ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ | ಮಹಿಳೆ ನಗ್ನಗೊಳಿಸಿದ ಪ್ರಕರಣದ ಉನ್ನತ ತನಿಖೆಗೆ ಹೆಚ್ಚಿದ ಒತ್ತಾಯ

ಪೊಲೀಸರ ತರಾತುರಿ ವಿಚಾರಣೆ
Last Updated 15 ಸೆಪ್ಟೆಂಬರ್ 2021, 5:14 IST
ಅಕ್ಷರ ಗಾತ್ರ

ಶಹಾಪುರ: ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ಮಾಡಿದ ಪ್ರಕರಣ ಹಾಗೂ ವಿಡಿಯೊದ ಸತ್ಯಾಸತ್ಯತೆ ಬಗ್ಗೆ ಪೊಲೀಸರು ಸಂಪೂರ್ಣವಾಗಿ ವೈಜ್ಞಾನಿಕವಾಗಿ ದೃಢಪಡಿಸಿಕೊಳ್ಳದೆ ಪೂರ್ವಗ್ರಹ ಪೀಡಿತರಂತೆ ವರ್ತಿಸಿರುವುದು ಜನತೆಯಲ್ಲಿ ಅನುಮಾನ ಹುಟ್ಟಿಸಿದೆ.

‘ರಾಜ್ಯದಲ್ಲಿ ಹಲವು ಸಿ.ಡಿ ಪ್ರಕರಣ ಬಿಡುಗಡೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಈ ಹಿಂದಿನ ಪ್ರಕರಣಗಳಲ್ಲಿ ತಕ್ಷಣವೇ ಅವುಗಳನ್ನು ವೈಜ್ಞಾನಿಕ ತಂತ್ರಜ್ಞಾನ ಬಳಸಿ, ತನಿಖೆಗೆ ಮುಂದಾಗಲಾಗುತ್ತದೆ. ಪೊಲೀಸರು ಇಂತಹ ಪ್ರಕರಣವನ್ನು ಬೇರೆ ಬೇರೆ ಆಯಾಮದಿಂದ ವಿಚಾರಣೆಗೆ ಒಳಪಡಿಸಿಯೇ ತನಿಖೆ ಕೈಗೆತ್ತಿಕೊಳ್ಳುತ್ತಾರೆ. ಆದರೆ ನಗರದ ಹೊರವಲಯದಲ್ಲಿ ನಡೆದಿದೆ ಎನ್ನಲಾದ ಮಹಿಳೆಯ ನಗ್ನಗೊಳಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪೊಲೀಸರು ಅತ್ಯುತ್ಸಾಹ ತೋರಿಸಿದಂತೆ ಕಾಣುತ್ತದೆ. ಇದರ ನಿಜಾಂಶದ ಜಾಡು ಪತ್ತೆ ಹಚ್ಚಲು ಇಡೀ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವುದು ಸೂಕ್ತ’ ಎಂದು ಬಿಜೆಪಿಯ ಹಿರಿಯ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಒತ್ತಾಯಿಸಿದ್ದಾರೆ.

‘ಪ್ರಕರಣ ಬೆಳಕಿಗೆ ಬಂದ ಕೆಲವೇ ಗಂಟೆಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು, ಸಂತ್ರಸ್ತೆಯನ್ನು ಕರೆಯಿಸಿ ದೂರು ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಮಾಧ್ಯಮದವರನ್ನು ಕರೆಯಿಸಿ ಆರೋಪಿಗಳನ್ನು ಬಂಧಿಸಿದ್ದನ್ನು ಖಚಿತಪಡಿಸಲಾಗಿದೆ. ಉನ್ನತ ತನಿಖಾಧಿಕಾರಿಗಳು ಗೊಂದಲದ ಹೇಳಿಕೆ ನೀಡಿರುವುದು ಸರಿಯಲ್ಲ. ನಾವೆಲ್ಲ ತಲೆತಗ್ಗಿಸುವಂಥ ಪೈಶಾಚಿಕ ಕೃತ್ಯದ ಬಗ್ಗೆ ಆಳವಾಗಿ ವಿಚಾರಣೆ ಮಾಡದೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನು ಗಮನಿಸಿದರೆ, ಪೊಲೀಸರಿಗೆ ಮೊದಲೇ ಎಲ್ಲ ತಿಳಿದಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತದೆ. ಪೊಲೀಸರ ನಡೆಯು ಸರಿಯಾದ ಕ್ರಮವಲ್ಲ. ಅತ್ಯಂತ ಸೂಕ್ಷ್ಮವಾದ ಪ್ರಕರಣದ ಬಗ್ಗೆ ಪೊಲೀಸರು ಅವಸರ ಮಾಡಿದ್ದಾರೆ’ ಎಂದು ರೈತ ಮುಖಂಡ ಸಿದ್ದಯ್ಯ ಹಿರೇಮಠ ಆರೋಪಿಸಿದ್ದಾರೆ.

ಆರೋಪಿಗಳಲ್ಲಿ ಒಬ್ಬ ಹೊರಗುತ್ತಿಗೆ ಆಧಾರದ ಮೇಲೆ ಪೊಲೀಸ್‌ ವಾಹನದ ಚಾಲಕನಾಗಿ ಕಾರ್ಯನಿರ್ವಹಿಸಿದ್ದ. ಹೀಗಾಗಿ ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗಿತ್ತೆ ಎನ್ನುವ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ಇಷ್ಟು ತಿಂಗಳ ನಂತರ ವಿಡಿಯೊ ಯಾಕೆ ಬಹಿರಂಗವಾಯಿತು ಎನ್ನುವ ಕುರಿತೂ ತನಿಖೆ ನಡೆಸುವ ಅಗತ್ಯವಿದೆ.

ಆರೋಪಿಗಳನ್ನು ಬಂಧಿಸಿದಷ್ಟೆ ಮುಖ್ಯವಾಗಿ ವಿಡಿಯೊದ ಮೂಲವನ್ನು ಪತ್ತೆ ಹಚ್ಚುವುದು ಅಗತ್ಯವಾಗಿದೆ. ಯಾವ ಉದ್ದೇಶಕ್ಕಾಗಿ ವಿಡಿಯೊ ಹರಿಬಿಡಲಾಯಿತು. ಯಾವ ಉದ್ದೇಶಕ್ಕಾಗಿ ನೇರವಾಗಿ ಮಾಧ್ಯಮದವರ ಕೈಗೆ ತಲುಪಿಸಲಾಯಿತು ಎಂಬುವುದರ ಬಗ್ಗೆ ತನಿಖೆ ಮಾಡಬೇಕಿದೆ. ಒಟ್ಟಾರೆ ಪ್ರಕರಣದ ಬಗ್ಗೆ ಉನ್ನತಮಟ್ಟದ ತನಿಖೆಯಾಗಲಿ ಎಂಬ ಬೇಡಿಕೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

***
ಈ ವಿಡಿಯೊ ಹಲವು ಬಾರಿ ಹಂಚಿಕೆಯಾಗಿದೆ. ಇದರ ಮೂಲ ಪತ್ತೆ ಮಾಡಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು
-ಸಂತೋಷ ಬನ್ನಟ್ಟಿ,ಯಾದಗಿರಿ ಡಿವೈಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT