ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾವಾಸ್ಯೆ: ಮೈಲಾಪುರಕ್ಕೆ ದರ್ಶನಕ್ಕೆ ಬಂದ ಭಕ್ತರು

ಏಕಾಏಕಿ ನಿಷೇಧಾಜ್ಞೆ ಹೇರಿದ ಜಿಲ್ಲಾಡಳಿತ; ಭಕ್ತರ ಆಕ್ರೋಶ
Last Updated 8 ಆಗಸ್ಟ್ 2021, 14:43 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿನ ಮೈಲಾಪುರದ ಮೈಲಾರಲಿಂಗೇಶ್ವರ ದೇವಸ್ಥಾನದ ಬಳಿ ಶ್ರಾವಣಮಾಸ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ ಎಂಬ ಕಾರಣಕ್ಕೆ ದೇವಸ್ಥಾನದ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಶನಿವಾರ ರಾತ್ರಿ ಆದೇಶ ಹೊರಡಿಸಿದ್ದು, ಭಕ್ತರಿಗೆ ತಿಳಿಯದೇ ಇದ್ದ ಕಾರಣ ತಂಡೋಪ ತಂಡವಾಗಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ಭಾನುವಾರ ಭೀಮನ ಅಮಾವಾಸ್ಯೆ ಇದ್ದ ಕಾರಣ ಜಿಲ್ಲೆಯಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ದೇವಸ್ಥಾನಕ್ಕೆ ಭಕ್ತರು ಆಗಮಿಸಿದ್ದರು. ಪ್ರತಿ ಅಮಾವಾಸ್ಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮೈಲಾಪುರಕ್ಕೆ ಆಗಮಿಸುತ್ತಿದ್ದರು.

ಬೆಳಿಗ್ಗೆ ಬಂದವರಿಗೆ ಮಾತ್ರ ದೇವರ ದರ್ಶನ ಸಿಕ್ಕರೆ 10 ಗಂಟೆ ನಂತರ ಬಂದವರಿಗೆ ದೇವಸ್ಥಾನದ ಒಳಗಡೆ ಬಿಡಲಿಲ್ಲ. ಇದರಿಂದ ಭಕ್ತರು ದೇವಸ್ಥಾನ ಕೆಳಗಿರುವ ಪಾದಗಟ್ಟೆಗೆ ಕಾಯಿ ಒಡೆದು, ಬಂಢಾರ ಹಚ್ಚಿಕೊಂಡು ದರ್ಶನ ಪಡೆಯದೇ ನಿರಾಶೆಯಿಂದ ಮರಳಿದರು.

ಪ್ರತಿವಾರ ಭಾನುವಾರ ಮತ್ತು ಸೋಮವಾರ ದೇವಸ್ಥಾನ ಮುಚ್ಚಲು ಆದೇಶ ನೀಡಿ ನಿಷೇಧಾಜ್ಞೆ ಜಾರಿ ಮಾಡಿದರೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮೈಲಾಪುರಕ್ಕೆ ಆಗಮಿಸಿದ್ದರು.

ದೇವಸ್ಥಾನ ಮುಚ್ಚಿ, ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತ ಸ್ಥಿತಿ ನಿರ್ಮಾಣವಾಗಿತ್ತು. ದೇವಸ್ಥಾನ ಸಂಪರ್ಕಿಸುವ ಸ್ಥಳಗಳಲ್ಲಿ ಮರಂ ಹಾಕಿ ರಸ್ತೆ ಬಂದ್‌ ಮಾಡಲಾಗಿತ್ತು. ಪೊಲೀಸರು ಬೀಡು ಬಿಟ್ಟು ಬಂದೋಬಸ್ತ್‌ ಮಾಡಿದ್ದರು.

ಎ ಗ್ರೇಡ್‌ ದೇವಸ್ಥಾನ: ಧಾರ್ಮಿಕದತ್ತಿ ಇಲಾಖೆಗೆ ಒಳಪಡುವ ಎ ಗ್ರೇಡ್ ದೇವಸ್ಥಾನ ಇದಾಗಿದ್ದು, ಅಪಾರ ಪ್ರಮಾಣದ ಭಕ್ತರನ್ನು ಹೊಂದಿದೆ. ಎರಡು ದಿನಗಳ ಮುಂಚೆಯೇ ಈ ಬಗ್ಗೆ ಮುಂಜಾಗ್ರತೆ ವಹಿಸಿದ್ದರೆ ಇಷ್ಟು ಸಂಖ್ಯೆ ಭಕ್ತರು ಸೇರುತ್ತಿರಲಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.

ವ್ಯಾಪಾರಿಗಳಿಗೆ ನಷ್ಟ: ಏಕಾಏಕಿ ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ವ್ಯಾಪಾರಿಗಳಿಗೆ ನಷ್ಟ ಉಂಟಾಯಿತು. ಹೂ, ಕಾಯಿ, ಕರ್ಪೂರ, ವಿಭೂತಿ ಭರ್ಜರಿ ವ್ಯಾಪಾರ ಆಗುತ್ತಿತ್ತು. ನಿಷೇಧಾಜ್ಞೆ ಜಾರಿಯಾಗಿದ್ದರಿಂದ ವ್ಯಾಪಾರಿಗಳು ಅಂಗಡಿ ಮುಂಗಟ್ಟು ಮುಚ್ಚಿ ವ್ಯಾಪಾರವಿಲ್ಲದೆ ಬೇಸರದಲ್ಲಿ ಕುಳಿತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT