ಮಂಗಳವಾರ, ನವೆಂಬರ್ 19, 2019
22 °C
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಸಲಹೆ

ಅಧಿಕ ಲಾಭಕ್ಕಾಗಿ ಅಣಬೆ ಬೇಸಾಯ ಸೂಕ್ತ :ಡಾ.ಮಲ್ಲಿಕಾರ್ಜುನ ಕೆಂಗನಾಳ

Published:
Updated:

ಯಾದಗಿರಿ: ‘ಜಿಲ್ಲೆಯಲ್ಲಿ ಭತ್ತ ಬೆಳೆಯನ್ನು ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಬಹುತೇಕ ರೈತರು ಭತ್ತದ ಹುಲ್ಲನ್ನು ಸುಡುವ ರೂಢಿಯಲ್ಲಿದೆ. ಆದರೆ, ಇದೇ ಭತ್ತವನ್ನು ಅಣಬೆ ಬೇಸಾಯಕ್ಕೆ ಬಳಸಿಕೊಂಡು ಹೆಚ್ಚಿನ ಆದಾಯ ಪಡೆಯಬಹುದಾಗಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಕೆಂಗನಾಳ ಹೇಳಿದರು.

ಜಿಲ್ಲೆಯ ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಅಣಬೆ ಬೇಸಾಯ ಕುರಿತು ಹಮ್ಮಿಕೊಂಡಿದ್ದ ತರಬೇತಿಯಲ್ಲಿ ಅವರು ಮಾತನಾಡಿದರು.

‘ರೈತರು ಕೃಷಿಯೊಂದಿಗೆ ಉಪ ಕಸುಬುಗಳನ್ನು ಅಳವಡಿಸಿಕೊಂಡರೆ ಮಾತ್ರ ಕೃಷಿಯಲ್ಲಿ ಅಧಿಕ ಲಾಭ ಪಡೆಯಬಹುದು. ವರ್ಷದ ಬಹು ದಿನಗಳವರೆಗೆ ಕೆಲಸವನ್ನು ಗ್ರಾಮೀಣ ಪ್ರದೇಶದಲ್ಲಿಯೇ ಪಡೆದುಕೊಳ್ಳಬಹುದು. ಅಣಬೆ ಬೇಸಾಯಕ್ಕೆ ಅವಶ್ಯಕವಾದ ಭತ್ತದ ಹುಲ್ಲು ಯಥೇಚ್ಛವಾಗಿ ದೊರೆಯುವುದರಿಂದ ಗ್ರಾಮೀಣ ಭಾಗದ ಯುಕವರು ಮತ್ತು ಯುವತಿಯರು ಈ ಉಪ ಕಸುಬು ಅಳವಡಿಸಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಕೃಷಿ ವಿಜ್ಞಾನ ಕೇಂದ್ರದಿಂದ ಆಸಕ್ತರಿಗೆ ಅಣಬೆ ಬೇಸಾಯದ ಸಂಪೂರ್ಣ ತಾಂತ್ರಿಕತೆ ಒದಗಿಸಿ ಮಾರುಕಟ್ಟೆ ಮಾಹಿತಿ ನೀಡಲಾಗುವುದು. ಹೆಚ್ಚಿನ ಸಂಖ್ಯೆಯ ರೈತರು ಇದರ ಲಾಭ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ತೋಟಗಾರಿಕೆ ವಿಜ್ಞಾನಿ ಸತೀಶ ಕಾಳೆ ಮಾತನಾಡಿ, ರೈತರಿಗೆ ಅಣಬೆ ಬೇಸಾಯದ ವಿವಿಧ ಹಂತಗಳನ್ನು  ಅದಕ್ಕೆ ಬೇಕಾಗುವ ಪರಿಕರಗಳ ಬಗ್ಗೆ ಪರಿಚಯ ಮಾಡಿಸಿದರು. ಅಣಬೆ ಬೇಸಾಯಕ್ಕೆ ಬೇಕಾಗುವ ಪರಿಸರ, ಹವಾಮಾನ ಮತ್ತು ವಿವಿಧ ಅಣಬೆ ಜಾತಿಗಳ ಕುರಿತು ಮಾಹಿತಿ ನೀಡಿದರು.

ತೋಟಗಾರಿಕೆ ಇಲಾಖೆಯಿಂದ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಅಣಬೆ ಬೇಸಾಯದ ಚಲನಚಿತ್ರಗಳನ್ನು ರೈತರಿಗೆ ತೋರಿಸಲಾಯಿತು.

ಡಾ.ಉಮೇಶ ಬಾರಿಕರ, ತಾಲ್ಲೂಕಿನಿಂದ ಆಗಮಿಸಿದ ರೈತರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)