ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರುಚಿತ್ರದ ಮೂಲಕ ಜನ ಜಾಗೃತಿ: ಶಿಕ್ಷಕರೇ ತಯಾರಿಸಿದ ‘ಸ್ವಚ್ಛ ಶಾಲೆ ಸ್ವಸ್ಥ ಸಮಾಜ’

Last Updated 6 ನವೆಂಬರ್ 2022, 6:02 IST
ಅಕ್ಷರ ಗಾತ್ರ

ಸುರಪುರ: ತಾಲ್ಲೂಕಿನ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮೌನೇಶ ಕಂಬಾರ ಅವರ ಕಲ್ಪನೆಯಲ್ಲಿ ಮೂಡಿಬಂದ ‘ಸ್ವಚ್ಛ ಶಾಲೆ ಸ್ವಸ್ಥ ಸಮಾಜ’ ಎಂಬ ಕಿರುಚಿತ್ರ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ 25 ಸಾವಿರಕ್ಕೂ ಹೆಚ್ಚು ಜನರು ಕಿರುಚಿತ್ರ ವೀಕ್ಷಿಸಿದ್ದಾರೆ.

ಸಮಾನ ಮನಸ್ಕ ಶಿಕ್ಷಕರೊಂದಿಗೆ ತಯಾರಿಸಿದ ಕಿರುಚಿತ್ರಕ್ಕೆ ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲೆಡೆಯಿಂದ ಅಭಿನಂದನೆ ವ್ಯಕ್ತವಾಗುತ್ತಿದೆ. ಪರಿಣಾಮಕಾರಿ ಸಂದೇಶವಿರುವ ಚಿತ್ರದಿಂದ ಬಹುತೇಕ ಶಾಲೆಗಳು ಈಗ ಸ್ವಚ್ಛತೆಯತ್ತ ದಾಪುಗಾಲು ಇಡುತ್ತಿವೆ.

ದೂರದ ಇಳಕಲ್ ಸೇರಿದಂತೆ ಇತರ ಶಾಲೆಗಳಲ್ಲಿ ‘ಸ್ವಚ್ಛ ಶಾಲೆ ಸ್ವಸ್ಥ ಸಮಾಜ’ ಎಂಬ ಗೋಡೆ ಬರಹ ಬರಿಸಿದ್ದು ಚಿತ್ರದ ಪ್ರಾಮುಖ್ಯತೆ ಮತ್ತು ಪರಿಣಾಮಕ್ಕೆ ಸಾಕ್ಷಿ.

ಶಾಲೆಗಳ ಸುತ್ತಮುತ್ತಲೂ ಅದರಲ್ಲೂ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಜೂಜಾಡುವುದು, ಮದ್ಯಪಾನ ಮಾಡುವುದು, ಬಹಿರ್ದೆಸೆಗೆ ಹೋಗುವುದು ಸೇರಿದಂತೆ ನಡೆಯುವ ಅನೈತಿಕ ಚಟುವಟಿಕೆಗಳು ಈ ಚಿತ್ರ ನಿರ್ಮಿಸಲು ಪ್ರೇರಣೆ.

ಸ್ನೇಹಿತರೆಲ್ಲರೂ ಸೇರಿ ಸರ್ಕಾರಿ ಶಾಲೆಯ ಆವರಣದಲ್ಲಿ ನಿತ್ಯವೂ ಶಾಲೆ ಬಿಟ್ಟ ಮೇಲೆ ಜೂಜಾಟ ಆಡುತ್ತಿರುತ್ತಾರೆ. ಸ್ನೇಹಿತನಿಗೆ ಗಂಡು ಮಗು ಜನಿಸಿತೆಂದು ಪಾರ್ಟಿ ಮಾಡಿ ಗುಟ್ಕಾ ತಿಂದು, ಸಿಗರೇಟು ಸೇದಿ ಗಲೀಜು ಮಾಡುತ್ತಾರೆ. ತಂದೆಗೆ ಅಂಗಡಿಯಿಂದ ಗುಟ್ಕಾ ತಂದು ಕೊಡುತ್ತಿದ್ದ ವಿದ್ಯಾರ್ಥಿ ಶಾಲೆ ಆವರಣದಲ್ಲಿ ಬಿದ್ದ ಪಾಕೆಟ್‍ನಲ್ಲಿ ಉಳಿದಿದ್ದ ಗುಟ್ಕಾ ತಿನ್ನಲು ನೋಡುತ್ತಾನೆ.

ಅಷ್ಟರಲ್ಲಿ ಆಗಮಿಸಿದ ಮುಖ್ಯ ಶಿಕ್ಷಕ ವಿದ್ಯಾರ್ಥಿ ಕೈಯಲ್ಲಿದ್ದ ಗುಟ್ಕಾ ಪಾಕಿಟ್‍ ಕಸಿದು ಎಸೆಯುತ್ತಾನೆ. ಅದೇ ಸಮಯಕ್ಕೆ ವಿದ್ಯಾರ್ಥಿಯ ತಂದೆ ಬರುತ್ತಾನೆ. ತನ್ನ ಮಗ ಗುಟ್ಕಾ ತಿನ್ನಲು ಹವಣಿಸದ್ದು ಆತನ ಮೇಲೆ ಪರಿಣಾಮ ಬೀರುತ್ತದೆ.

ತಾನು ಇದುವರೆಗೂ ಎಂತಹ ಕೆಟ್ಟ ಕೆಲಸಗಳನ್ನು ಮಾಡಿದೆ. ತನ್ನ ಮಗನೂ ನನ್ನ ಹಾದಿಯನ್ನೆ ಹಿಡಿಯತ್ತಿದ್ದಾನೆ ಎಂದು ಪಶ್ಚಾತ್ತಾಪ ಪಡುತ್ತಾನೆ. ಶಾಲೆಯ ಆವರಣದಲ್ಲಿ ಕೆಟ್ಟ ಚಟಗಳನ್ನು ಮಾಡುತ್ತಿದ್ದ ಎಲ್ಲರೂ ಸೇರುತ್ತಾರೆ. ಮುಖ್ಯ ಶಿಕ್ಷಕ ಕೆಟ್ಟ ಚಟದ ಪರಿಣಾಮ ಮಕ್ಕಳ ಮೇಲೆ ಬೀರುವ ಬಗ್ಗೆ, ಶಾಲೆ ಸ್ವಚ್ಛವಾಗಿಡುವ ಬಗ್ಗೆ ತಿಳಿವಳಿಕೆ ನೀಡುತ್ತಾನೆ. ಎಲ್ಲರೂ ಕೆಟ್ಟ ಚಟ ತ್ಯಜಿಸುವುದರ ಜತೆಶಾಲೆ ಸ್ವಚ್ಛವಾಗಿಡುವ ಬಗ್ಗೆ ಪಣ ತೊಡುತ್ತಾರೆ.

ಚಿತ್ರೀಕರಣ, ನಟನೆ, ಸಂಗೀತ, ಸಂಭಾಷಣೆ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಅಮರೇಶ ಗುತ್ತೇದಾರ ಕ್ಯಾಮೆರಾ ವರ್ಕ್‌ ಮಾಡಿದ್ದಾರೆ. ನಾಗರಾಜ ಮಾಂಡ್ರೆ ನಿರ್ದೇಶಿಸಿದ್ದಾರೆ. ಮೌನೇಶ ಕಂಬಾರ ಕಥೆ, ಚಿತ್ರಕಥೆ ಬರೆದು ನಟಿಸಿದ್ದಾರೆ.

ರಾಜನಗೌಡ ಪಾಟೀಲ, ವಿರೇಶ ತೇರದಾಳ, ಶಿವಾನಂದ ಲಾಳಸಂಗಿ, ಈಶ್ವರ ಮಲ್ಲಾಡದ, ನಾಗನಾಥ, ಕಾಳಪ್ಪ ಬಡಿಗೇರ, ಕಿರಣಕುಮಾರ, ಚನ್ನಪ್ಪ, ಗ್ಯಾನಪ್ಪ ಅವರು ನಟಿಸಿದ್ದಾರೆ. 20 ನಿಮಿಷದ ಈ ಚಿತ್ರಕ್ಕೆ ಮೌನೇಶ ಮತ್ತು ನಾಗರಾಜ ಹಣ ತೊಡಗಿಸಿದ್ದಾರೆ.

ಕಿರುಚಿತ್ರವನ್ನು ವಿಧಾನ ಪರಿಷತ್ ಸದಸ್ಯರ ಶಶೀಲ್ ನಮೋಶಿ, ಜಿಲ್ಲಾಧಿಕಾರಿ ಆರ್. ಸ್ನೇಹಿಲ್ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT