ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ವಿರುದ್ಧ ಆಕ್ರೋಶ

Last Updated 10 ಜುಲೈ 2019, 16:26 IST
ಅಕ್ಷರ ಗಾತ್ರ

ಯಾದಗಿರಿ: ಬುಧವಾರ ಯಾದಗಿರಿ ನಗರ ಬಂದ್‌ನಿಂದ ಅಕ್ಷರಶಃ ಸ್ತಂಬ್ಧವಾಗಿತ್ತು. ಸಂಚಾರ, ವ್ಯಾಪಾರ ವಹಿವಾಟು ಇಲ್ಲದೆ ಹಲವು ರಸ್ತೆಗಳು ಬಿಕೋ ಎನ್ನುತ್ತಿದ್ದವು. ವಿವಿಧ ಸಂಘಟನೆಗಳು ತಮ್ಮ ಬಾವುಟದೊಂದಿಗೆ ಮೆಡಿಕಲ್ ಕಾಲೇಜಿಗಾಗಿ ಆಗ್ರಹಿಸಿದರು.

ತೆರೆದ ಜೀಪಿನಲ್ಲಿ ಮೆರವಣಿಗೆ:
ನಗರದ ಮೈಲಾಪುರ ಅಗಸಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ವೃದ್ಧರು, ವಿದ್ಯಾರ್ಥಿಗಳು, ವಿವಿಧ ಕನ್ನಡಪರ ಸಂಘಟನೆಗಳು, ರೈಸ್‌ಮಿಲ್, ಕಿರಾಣ ಅಂಗಡಿ ಮಾಲೀಕರು ತಂಡೋಪತಂಡವಾಗಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಶಾಸಕ ವೆಂಕಟರೆಡ್ಡಿ ಮುದ್ನಾಳ, ಮಾಜಿ ಸಚಿವ ಮಾಲಕರೆಡ್ಡಿ, ಮಾಜಿ ಶಾಸಕ ವೀರಬಸಸಂತರೆಡ್ಡಿ ಮುದ್ನಾಳ ಅವರೂ ಭಾಗವಹಿಸಿದ್ದರು.

ಕಾರ್ಯಕರ್ತತರು ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಇದು ನಮಗೆ ಮಾತ್ರವಲ್ಲ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ. ಹೀಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕೆ ಬೇಕು ಎಂದು ಒತ್ತಾಯಿಸಿದರು.

ಸೆಲ್ಫಿ ಕ್ರೇಜ್:
ಪ್ರತಿಭಟನಾ ಮೆರವಣಿಗೆಯಲ್ಲಿ ತಮ್ಮ ನೆಚ್ಚಿನ ನಾಯಕರೊಂದಿಗೆ ಹಲವರು ಸೆಲ್ಫಿಗೆ ಮುಗಿಬಿದ್ದರು. ತಮ್ಮ ನಾಯಕರನ್ನು ಕರೆದು ತಾವು ಪ್ರತಿಭಟನೆ ಭಾಗವಾಗಿದ್ದೇವೆ ಎಂದು ತೋರಿಸಿಕೊಳ್ಳಲು ಬಾವುಟ ಹಿಡಿದು ಸೆಲ್ಫಿ ತೆಗದುಕೊಳ್ಳುತ್ತಿರುವುದು ಕಂಡು ಬಂದಿತು. ಶಾಸಕರು, ಮುಖಂಡರೊಂದಿಗೆ ಸೆಲ್ಫಿಗಾಗಿ ಬೇಡುತ್ತಿರುವುದು ಕಂಡು ಬಂದಿತು.

ವಕೀಲರ ಪ್ರತಿಭಟನೆ:
ಯಾದಗಿರಿ ಬಂದ್‌ಗೆ ವಿವಿಧ ಸಂಘ, ಸಂಸ್ಥೆಗಳು ಬಂದ್‌ಗೆ ಬೆಂಬಲಿಸಿದ್ದವು. ಅದರಂತೆ ಜಿಲ್ಲಾ ವಕೀಲರ ಸಂಘವೂ ಕಲಾಪ ಬಹಿಷ್ಕರಿಸಿ ಬಂದ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿತ್ತು.

ಇವರೇನು ಹೇಳುತ್ತಾರೆ...

ಜಿಲ್ಲೆಗೆ ಮೆಡಿಕಲ್ ಕಾಲೇಜು ಬರುವುದರಿಂದ ವ್ಯಾಸಂಗ ಮತ್ತಿತರ ಅನುಕೂಲಗಳಿವೆ. ಹೀಗಾಗಿ ಸರ್ಕಾರ ಈ ಭಾಗಕ್ಕೆ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕು.
- ಅನಿತಾ ರಾಠೋಡ, ಬಿಜೆಪಿ ಕಾರ್ಯಕರ್ತೆ

**

ಇದು ನಮ್ಮೊಬ್ಬರ ಬೇಡಿಕೆಯಲ್ಲ. ಜಿಲ್ಲೆಯ ಪ್ರತಿಯೊಬ್ಬರ ಆಗ್ರಹವಾಗಿದೆ. ಇದು ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ. ಮೆಡಿಕಲ್ ಕಾಲೇಜಿನಿಂದ ಹಲವರಿಗೆ ಉದ್ಯೋಗ ಲಭಿಸಲಿದೆ.
- ಶಿವಗಂಗಮ್ಮ, ಬಿಜೆಪಿ ಕಾರ್ಯಕರ್ತೆ

**

ಜಿಲ್ಲೆಗೆ ಮೆಡಿಕಲ್ ಕಾಲೇಜು ಅವಶ್ಯವಿದೆ. ಇದರಿಂದ ಬಹಳಷ್ಟು ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ. ಸರ್ಕಾರ ಅನುದಾನ ನೀಡಿ ಈ ಭಾಗದ ವಿದ್ಯಾವಂತರಿಗೆ ಅನುಕೂಲ ಮಾಡಿಕೊಡಬೇಕು.
- ಅಯ್ಯಣ್ಣ ಅಬ್ಬೆತುಮಕೂರ, ನಾಗರಿಕ

**

ನಾವಂತೂ ಮೆಡಿಕಲ್ ಕಾಲೇಜುಗಾಗಿ ಆಗ್ರಹ ಮಾಡುತ್ತಿದ್ದೇವೆ. ಸರ್ಕಾರ ಶೀಘ್ರ ಅನುದಾನ ಮಂಜೂರು ಮಾಡಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗಲಿದೆ.
- ಅಯ್ಯಪ್ಪ, ನಾಗರಿಕ

**

ವೈದ್ಯಕೀಯ ಕಾಲೇಜು ಬರುವುದರಿಂದ ಇಲ್ಲಿ ಪಿ.ಜಿ.ಸೆಂಟರ್‌ಗಳು, ಹೋಟೆಲ್‌ಗಳು ಇನ್ನಿತರ ಸೌಕರ್ಯಗಳು ಅಭಿವೃದ್ಧಿಯಾಗಲಿವೆ. ಅಲ್ಲದೆ ಇದು ಜಿಲ್ಲೆಗೆ ಮುಕುಟವಾಗಿಯೂ ಇರಲಿದೆ.
- ರಾಮದೇವಿ ಎಸ್‌.ಕೋಲಿ, ಬಿಜೆಪಿ ಕಾರ್ಯಕರ್ತೆ

**

ಮೆಡಿಕಲ್ ಕಾಲೇಜಿಗಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡುವ ಕೆಲಸ ಮಾಡಬೇಕು. ದೊಡ್ಡ ಮಟ್ಟದಲ್ಲಿ ನಡೆದ ನಮ್ಮ ಆಗ್ರಹಕ್ಕೆ ಸರ್ಕಾರ ಕಿವಿಗೊಟ್ಟು ಹಣ ಮಂಜೂರು ಮಾಡಬೇಕು.
- ಲಲಿತಾ ಅನಪುರ, ನಗರ ಸಭೆ ಮಾಜಿ ಸದಸ್ಯೆ‌

**

ಮೆಡಿಕಲ್ ಕಾಲೇಜು ಜಿಲ್ಲೆಗೆ ನೀಡುವುದರಿಂದ ವಿದ್ಯಾರ್ಥಿಗಳಿಗೆ ಬೇರೆ ಜಿಲ್ಲೆಗೆ ಓದುವ ಹೊರೆ ತಪ್ಪಲಿದೆ. ಇಲ್ಲಿಯೇ ಕಾಲೇಜು ನಿರ್ಮಾಣವಾದರೆ ಬಹಳಷ್ಟು ಮಂದಿ ಇದರಿಂದ ಜೀವನ ಸಾಗಿಸಲು ದಾರಿ ಮಾಡಿಕೊಟ್ಟಂತೆ ಆಗುತ್ತದೆ.
- ವಿಜಯಕುಮಾರ ಕುಲಕರ್ಣಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT