ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿ

ಕೋವಿಡ್ ಮಾರ್ಗಸೂಚಿ ಕಡ್ಡಾಯ ಜಾರಿಗೆ ಜಿಲ್ಲಾಧಿಕಾರಿ ಆರ್. ರಾಗಪ್ರಿಯಾ ಸೂಚನೆ
Last Updated 22 ಏಪ್ರಿಲ್ 2021, 6:25 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸರ್ಕಾರದ ಆದೇಶದಂತೆ ಏಪ್ರಿಲ್ 21ರಿಂದ ಮೇ 4ರವರೆಗೆ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ರಾತ್ರಿ ಕರ್ಫ್ಯೂ ಜಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ರಾಗಪ್ರಿಯಾ ಆರ್. ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಏಪ್ರಿಲ್ 23ರಂದು ರಾತ್ರಿ 9ರಿಂದ ಏಪ್ರಿಲ್ 25 ಬೆಳಿಗ್ಗೆ 6ರವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಯಾಗಲಿದೆ. ಪ್ರತಿಯೊಬ್ಬರು ನಿಯಮ ಪಾಲಿಸುವ ಮೂಲಕ ಕೊರೊನಾ ತಡೆಗೆ ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.

ಬೆಳಿಗ್ಗೆ 6ರಿಂದ 10ರವರೆಗೆ ಖರೀದಿ: ಸಾರ್ವಜನಿಕರಿಗೆ ಅವಶ್ಯಕವಾಗಿರುವ ಅಂಗಡಿಗಳಲ್ಲಿ ದಿನಸಿ ಸಾಮಗ್ರಿ, ಹಣ್ಣು, ತರಕಾರಿ, ಹಾಲು, ಮಾಂಸ ಹಾಗೂ ಮೀನು ಮಾರಾಟಕ್ಕೆ ಬೆಳಿಗ್ಗೆ 6ರಿಂದ 10ರವರೆಗೆ ಅವಕಾಶ ಕಲ್ಪಿಸಲಾಗಿದೆ. ಅತ್ಯವಶ್ಯಕ ವಸ್ತುಗಳನ್ನು ಹೋಮ್ ಡೆಲಿವರಿ ಮಾಡಲು ಕೋವಿಡ್-19 ನಿಯಮಾವಳಿ ಪಾಲನೆಯೊಂದಿಗೆ ಅನುಮತಿ ನೀಡಲಾಗಿದೆ.

ರಾತ್ರಿ ಕರ್ಫ್ಯೂ ಮಾರ್ಗಸೂಚಿ: ರಾತ್ರಿ ಕರ್ಫ್ಯೂ ಅವಧಿಯಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 6 ಗಂಟೆಯವರೆಗೆ ವೈಯಕ್ತಿಕವಾಗಿ ಅತ್ಯವಶ್ಯಕ ಚಟುವಟಿಕೆಗಳಿಗೆ ಹೊರತುಪಡಿಸಿ ಸಂಚರಿಸುವುದನ್ನು ನಿಷೇಧಿಸಿದೆ. ರೋಗಿಗಳು ಹಾಗೂ ಅವರ ಸಹಾಯಕರಿಗೆ ತುರ್ತು ಸಂದರ್ಭದಲ್ಲಿ ಸಂಚರಿಸಲು ಅನುಮತಿಸಿದೆ. ನೌಕರರು, ಇಂಟರ್ನೆಟ್ ಸೇವೆ ಒದಗಿಸುವ ನೌಕರರು, ತುರ್ತು ಸೇವೆ ಒದಗಿಸುವ ಐ.ಟಿ. ಕಂಪನಿಯ ನೌಕರರಿಗೆ ಸಂಚರಿಸಲು ಅನುಮತಿಸಿದೆ. ಎಲ್ಲಾ ಕೈಗಾರಿಕಾ ಕಂಪನಿಗಳಲ್ಲಿ ರಾತ್ರಿ ಪಾಳೆಯಲ್ಲಿ ಕೆಲಸ ನಿರ್ವಹಿಸುವ ನೌಕರರಿಗೂ ಸಂಚಾರಕ್ಕೆ ಅನುಮತಿ ನೀಡಿದ್ದು, ನೌಕರ ವರ್ಗದವರು ಕಂಪನಿ, ಸಂಸ್ಥೆಯಿಂದ ನೀಡಿರುವ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು.

ಆರೋಗ್ಯ ಮತ್ತು ತುರ್ತು ಸೇವೆ ಒದಗಿಸುವ ಔಷಧ ಅಂಗಡಿಗಳು, ಆರೋಗ್ಯ ಕೇಂದ್ರಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸಬೇಕು. ಇತರೆ ಔದ್ಯಮಿಕ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಸರಕು ಸಾಗಾಣಿಕೆಗಳಿಂದ ತುಂಬಿರುವ ವಾಹನಗಳು, ಹೋಮ್ ಡೆಲಿವರಿ ಮಾಡುವ ವಾಹನಗಳು, ಇ–ಕಾಮರ್ಸ್ ಕಂಪನಿಯ ವಾಹನಗಳು, ಟೆಲಿಕಾಂ ಸಂಸ್ಥೆಯ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ವಾರಾಂತ್ಯದ ಕರ್ಫ್ಯೂ ಮಾರ್ಗಸೂಚಿಗಳು: ಕೇಂದ್ರ ಮತ್ತು ರಾಜ್ಯ ಸರ್ಕಾರಿ ವಲಯಗಳಲ್ಲಿ ಹಾಗೂ ಕೋವಿಡ್–19 ತುರ್ತು ಪರಿಸ್ಥಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿ–ಸಿಬ್ಬಂದಿಗೆ ಸಂಚರಿಸಲು ಅನುವು ಮಾಡಿಕೊಡಲಾಗಿದೆ.

ಎಲ್ಲಾ ಕೈಗಾರಿಕಾ ಕಂಪನಿ, ಸಂಸ್ಥೆ, ತುರ್ತು ಸೇವೆ ಒದಗಿಸುವ ಸಂಸ್ಥೆಗಳಿಗೆ 24 ಗಂಟೆ ಕೆಲಸ ನಿರ್ವಹಿಸಲು ನೌಕರರಿಗೆ ಅನುಮತಿಸಿದೆ. ನೌಕರರು, ಟೆಲಿಕಾಂ ಸಂಸ್ಥೆಯ ವಾಹನಗಳು, ಇಂಟರ್ನೆಟ್ ಸೇವೆ ಒದಗಿಸುವ ನೌಕರರು, ತುರ್ತು ಸೇವೆ ಒದಗಿಸುವ ಐ.ಟಿ. ಕಂಪನಿಯ ನೌಕರರಿಗೆ ಸಂಚರಿಸಲು ಅನುಮತಿಸಿದ್ದು, ಕೆಲಸ ನಿರ್ವಹಿಸುವ ಸಂಸ್ಥೆಯಿಂದ ನೀಡಲಾದ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು. ರೋಗಿಗಳು ಹಾಗೂ ಅವರ ಸಹಾಯಕರಿಗೆ, ಸಂಬಂಧಿಗಳಿಗೆ ತುರ್ತು ಸಂದರ್ಭದಲ್ಲಿ ಹಾಗೂ ವ್ಯಾಕ್ಸಿನೇಶನ್ ಪಡೆಯಲು ತೆರಳುವ ಸಾರ್ವಜನಿಕರಿಗೆ ಗುರುತಿನ ಚೀಟಿಯೊಂದಿಗೆ ಸಂಚರಿಸಲು ಅನುಮತಿ ನೀಡಲಾಗಿದೆ.

ಮದುವೆ ಸಮಾರಂಭಗಳಿಗೆ 50 ಜನರು ಮೀರದಂತೆ ಮತ್ತು ಅಂತ್ಯಕ್ರಿಯೆ, ಶವಸಂಸ್ಕಾರಕ್ಕೆ 20ಕ್ಕಿಂತ ಹೆಚ್ಚಿನ ಜನರು ಮೀರದಂತೆ ಕೋವಿಡ್–19 ಮಾರ್ಗಸೂಚಿ ಷರತ್ತಿಗೊಳಪಟ್ಟು ಅನುಮತಿಸಿದೆ. ಎಲ್ಲಾ ಚಿತ್ರಮಂದಿರಗಳು, ಶಾಪಿಂಗ್ ಮಾಲ್, ಜಿಮ್ ಕೇಂದ್ರಗಳು, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಸ್ವಿಮ್ಮಿಂಗ್ ಪೂಲ್ಸ್, ಮನೋರಂಜನೆ ಪಾರ್ಕ್‍ಗಳು, ಬಾರ್ ಮತ್ತು ಅಡಿಟೋರಿಯಮ್‌ಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ.

ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಸಾರ್ವಜನಿಕ ಪೂಜೆ ಮಾಡುವುದನ್ನು ನಿರ್ಬಂಧಿಸಿದ್ದು, ದಿನ ನಿತ್ಯದ ಧಾರ್ಮಿಕ ಪೂಜೆ ಕಾರ್ಯಕ್ರಮಗಳನ್ನು ಸಾರ್ವಜನಿಕರು ಇಲ್ಲದೆ ಮುಂದುವರೆಸಲು ಅನುವು ಮಾಡಿಕೊ ಡಲಾಗಿದೆ. ಕಟ್ಟಡ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.

ಪಾರ್ಸೆಲ್‌ಗೆ ಮಾತ್ರ ಅವಕಾಶ

ಕರ್ಫ್ಯೂ ಸಂದರ್ಭದಲ್ಲಿ ರೆಸ್ಟೊರೆಂಟ್ ಮತ್ತು ಹೋಟೆಲ್‍ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಹಾಗೂ ಹೋಮ್ ಡೆಲಿವರಿಗೆ ಅನುಮತಿ ನೀಡಲಾಗಿದೆ.

ರಾತ್ರಿಯಲ್ಲಿ ದೂರ ಪ್ರಯಾಣದ ಬಸ್ ಸೇವೆ, ರೈಲು ಹಾಗೂ ವಿಮಾನ ಸಂಚಾರಕ್ಕೆ ಅನುಮತಿಸಿದ್ದು, ಇಂತಹ ಪ್ರಯಾಣಿಕರಿಗೆ ವೈಯಕ್ತಿಕ, ಸಾರ್ವಜನಿಕ ಹಾಗೂ ಟ್ಯಾಕ್ಸಿ ಸಂಚಾರಕ್ಕೆ ಕೋವಿಡ್-19 ನಿಯಮಾವಳಿಯನ್ವಯ ಅನುಮತಿ ನೀಡಲಾಗಿದೆ. ಪ್ರವಾಸದ ಸಂದರ್ಭದಲ್ಲಿ ಪ್ರಯಾಣದ ಟಿಕೆಟ್ ಕಡ್ಡಾಯವಾಗಿ ಹೊಂದಿರಲೇಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT