ಪ್ರಜಾವಾಣಿ ವಾರ್ತೆ
ಯಾದಗಿರಿ: ಶಾಸಕರಾದ ಸುಮಾರು ಮೂರು ತಿಂಗಳ ನಂತರ ಯಾದಗಿರಿ ಮತಕ್ಷೇತ್ರದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಸೋಮವಾರ ಜನ ಸಂಪರ್ಕ ಕಚೇರಿಯನ್ನು ಆರಂಭಿಸಿದ್ದಾರೆ.
ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತ ಸಮೀಪದ (ಜಿಲ್ಲಾಧಿಕಾರಿ ಹಳೆ ನಿವಾಸ) ಕಚೇರಿಯನ್ನು ಸೋಮವಾರ ಅಧಿಕೃತವಾಗಿ ಉದ್ಘಾಟಿಸಿದ್ದಾರೆ. ಈ ಮೂಲಕ ಜನರು ತಮ್ಮ ಕಷ್ಟಗಳನ್ನು ಕಚೇರಿಯಲ್ಲಿ ಸಲ್ಲಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ.
ಜಿಲ್ಲಾಧಿಕಾರಿ ಮನೆ (ಈಗ ಶಾಸಕರ ಕಚೇರಿ)ಯನ್ನು ಸುಣ್ಣ, ಬಣ್ಣ ಬಳಿದು ಶೃಂಗರಿಸಲಾಗಿತ್ತು. ಕಾರ್ಯಾಲಯದ ಉದ್ಘಾಟನೆ ಹಿನ್ನೆಲೆ ನಗರ ವಿವಿಧೆಡೆ ಕಟೌಟ್, ಬ್ಯಾನರ್‌ಗಳು ರಾರಾಜಿಸಿದವು. ಗ್ಯಾರಂಟಿ ಯೋಜನೆ ಜಾರಿ ಹಿನ್ನೆಲೆ ಪ್ರಸಕ್ತ ಸಾಲಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೊರತೆ ಇದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಶಾಸಕರು ತಮ್ಮ ಕಚೇರಿಯನ್ನು ಅದ್ಧೂರಿಯಾಗಿ ಉದ್ಘಾಟಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದವು.
ಟ್ರಾಫಿಕ್ ಜಾಮ್ ಬಿಸಿ: ಶಾಸಕರ ಕಾರ್ಯಾಲಯದ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಜನಸಮಾನ್ಯರು ಪರದಾಡಿದರು.
ಉದ್ಘಾಟನೆಗೆ ಆಗಮಿಸಿದ ಕಾರ್ಯಕರ್ತರ ವಾಹನ ರಸ್ತೆಯಲ್ಲಿಯೇ ಪಾರ್ಕಿಂಗ್ ಮಾಡಿದ ಹಿನ್ನೆಲೆ ಸಂಚಾರ ಅಸ್ತವ್ಯಸ್ತವಾಯಿತು. ಪೊಲೀಸರು ಬ್ಯಾರಿಕೇಡ್ ಹಾಕಿ ಒಂದು ಮಾರ್ಗದಲ್ಲಿ ಮಾತ್ರ ವಾಹನ ತೆರಳಲು ಅನುವು ಮಾಡಿಕೊಟ್ಟಿದ್ದರು.
ಅಭಿವೃದ್ಧಿಗಾಗಿ ಶ್ರಮ: ತುನ್ನೂರು
ಈ ವೇಳೆ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ತುನ್ನೂರು, ‘ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಕೋರ್ಟ್, ತಹಶೀಲ್ದಾರ್ ಹೀಗೆ ಹಲವು ಕಚೇರಿಗಳು ಸಮೀಪ ಇರುವ ಕಾರಣ ಕೇಂದ್ರ ಭಾಗದಲ್ಲಿ ಕಚೇರಿ ಉದ್ಘಾಟಿಸಲಾಗಿದ್ದು, ಸಾರ್ವಜನಿಕರು ಇದನ್ನು ಉಪಯೋಗಿಸಿಕೊಳ್ಳಬೇಕು’ ಎಂದು ಹೇಳಿದರು.
‘ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಅವರ ಸಂಪರ್ಕಕೊಂಡಿಯಾಗಿ ಶ್ರದ್ಧೆಯಿಂದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ’ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಸ್ಸುಗೌಡ ಬಿಳ್ಹಾರ, ಶ್ರೀನಿವಾಸರೆಡ್ಡಿ ಚನ್ನೂರು, ಶರಣಗೌಡ ತಂಗಡಗಿ, ವೆಂಕಟರೆಡ್ಡಿ ವನಕೇರಿ, ನರಸಪ್ಪ ಬಾಗ್ಲಿ, ಅಂಬ್ರೇಶ್ ಜಾಕಾ, ತಿಪ್ಪಣ್ಣ ನಾಯಕ, ರಾಘವೇಂದ್ರ ಖಾನಾಪುರ, ಅಶೋಕರೆಡ್ಡಿ ಕುರಿಯಾಳ, ಶರಣಗೌಡ ಮಾಲಿಪಾಟೀಲ, ಸೋಮಶೇಖರ ಮಸಕನಹಳ್ಳಿ, ಸಾಬಣ್ಣ ಬಾಡಿಯಾಳ, ಸಿದ್ದಾರೆಡ್ಡಿಗೌಡ ಚಟ್ನಳ್ಳಿ, ಬಾಬುಗೌಡ ಮಾಚನೂರ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.