ಗುರುವಾರ , ಏಪ್ರಿಲ್ 9, 2020
19 °C
ಬೇಸಿಗೆಯಲ್ಲಿ ಹೆಚ್ಚಿದ ಬೇಡಿಕೆ, ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸ

ಮಾರುಕಟ್ಟೆಗೆ ಲಗ್ಗೆ ಇಟ್ಟ ಮಡಕೆಗಳು

ರಾಘವೇಂದ್ರ ಯರಗೋಳ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರದಲ್ಲಿ ಈಗಾಗಲೇ 36 ಡಿಗ್ರಿ ಸೆ. ಉಷ್ಣಾಂಶ ದಾಖಲಾಗಿದ್ದು, ಮುಂದೆ  ಬಿಸಿಲಿನ ಝಳ ಹೆಚ್ಚುವ ಸಾಧ್ಯತೆ ಕಂಡುಬರುತ್ತಿದೆ. ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಹೆಚ್ಚಿದಂತೆ ಸಾರ್ವಜನಿಕರು ತಂಪಾದ ನೀರು ಕುಡಿಯಲು ಮಣ್ಣಿನ ಮಡಕೆ ಖರೀದಿಸಲು ಮುಂದಾಗುತ್ತಿದ್ದಾರೆ.

ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಮಣ್ಣಿನ ಮಡಕೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಗೋಲಾಕಾರ, ಉದ್ದನೆಯ ಹೂಜಿ ಆಕಾರದ, ನಳ ಹೊಂದಿರುವ ಮಡಕೆಗಳು ಮಾರುಕಟ್ಟೆಯಲ್ಲಿ ಕಾಣಸಿಗುತ್ತವೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಕುಂಬಾರರು ಮಡಕೆಗಳನ್ನು ಸಿದ್ಧಮಾಡಿದ್ದಾರೆ. 

ರಸ್ತೆ ಬದಿ ಸಾಲಾಗಿ ಮಾರಾಟಕ್ಕೆ ಇಟ್ಟಿರುವ ಮಡಕೆಗಳು ಗ್ರಾಹಕರನ್ನು ಸೆಳೆಯುತ್ತಿವೆ. ಇದರ ಜೊತೆಗೆ ಮಣ್ಣಿನ ಒಲೆ, ಕುಂಡಗಳು, ಗಲ್ಲೆಗಳು ಮಾರಾಟಕ್ಕೆ ಲಭ್ಯ ಇವೆ. 

ನಗರದ ಗಾಂಧಿ ವೃತ್ತ, ಸರ್ಕಾರಿ ಜಿಲ್ಲಾ ಆಸ್ಪತ್ರೆ ಸಮೀಪದಲ್ಲಿ ವಿವಿಧ ಬಗೆಯ ಮಡಕೆಗಳನ್ನು ಮಾರಾಟಕ್ಕೆ ಇಡಲಾಗಿದೆ. ಗಾತ್ರ, ವಿನ್ಯಾಸಕ್ಕೆ ತಕ್ಕಂತೆ ₹50 ರಿಂದ ₹300ರ ವರೆಗೆ ಬೆಲೆ ನಿಗದಿಪಡಿಸಲಾಗಿದೆ. ಒಂದು ದಿನಕ್ಕೆ 8 ರಿಂದ 10 ಮಡಕೆಗಳು ಮಾರಾಟವಾಗುತ್ತವೆ. ಗಿರಾಕಿಗಳು ಚೌಕಾಸಿ ಮಾಡಿ ಕೊಂಡು ಕೊಳ್ಳುವುದರಿಂದ ಒಂದು ದಿನಕ್ಕೆ ಎಲ್ಲಾ ಖರ್ಚು ಕಳೆದು ₹200 ಉಳಿದರೆ ಹೆಚ್ಚು ಎನ್ನುತ್ತಾರೆ ಮಡಕೆ ವ್ಯಾಪಾರಿಗಳು.

‘ಬೇಸಿಗೆಯಲ್ಲಿ ಮಡಕೆಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಬೆಲೆ ಹೆಚ್ಚು ಕಡಿಮೆ ಆಗುತ್ತದೆ’ ಎನ್ನುತ್ತಾರೆ ವ್ಯಾಪಾರಿ ಶಿವಕುಮಾರ ಕುಂಬಾರ.

ಇಂದಿನ ಆಧುನಿಕ ಯುಗದಲ್ಲಿಯೂ, ಬಡವರ ಫ್ರಿಜ್ ಎಂದು ಖ್ಯಾತಿ ಪಡೆದಿರುವ ಮಣ್ಣಿನ ಮಡಕೆ ತನ್ನದೇ ಆದ ವಿಶಿಷ್ಟ ಗುಣಗಳನ್ನು ಹೊಂದಿದೆ.

ಕಲ್ಲಂಗಡಿ ವ್ಯಾಪಾರ ಜೋರು:  ಬಿಸಿಲಿನ ತಾಪ ತಣಿಸಲು ಸಾರ್ವಜನಿಕರು ಕಲ್ಲಂಗಡಿ ಹಣ್ಣು ತಿನ್ನಲು ಮತ್ತು ಖರೀದಿಸಲು ಮುಗಿ ಬೀಳುತ್ತಿದ್ದಾರೆ. ನಗರದ ಕೋರ್ಟ್‌ ಎದುರಿಗೆ ಕಲ್ಲಂಗಡಿ ಹಣ್ಣಿನ ರಾಶಿ ಕೈ ಬೀಸಿ ಕರೆಯುತ್ತದೆ. 

ಕಲಬುರ್ಗಿ, ಆಳಂದ, ಜೇವರ್ಗಿ, ಶಹಾಪುರ, ನಾರಾಯಣಪೇಟ, ಗುರು ಮಠಕಲ್ ಕಡೆಯಿಂದ ಕಲ್ಲಂಗಡಿ ತರಿಸಿಕೊಳ್ಳಲಾಗುತ್ತದೆ. 

1ಕೆ.ಜಿಗೆ ₹ 20 ದರ ನಿಗದಿ ಪಡಿಸಲಾಗಿದೆ. ಒಂದು ದಿನಕ್ಕೆ 10 ರಿಂದ 15 ಕ್ವಿಂಟಲ್ ಮಾರಾಟ ಮಾಡಲಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)