ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ಪೊಲೀಸರ ಕಾರ್ಯನಿರ್ವಹಣೆಗೆ ಜನರ ಬೇಸರ

ರಾತ್ರಿಯಾಗುತ್ತಿದ್ದಂತೆ ಚುರುಕುಗೊಳ್ಳುವ ಅಕ್ರಮ ಚಟುವಟಿಕೆ, ಮರಳು ಸಾಗಾಣಿಕೆ ಆರೋಪ
Published 8 ಏಪ್ರಿಲ್ 2024, 5:44 IST
Last Updated 8 ಏಪ್ರಿಲ್ 2024, 5:44 IST
ಅಕ್ಷರ ಗಾತ್ರ

ಶಹಾಪುರ: ಹದಗೆಟ್ಟ ಕಾನೂನು ಸುವ್ಯವಸ್ಥೆ, ಕಾರ್ಯನಿರ್ವಹಿಸದ ಸಿಸಿ ಕ್ಯಾಮೆರಾಗಳು, ಪಾಲನೆಯಾಗದ ಸಂಚಾರ ನಿಯಮಗಳು, ಮರಳು ಅಕ್ರಮ ಸಾಗಾಣಿಕೆ, ರಾತ್ರಿಯಾಗುತ್ತಿದ್ದಂತೆ ಆರಂಭಗೊಳ್ಳುವ ಅಫೀಮು–ಗಾಂಜಾ ಮಾರಾಟದಂತಹ ಅಕ್ರಮ–ಅನೈತಿಕ ಚಟುವಟಿಕೆಗಳು...ಇವುಗಳ ನಿರ್ವಹಣೆಯಲ್ಲಿ ವಿಫಲರಾಗಿರುವ ಪೊಲೀಸರ ನಡೆಗೆ ನಗರದ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

ಸಿಬ್ಬಂದಿ ಕೊರತೆಯಿಲ್ಲ: ನಗರದ ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಅಗತ್ಯವಿರುವಷ್ಟು ಪೊಲೀಸ್‌ ಸಿಬ್ಬಂದಿಯಿದ್ದಾರೆ. ಕಾನೂನು ಸುವ್ಯವಸ್ಥೆಗೆ ಮುಂದಾಗಬೇಕಿದ್ದ ಪೊಲೀಸರು, ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ.

ನಗರದಲ್ಲಿ ಶುಕ್ರವಾರ ಟಿಪ್ಪರ್‌ ಚಾಲಕನೊಬ್ಬ, ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿ ಬೈಕ್‌ ಸವಾರನೊಬ್ಬನನ್ನು ಬಲಿ ಪಡೆದ. ಜತೆಗೆ ಟ್ರ್ಯಾಕ್ಟರ್, ವಿದ್ಯುತ್‌ ಕಂಬ, ತಳ್ಳು ಬಂಡಿಗೆ ಗುದ್ದಿ ಜನರಲ್ಲಿ ಭೀತಿ ಹಾಗೂ ಭಯವನ್ನು ಉಂಟು ಮಾಡಿದ್ದಾನೆ. ಆದರೆ ಇಲ್ಲಿ ಎಲ್ಲಿಯೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ. ಒಂದು ವೇಳೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದರೆ, ಅದರ ಚಿತ್ರಗಳು ಸೆರೆಯಾಗಿ ರಸ್ತೆ ಅಪಘಾತದ ಬಗ್ಗೆ ನಿಖರವಾಗಿ ಮಾಹಿತಿ ಕಲೆ ಹಾಕಲು ನೆರವಾಗುತ್ತಿದ್ದವು. ಹೀಗಾಗಿ ಇನ್ನಾದರೂ ಪೊಲೀಸರು, ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಗರದಲ್ಲಿ ಬೀದರ-ಶ್ರೀರಂಗಪಟ್ಟಣ ಹೆದ್ದಾರಿ ಸೀಳಿಕೊಂಡು ಹೋಗಿದ್ದರಿಂದ ಮತ್ತು ಶಹಾಪುರ–ಸುರಪುರ ಹಾಗೂ ಯಾದಗಿರಿ ಮುಖ್ಯ ರಸ್ತೆಯಾಗಿದ್ದರಿಂದ ಹೆಚ್ಚಿನ ವಾಹನಗಳ ಓಡಾಟವಿದ್ದು, ನಿಯಮಗಳ ಪಾಲನೆಯಾಗುತ್ತಿಲ್ಲ. ನಗರದ ಬಸವೇಶ್ವರ ವೃತ್ತವು ಮೃತ್ಯುವಿನ ಆಹ್ವಾನ ತಾಣವಾಗಿ ಮಾರ್ಪಟ್ಟಿದೆ. ರಸ್ತೆಯ ಬದಿಯಲ್ಲಿ ಬೇಕಾ ಬಿಟ್ಟಿ ವಾಹನ ನಿಲುಗಡೆ ಮಾಡುತ್ತಾರೆ ಎಂದು ನಿವಾಸಿ ಬಸವರಾಜ ಕುಂಬಾರ ಆರೋಪಿಸಿದ್ದಾರೆ.

ನಗರದ ಬಸವೇಶ್ವರ ವೃತ್ತ, ಹೊಸ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ, ಸಿ.ಬಿ. ಕಮಾನ, ಮೊಚಿಗಡ್ಡೆ ಬಳಿ ಸಿಸಿ ಕ್ಯಾಮೆರವನ್ನು ಸಾರ್ವಜನಿಕ ಹಿತರಕ್ಷಣೆಗೆ ಸ್ಥಾಪಿಸಲಾಗಿತ್ತು. ಅವೆಲ್ಲವುಗಳ ನಿರ್ವಹಣೆ ಇಲ್ಲದ್ದರಿಂದ ಕಾರ್ಯನಿರ್ವಹಿಸುತ್ತಿಲ್ಲ. ಅದರಂತೆ ಬಸವೇಶ್ವರ ವೃತ್ತದ ಬಳಿ ಸಿಗ್ನಲ್‌ ಅಳವಡಿಸಿದ್ದೇ ಪೊಲೀಸರ ಸಾಧನೆಯಾಗಿದೆ. ಲಕ್ಷಗಟ್ಟಲೇ ಹಣ ವೆಚ್ಚ ಮಾಡಿ ಯಂತ್ರಗಳನ್ನು ಅಳವಡಿಸಿದ್ದಾರೆ. ಸಾರ್ವಜನಿಕರ ಉಪಯೋಗಕ್ಕೆ ಬರುತ್ತಿಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾತ್ರಿಯಾಗುತ್ತಿದ್ದಂತೆ ಮರಳು ಅಕ್ರಮ ಸಾಗಾಣಿಕೆ ವಾಹನಗಳು ರಸ್ತೆಗೆ ಇಳಿಯುತ್ತವೆ. ಇವುಗಳಿಗೆ ಯಾವುದೇ ಪರವಾನಗಿ ಸಹ ಇರುವುದಿಲ್ಲ. ಸ್ವತಃ ಪೊಲೀಸರೇ ಈ ವಾಹನಗಳಿಗೆ ಬೆಂಗಾವಲಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿದೆ. ಸಾರ್ವಜನಿಕ ಹಿತಕ್ಕಿಂತ ಅಕ್ರಮ ಮರಳು ಸಾಗಾಣಿಕೆಯೇ ಪೊಲೀಸರಿಗೆ ದೊಡ್ಡ ಜವಾಬ್ದಾರಿಯಾಗಿದೆ. ಕಲಬುರಗಿ ವಿಭಾಗದಲ್ಲಿ ಹೆಚ್ಚು ಆದಾಯ ಕೊಡಬಲ್ಲ ಠಾಣೆ ಇದಾಗಿದೆ ಎಂಬ ಗುಸುಗುಸು ಮಾತುಗಳು ಸಿಬ್ಬಂದಿಯಿಂದ ಕೇಳಿ ಬರುತ್ತಲಿದೆ.

ಈಗಲಾದರೂ ಪೊಲೀಸರು ಎಚ್ಚೆತ್ತುಕೊಂಡು ಸಾರ್ವಜನಿಕರ ಹಿತಕಾಪಾಡುವ ಕೆಲಸವನ್ನು ಮಾಡಬೇಕು ಎಂದು ನಗರದ ಜನರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT