ಯಾದಗಿರಿ ನಗರಸಭೆ: ನೂತನ ಸಾರಥಿ ಆಯ್ಕೆ; ವರಿಷ್ಠರಿಗೆ ಸವಾಲು

7
ಅಧ್ಯಕ್ಷ ಗಾದಿಗೆ ತೆರೆಮರೆಯಲ್ಲಿ ನಡೆಯುತ್ತಿರುವ ಕಸರತ್ತು

ಯಾದಗಿರಿ ನಗರಸಭೆ: ನೂತನ ಸಾರಥಿ ಆಯ್ಕೆ; ವರಿಷ್ಠರಿಗೆ ಸವಾಲು

Published:
Updated:
Deccan Herald

ಯಾದಗಿರಿ: ಚುನಾವಣೆಯಲ್ಲಿ ಸ್ಪಷ್ಟಬಹುಮತ ಪಡೆದಿರುವ ಇಲ್ಲಿನ ನಗರಸಭೆ ಅಧ್ಯಕ್ಷ ಗಾದಿಗೆ ನೂತನ ಸಾರಥಿ ಆಯ್ಕೆ ನಡೆಸಲು ಬಿಜೆಪಿ ವರಿಷ್ಠರಿಗೆ ತಲೆಬಿಸಿ ಶುರುವಾಗಿದೆ.

ಒಟ್ಟು 31 ಸದಸ್ಯರ ಬಲ ಹೊಂದಿರುವ ನಗರಸಭೆಯಲ್ಲಿ ಬಿಜೆಪಿ ಒಟ್ಟು 16 ಸ್ಥಾನಗಳನ್ನು ಗೆದ್ದು ಬಹುಮತ ಸಾಬೀತುಪಡಿಸಿದೆ. ಮತ ಎಣಿಕೆ ಮರುದಿನವೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲು ಅಧಿಸೂಚನೆ ಕೂಡ ಹೊರಬಿದ್ದಿದೆ. ಸ್ಥಳೀಯ ನಗರಸಭೆಗೆ ಅಧ್ಯಕ್ಷ ಗಾದಿಗೆ ಸಾಮಾನ್ಯ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಅಧಿಸೂಚನೆ ಪ್ರಕಟವಾಗಿದೆ. ಹಾಗಾಗಿ, ಅಧ್ಯಕ್ಷ ಸ್ಥಾನಕ್ಕೆ ಸಹಜವಾಗಿ ಪೈಪೋಟಿ ಹೆಚ್ಚಿದೆ.

ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿರುವ ಲಲಿತಾ ಅನಪುರ ಕೂಡ ಅಧ್ಯಕ್ಷ ಗಾದಿ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ. ಎರಡನೇ ಬಾರಿಗೆ ಗೆಲುವು ಪಡೆದಿರುವ ಹನುಮಂತ ಇಟಗಿ, ದಲಿತ ಮುಖಂಡ ಸ್ವಾಮಿದೇವ ದಾಸನಕೇರಿ ಕೂಡ ಆಕಾಂಕ್ಷಿತರಾಗಿದ್ದಾರೆ. ಅವರ ಜತೆಗೆ ನೂತನ ಸದಸ್ಯರಾಗಿ ಆಯ್ಕೆ ಆಗಿರುವ 6ನೇ ವಾರ್ಡಿನ ಸದಸ್ಯ ಅಂಬಯ್ಯ ಶಾಬಾದಿ, 3ನೇ ವಾರ್ಡಿನ ಸದಸ್ಯ ವಿಲಾಸ್ ಪಾಟೀಲ ಕೂಡ ಅಧ್ಯಕ್ಷಗಾದಿ ಮೇಲೆ ದೃಷ್ಟಿ ನೆಟ್ಟಿದ್ದಾರೆ.

ಇದೆಲ್ಲವನ್ನು ಗಮನಿಸಿದರೆ ಲಲಿತಾ ಅನಪುರ ಅವರು ಅಧ್ಯಕ್ಷ ಗಾದಿಯಲ್ಲೇ ಕುಳಿತು ಚುನಾವಣೆ ಎದುರಿಸಿ ಮರು ಆಯ್ಕೆಗೊಂಡಿದ್ದಾರೆ. ಎರಡು ಬಾರಿ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದಾರೆ. ಆಡಳಿತಾತ್ಮಕ ಅನುಭವ ಹೆಚ್ಚಿದೆ. ಆದರೆ, ಹಿಂದಿನಿಂದಲೂ ಪಕ್ಷ ಸಂಘಟನೆಯನ್ನೂ ಮಾಡುತ್ತಾ ಬಂದಿದ್ದೇವೆ. ವಿಧಾನಸಭೆ ಚುನಾವಣೆಯಲ್ಲೂ ಪಕ್ಕಾಗಿ ಶ್ರಮಿಸಿದ್ದೇನೆ. ನಮಗೂ ಒಂದು ಅವಕಾಶ ಕೊಡಿ’ ಎಂಬುದಾಗಿ ಹಿರಿಯ ಸದಸ್ಯ ಹನುಮಂತ ಇಟಗಿ ವರಿಷ್ಠರಿಗೆ ಬೇಡಿಕೆ ಇಟ್ಟಿದ್ದಾರೆ. ಉಳಿದಂತೆ ಸ್ವಾಮಿದೇವ ದಾಸನಕೇರಿ, ವಿಲಾಸ್ ಪಾಟೀಲ, ಅಂಬಯ್ಯ ಶಾಬಾದಿ ಕೂಡ ಪಕ್ಷದ ಮುಖಂಡರ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

ದಿನದಿಂದ ದಿನಕ್ಕೆ ಅಧ್ಯಕ್ಷ ಗಾದಿಗೇರಲು ಬಯಸುವವರ ಸಂಖ್ಯಾಪಟ್ಟಿ ಬೆಳೆಯುತ್ತಾ ಸಾಗಿದೆ. ಇದರಿಂದ, ನಗರಸಭೆಗೆ ನೂತನ ಸಾರಥಿ ಆಯ್ಕೆ ಕೂಡ ಸಂಕೀರ್ಣಗೊಂಡಿದ್ದು, ವರಿಷ್ಠರು ಪಕ್ಷದ ಮುಖಂಡರ ವಿಶೇಷ ಸಭೆ ನಡೆಸಲು ಉದ್ದೇಶಿಸಿದ್ದಾರೆ.

‘ನಗರಸಭೆ ಆಡಳಿತ ನಡೆಸಲು ಅನುಭವ ಬೇಕಾಗುತ್ತದೆ. ಜತೆಗೆ ಪಕ್ಷ ಸಂಘಟನೆಯಲ್ಲೂ ದುಡಿದಿರುವವರಿಗೆ ಆದ್ಯತೆ ನೀಡಬೇಕಾಗುತ್ತದೆ. ಅಲ್ಲದೇ ಜಾತಿ, ವರ್ಗ ಕೂಡ ಪರಿಗಣಿಸಬೇಕಾಗುತ್ತದೆ. ಮೀಸಲಾತಿ ಸಾಮಾನ್ಯ ವರ್ಗ ಆಗಿರುವುದರಿಂದ ಪೈಪೋಟಿ ಹೆಚ್ಚಿದೆ. ಆದರೆ, ಎಲ್ಲರನ್ನೂ ಸಮಾಧಾನಪಡಿಸಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಇಲ್ಲಿ ನನ್ನ ನಿರ್ಧಾರ ಅಂತಿಮ ಅಲ್ಲ. ಪಕ್ಷದ ವರಿಷ್ಠರು ಸಭೆ ನಡೆಸಿ ಚರ್ಚಿಸಿ, ವಿಮರ್ಶಿಸಿ ಆಯ್ಕೆ ನಡೆಸುತ್ತೇವೆ’ ಎನ್ನುತ್ತಾರೆ ಶಾಸಕ ವೆಂಕಟರೆಡ್ಡಿ ಮುದ್ನಾಳ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !