ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ಕಳಪೆ ಬಿತ್ತನೆ ಬೀಜಕ್ಕೆ ಬೀಳದ ಕಡಿವಾಣ

ಕಳಪೆ ಗುಣಮಟ್ಟದ ಬೀಜ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಕೃತ್ಯ
Published 7 ಜುಲೈ 2024, 7:11 IST
Last Updated 7 ಜುಲೈ 2024, 7:11 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಪ್ರತಿವರ್ಷವೂ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ನಕಲಿ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕಗಳ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ.

ಕಳೆದ ವರ್ಷ ಬರಗಾಲದಿಂದ ತತ್ತರಿಸಿದ್ದ ರೈತರು ಈ ವರ್ಷದ ಮುಂಗಾರು ಅರಂಭದಲ್ಲಿ ಮಳೆಯಾದ ಕಾರಣ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಖರೀದಿಸಿದ್ದರು. ಆದರೆ, ಈಗ ಅದರಲ್ಲಿ ಕೆಲವು ಕಳಪೆ ಎನ್ನುವುದು ಪ್ರಯೋಗಾಲಯದಿಂದ ತಿಳಿದುಬಂದಿದೆ.

ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮವಾಗಿ ಮಳೆಯಾಗಿರುವುದರಿಂದ ರೈತರು ತಮ್ಮ ಹೊಲವನ್ನು ಹದ ಮಾಡಿಕೊಂಡು ಬಿತ್ತನೆ ಮಾಡಿದ್ದಾರೆ. ಆದರೆ, ನಕಲಿ ಬಿತ್ತನೆ ಬೀಜ ಹಾಗೂ ನಿಗದಿತ ಬೆಲೆಗಿಂತ ಹೆಚ್ಚಿನ ಹಣಕ್ಕೆ ಬಿತ್ತನೆ ಬೀಜ ಮಾರಾಟ ಮಾಡುತ್ತಿರುವ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಬೀಜ ಮಾರಾಟಗಾರರ ಕುತಂತ್ರದ ಕಾರಣಕ್ಕೆ ರೈತರು ಮೋಸ ಹೋಗುವಂತಾಗಿದೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಸರು, ತೊಗರಿ ಹಾಗೂ ಹತ್ತಿ ಬೀಜ ಬಿತ್ತನೆ ಮಾಡಿದ್ದಾರೆ. ಕೆಲ ದಂಧೆಕೋರರು ಕಳಪೆ ಗುಣಮಟ್ಟದ ಬೀಜ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಕೃತ್ಯದಲ್ಲಿ ತೊಡಗಿದ್ದಾರೆ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ.

ಶಹಾಪುರ ತಾಲ್ಲೂಕಿನಲ್ಲಿ ಹೆಚ್ಚು: ರಾಜ್ಯದ ವಿವಿಧ ತಳಿಯ ಹತ್ತಿ ಬೀಜ ತಯಾರಿಕಾ ಕಂಪನಿ ಬೀಜಗಳು ಶಹಾಪುರದಲ್ಲಿ ಸಿಗುತ್ತವೆ. ಇದರಿಂದ ನಕಲಿಗೆ ಇದು ರಹದಾರಿ ಎನ್ನುವಂತೆ ಆಗಿದೆ. ಅಲ್ಲದೇ ಕಡಿಮೆ ದರಕ್ಕೆ ಮಾರಾಟ ಮಾಡುವುದರಿಂದ ರೈತರು ಆಸೆಗೆ ಬಿದ್ದು ಖರೀದಿಸುವುದು ಸಾಮಾನ್ಯವಾಗಿದೆ.

173 ಮಾದರಿ ಸಂಗ್ರಹ: 2024–25ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಬೀಜ 250 ಮಾದರಿ ಸಂಗ್ರಹ ಗುರಿ ಇದ್ದು, ಇದರಲ್ಲಿ 173 ಮಾದರಿ ಸಂಗ್ರಹಿಸಲಾಗಿದೆ. 550 ರಸಗೊಬ್ಬರ ಮಾದರಿಯಲ್ಲಿ 119 ಮಾದರಿ ಸಂಗ್ರಹ, 277 ಕ್ರಿಮಿನಾಶಕ ಮಾದರಿಯಲ್ಲಿ 54 ಮಾದರಿ ಸಂಗ್ರಹಿಸಲಾಗಿದೆ.

ಯಾದಗಿರಿ ನಗರದ ದೊಡ್ಡ ಕೆರೆಯ ಹತ್ತಿರದ ಹೊಲದಲ್ಲಿ ಹತ್ತಿಗೆ ಗೊಬ್ಬರ ಹಾಕುತ್ತಿರುವ ರೈತರು
ಪ್ರಜಾವಾಣಿ ಚಿತ್ರ/ ರಾಜಕುಮಾರ ನಳ್ಳಿಕರ್
ಯಾದಗಿರಿ ನಗರದ ದೊಡ್ಡ ಕೆರೆಯ ಹತ್ತಿರದ ಹೊಲದಲ್ಲಿ ಹತ್ತಿಗೆ ಗೊಬ್ಬರ ಹಾಕುತ್ತಿರುವ ರೈತರು ಪ್ರಜಾವಾಣಿ ಚಿತ್ರ/ ರಾಜಕುಮಾರ ನಳ್ಳಿಕರ್
ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜ ರಸಗೊಬ್ಬರ ಕ್ರಿಮಿನಾಶಕ ಮಾದರಿಗಳನ್ನು ಸಂಗ್ರಹಿಸಲಾಗಿದ್ದು 3 ಬೀಜ 1 ಕ್ರಿಮಿನಾಶಕ ಕಳಪೆ ಎಂದು ಕಂಡು ಬಂದಿದೆ. ಕಾನೂನಾತ್ಮಕ ಕ್ರಮ ವಹಿಸಲಾಗಿದೆ. ಇದರಲ್ಲಿ ಯಾವುದೇ ರಾಜಿ ಇಲ್ಲ
ಕೆ.ಎಚ್.ರವಿ ಜಂಟಿ ಕೃಷಿ ನಿರ್ದೇಶಕ
ಎರಡು ಅಂಗಡಿ ಅಮಾನತು
ನಕಲಿ ಬಿತ್ತನೆ ಬೀಜ ಹಾಗೂ ದುಬಾರಿ ಬೆಲೆಗೆ ಮಾರಾಟಕ್ಕೆ ಸಂಬಂಧಿಸಿದಂತೆ ಶಹಾಪುರದ ಎರಡು ಅಂಗಡಿಗಳ ಪರವಾನಗಿಯನ್ನು ಅಮಾನತು ಮಾಡಲಾಗಿದೆ. ಶಹಾಪುರದ ರಾಕೇಶ ಪಾಟೀಲ ಅಗ್ರೋ ಕೇಂದ್ರ ಹಾಗೂ ದೇವಾನಂದ ಮಾಲೀಕತ್ವದ ಅನ್ನದಾತ ಕ್ರಾಪ್ ಕೇರ್ ಪರವಾನಗಿಯನ್ನು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಅಮಾನತು ಮಾಡಿದ್ದರು. ಇದು ನಕಲಿ ಬಿತ್ತನೆ ಬೀಜ ಹಾಗೂ ದುಬಾರಿ ಬೆಲೆಗೆ ಬೀಜ ಮಾರಾಟಕ್ಕೆ ನಿದರ್ಶನವಾಗಿದೆ. ಪರವಾನಗಿ ಪಡೆಯದೇ ಬಿತ್ತನೆ ಬೀಜ ಮಾರಾಟ ನಡೆದಿರುವ ಪ್ರಕರಣಗಳು ಕಂಡು ಬಂದಿವೆ.

3 ಬಿತ್ತನೆ ಬೀಜ 1 ಕ್ರಿಮಿನಾಶಕ ಕಳಪೆ

ಜಿಲ್ಲೆಯಲ್ಲಿ ಏಪ್ರಿಲ್‌ ಮೇ ಜೂನ್‌ ತಿಂಗಳಲ್ಲಿ ಬಿತ್ತನೆ ಬೀಜ ರಸಗೊಬ್ಬರ ಕ್ರಿಮಿನಾಶಕ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರಲ್ಲಿ 3 ಬಿತ್ತನೆ ಬೀಜ 1 ಕ್ರಿಮಿನಾಶಕ ಕಳ‍ಪೆ ಎಂದು ಸಾಬೀತು ಆಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ. ಜಿಲ್ಲೆಯಲ್ಲಿ ಮೊದಲಿಂದಲೂ ಕಳಪೆ ಬಿತ್ತನೆ ಬೀಜ ರಸಗೊಬ್ಬರ ಕ್ರಿಮಿನಾಶಕ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪಕ್ಕೆ ಇದು ಪುಷ್ಟಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT