ಬಿದ್ದಿರುವುದು ಕಂಡುಬಂತು.

ಪೂಜಾ ಸಾಮಗ್ರಿ ಸೇರಿದಂತೆ ಹಣ್ಣು–ಹಂಪಲು, ಬೇವು ತಯಾರಿಸಲು ಬಳಸುವ ಸಾಮಗ್ರಿಗಳ ಖರೀದಿ ಹೆಚ್ಚಾಗಿತ್ತು. ಮಣ್ಣಿನ ಮಡಕೆ ಒಂದಕ್ಕೆ ₹100 ರಿಂದ 150 ಇತ್ತು.

‘ಕಳೆದ ವರ್ಷ ತಯಾರಿಸಿದ್ದ ಮಡಕೆಗಳು ಖರೀದಿ ಆಗದೆ ಉಳಿದುಕೊಂಡಿದ್ದವು. ಆದರೆ ಈ ಬಾರಿ ಜನ ಹಬ್ಬ ಆಚರಣೆಗೆ ಹೆಚ್ಚು ಮಡಕೆಗಳನ್ನು ಖರೀದಿಸುತ್ತಿದ್ದಾರೆ’ ಎನ್ನುತ್ತಾರೆ ಮಡಕೆ ವ್ಯಾಪಾರಿ ಸದಾಶಿವ ಹುಣಸಗಿ.

ತೆಂಗಿನಕಾಯಿ ಒಂದಕ್ಕೆ ₹20, ಹೂವಿನ ಹಾರ ಒಂದಕ್ಕೆ ₹50, ಮಾವಿನಕಾಯಿ ಒಂದಕ್ಕೆ ₹50 ಹೀಗೆ ವಿವಿಧ ಬಗೆಯ ಹಣ್ಣು ದುಬಾರಿ ಆಗಿವೆ.

ಗೋಡಂಬಿ, ಬಾದಾಮಿ, ಒಣದ್ರಾಕ್ಷಿ , ಸೌತೆಕಾಯಿ ಬೀಜ, ಉತ್ತುತ್ತಿ, ಕಲ್ಲು ಸಕ್ಕರೆ, ಹೂವು ಹಣ್ಣುಗಳಿಗೆ ಬೇಡಿಕೆ ಇಮ್ಮಡಿಗೊಂಡಿತ್ತು.

ಸಾಮಾನ್ಯವಾಗಿ ವಾರದ ಸಂತೆಯಲ್ಲಿ ತರಕಾರಿ ಸೇರಿದಂತೆ ಎಲ್ಲ ಪದಾರ್ಥಗಳ ದರ ಕಡಿಮೆ ಇರುತ್ತದೆ. ಆದರೆ ಹಬ್ಬದ ಹಿನ್ನಲೆಯಲ್ಲಿ ಬೆಲೆ ಸ್ವಲ್ಪ ಜಾಸ್ತಿಯೇ ಇತ್ತು. ತಳ್ಳು ಗಾಡಿ ಮತ್ತು ಬೀದಿಬದಿ ವ್ಯಾಪಾರಿಗಳು ಸುಡು ಬಿಸಿಲಿನಲ್ಲಿ ಕೊಡೆ ಹಿಡಿದುಕೊಂಡು ವ್ಯಾಪಾರ ನಡೆಸಿದರು. ಜನದಟ್ಟಣೆ ಹೆಚ್ಚಾದ ಕಾರಣ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

***

ಯುಗಾದಿ ಹಬ್ಬದ ಅಂಗವಾಗಿ ಬೆಂಗಳೂರು, ಚಿಕ್ಕಬಳ್ಳಾಪುರ, ತುಮಕೂರು ಕಡೆಯಿಂದ ಹೂವು ತರಿಸಲಾಗಿದೆ. ಶನಿವಾರವೂ ಇದೇ ದರ ಇರಲಿದೆ.
-ಮಂಜು ಹೂಗಾರ, ಹೂವಿನ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT