ಬುಧವಾರ, ಜನವರಿ 19, 2022
27 °C

ಸುರಪುರ: ಅರ್ಧ ಶತಮಾನಕ್ಕೂ ಹಳೆಯದಾದ ಶಾಲೆಯಲ್ಲಿಲ್ಲ ಕನಿಷ್ಠ ಮೂಲಸೌಕರ್ಯ

ಅಶೋಕ ಸಾಲವಾಡಗಿ Updated:

ಅಕ್ಷರ ಗಾತ್ರ : | |

Prajavani

ಸುರಪುರ: 1966ರಲ್ಲಿ ಆರಂಭಗೊಂಡ ಸರ್ಕಾರಿ ಕನ್ಯಾ ಪ್ರೌಢಶಾಲೆ ಮಾರುಕಟ್ಟೆಯ ಹೃದಯ ಭಾಗದಲ್ಲಿದೆ. ವಾಹನ ಸಂಚಾರ, ವ್ಯಾಪಾರದ ಭರಾಟೆ, ಜನರ ಗದ್ದಲದ ಮಧ್ಯೆ ಮಕ್ಕಳ ಓದಿಗೆ ತೊಂದರೆಯಾಗುತ್ತಿದೆ ಎಂದು ಪೋಷಕರು ದೂರಿದ್ದಾರೆ.

ಹಳೆಯ ಅರಮನೆಯನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ಶಾಲೆ ನಡೆಸುತ್ತಿದೆ. 8, 9 ಮತ್ತು 10 ನೇ ತರಗತಿಯಲ್ಲಿ ಒಟ್ಟು 543 ಮಕ್ಕಳು ಓದುತ್ತಿದ್ದಾರೆ. ಎ ಮತ್ತು ಬಿ ವಿಭಾಗ ಮಾಡಲಾಗಿದೆ. ಶಾಲಾ ಕಟ್ಟಡ ಹಳೆಯದಾಗಿದ್ದು, ಶಿಕ್ಷಕರು ಭಯದಿಂದಲೇ ಪಾಠ ಮಾಡುವಂತಾಗಿದೆ.

ಎರಡು ಕೋಣೆಗಳು ಸಂಪೂರ್ಣ ಬಿದ್ದು ಹೋಗಿವೆ. ಉಳಿದ ಕೋಣೆಗಳ ಛತ್‌ ಶಿಥಿಲಗೊಂಡಿವೆ. ಉಳಿದ ಚಿಕ್ಕ ಕೋಣೆಗಳಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಬಹಳಷ್ಟು ವಿದ್ಯಾರ್ಥಿಗಳು ಗೈರಾಗುತ್ತಿರುವುದರಿಂದ ಜಾಗ ಹೇಗೋ ಸಾಲುತ್ತಿದೆ.

ಒಂದೇ ಶೌಚಾಲಯ ಇದ್ದು, ಮಕ್ಕಳಿಗೆ ತೊಂದರೆಯಾಗಿದೆ. ಶೌಚಾಲಯ ಗಬ್ಬೆದ್ದು ನಾರುತ್ತದೆ. ಶಿಕ್ಷಕರಿಗೆ ಶೌಚಾಲಯ ಇಲ್ಲದಿರುವುದರಿಂದ ಪರದಾಡುವಂತಾಗಿದೆ. ಮೊದಲಿನ ಮಹಡಿಗೆ ಸುತ್ತಗೋಡೆ ಇಲ್ಲ. ಮೆಟ್ಟಿಲುಗಳಿಗೆ ಗೋಡೆ ಇಲ್ಲ. ಇದರಿಂದ ಮಕ್ಕಳಿಗೆ ಅಪಾಯ ಇದ್ದೇ ಇದೆ.

ಆಟದ ಮೈದಾನ ಇಲ್ಲ. ಶಾಲೆಗೆ ಆವರಣಗೋಡೆ ಇಲ್ಲ. ಬಾಗಿಲು ಬಳಿಯೇ ಕೈತೊಳೆದುಕೊಳ್ಳಲು ನಲ್ಲಿ ಕೂಡಿಸಿರುವುದರಿಂದ ಮತ್ತು ನೀರು ಸರಿಯಾಗಿ ಹೊರಹೋಗದಿರುವುದರಿಂದ ಹೊಲಸು ನಾಥ ರಾಚುತ್ತದೆ.

ಪ್ರಾರ್ಥನೆ ಮಾಡಲು ಸಮರ್ಪಕ ಸ್ಥಳ ಇಲ್ಲ. ಬಿಸಿಯೂಟಕ್ಕೂ ಸ್ಥಳಾಭಾವ ಇದೆ. ಶಾಲೆಯ ಪಕ್ಕದಲ್ಲೇ ವಿದ್ಯುತ್‌ ಪರಿವರ್ತಕ ಇರುವುದರಿಂದ ಅಪಾಯಕಾರಿಯಾಗಿದೆ. ಗಾಳಿ, ಬೆಳಕು ಸಾಕಷ್ಟು ಇಲ್ಲ.

ವಿಜ್ಞಾನ, ಹಿಂದಿ, ಸಮಾಜ ವಿಜ್ಞಾನ, ಗಣಿತ, ಇಂಗ್ಲಿಷ್ ಶಿಕ್ಷಕರ ಕೊರತೆ ಇದೆ. ಸ್ಮಾರ್ಟ್ ಕ್ಲಾಸ್‌ರೂಮ್‌ ಅನ್ನು ತರಗತಿ ಮಾಡಿರುವುದರಿಂದ ಸ್ಮಾರ್ಟ್ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ.

ಸ್ಥಳದ ಅಭಾವ ಇರುವುದರಿಂದ ಕಿರು ಪರೀಕ್ಷೆ ಮತ್ತು ಪರೀಕ್ಷೆಗಳನ್ನು ಶಾಲಾ ಆವರಣದಲ್ಲಿ ನಡೆಸಲಾಗುತ್ತದೆ. ಬಿಸಿಯೂಟಕ್ಕೂ ಸ್ಥಳ ಇಲ್ಲದಿರುವುದರಿಂದ ಸರತಿ ಸಾಲಿನಲ್ಲಿ ಒಂದು ತರಗತಿಯ ನಂತರ ಇನ್ನೊಂದು ತರಗತಿಯ ಮಕ್ಕಳಿಗೆ ಊಟ ಬಡಿಸಲಾಗುತ್ತದೆ.

ಸಾಲದ್ದಕ್ಕೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಇದೇ ಸ್ಥಳದಲ್ಲಿ ನಡೆಸಲಾಗುತ್ತಿದೆ. ಕಾಲೇಜಿನಲ್ಲಿ 652 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಸ್ಥಳ ನಮ್ಮದು ಎಂದು ಪ್ರೌಢ ವಿಭಾಗದವರು, ನಮ್ಮದು ಎಂದು ಪಿಯು ವಿಭಾಗದವರು ಹಗ್ಗ ಜಗ್ಗಾಟ ನಡೆಸಿದ್ದಾರೆ. ಇದಕ್ಕೆ ಪರಿಹಾರ ದೊರಕಿಸಲು ಅಧಿಕಾರಿಗಳು ಪ್ರಯತ್ನಿಸಿಲ್ಲ ಎಂದು ದೂರುತ್ತಾರೆ ಪಾಲಕರು.

*ಶಾಲೆಗೆ ಸುಸಜ್ಜಿತ ಕೋಣೆಗಳ ಅವಶ್ಯಕತೆ ಇದೆ. ದಾಖಲಾತಿ ಅತ್ಯುತ್ತಮವಾಗಿದ್ದು, ಅದಕ್ಕೆ ಅನುಗುಣವಾಗಿ ಸೌಲಭ್ಯ ಒದಗಿಸಿದರೆ ಮಕ್ಕಳ ಭವಿಷ್ಯ ಉತ್ತಮವಾಗುತ್ತದೆ
– ಅನಂತಮೂರ್ತಿ ಡಬೀರ, ಪ್ರಭಾರಿ ಉಪಪ್ರಾಚಾರ್ಯ

*ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಶೌಚಾಲಯ ಇಲ್ಲ. ಆಟದ ಮೈದಾನವಿಲ್ಲ. ಸ್ಥಳದ ಸಮಸ್ಯೆ ಇದೆ. ಪಿಯು ಕಾಲೇಜು ಜೊತೆಗೆ ಇರುವುದರಿಂದ ಯಾವಾಗಲೂ ಗದ್ದಲ. ಓದಿಗೆ ತೊಂದರೆಯಾಗಿದೆ
– ನಾಗಸಿಂಧು, ವಿದ್ಯಾರ್ಥಿನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು