ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ‘ಸಮಾಜದ ಅಂಕು ದೊಂಕು ತಿದ್ದುವ ಪತ್ರಕರ್ತರು’

ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಆಯೋಜನೆ
Last Updated 25 ಜುಲೈ 2021, 3:13 IST
ಅಕ್ಷರ ಗಾತ್ರ

ಯಾದಗಿರಿ: ‘ಪತ್ರಕರ್ತರು ಸಮಾಜದ ಅಂಕು ದೊಂಕು ತಿದ್ದುವ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ತಮ್ಮಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ವಸ್ತುನಿಷ್ಠ ವರದಿ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜ ಮತ್ತು ರಾಜಕಾರಣದಲ್ಲಿ ತಪ್ಪುಗಳನ್ನು ನಡೆಯುತ್ತವೆ. ಅವುಗಳನ್ನು ಬಯಲಿಗೆ ತರಬೇಕು. ಆ ಮೂಲಕ ಸ್ವಚ್ಛ ಸಮಾಜವನ್ನು ನಿರ್ಮಾಣ ಮಾಡಬೇಕು’ ಎಂದು ತಿಳಿಸಿದರು.

‘ಸಂಘದ ಸದಸ್ಯರು ಪತ್ರಿಕಾ ಭವನದ ಮೊದಲ ಮಹಡಿ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದು, ತಮ್ಮ ಅನುದಾನದಲ್ಲಿ ₹10 ಲಕ್ಷ ಕೊಡುವುದಾಗಿ ಭರವಸೆ ನೀಡಿದರು. ಅಲ್ಲದೆ ಜಿಲ್ಲೆಯ ಎಲ್ಲಾ ಶಾಸಕರು ತಮ್ಮ ಅನುದಾನದಲ್ಲಿ ₹5 ಲಕ್ಷ ಅನುದಾನ ಒದಗಿಸಲಿದ್ದಾರೆ. ನಿವೇಶನಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದು ತಿಳಿಸಿದರು.

ಆಶಯ ನುಡಿಗಳಾನ್ನಾಡಿದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು, ‘ಸ್ವಾತಂತ್ರ್ಯ ಪೂರ್ವದಲ್ಲಿನ ಪತ್ರಿಕೆಗಳಿಗೂ, ಸ್ವಾತಂತ್ರ್ಯ ನಂತರದ ಪತ್ರಿಕೆಗಳಿಗೂ ವ್ಯಾತ್ಯಾಸಗಳಿವೆ. ಪತ್ರಕರ್ತನು ತನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಸುದ್ದಿ ಮಾಡಬಾರದು. ಸಮಾಜ ಸುಧಾರಣೆ ಮತ್ತು ಆಡಳಿತ ಯಂತ್ರವನ್ನು ದಾರಿಗೆ ತರುವ ಸುದ್ದಿಗಳನ್ನು ಪ್ರಕಟಿಸಬೇಕು’ ಎಂದು ಹೇಳಿದರು.

ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಪುರ ಮಾತನಾಡಿ, ಎಚ್ಚರಿಕೆ ಕೊಡುವ ಮಾಧ್ಯಮ ಆಗಬೇಕು. ದೃಶ್ಯ ಮಾಧ್ಯಮಗಳು ಇದ್ದರೂ ಕೈಯಲ್ಲಿ ಪತ್ರಿಕೆ ಹಿಡಿದು ಓದಿದರೆ ಸಮಾಧಾನ ಆಗುತ್ತದೆ. ಆದರೆ, ಈಗ ಕೆಲವರು ಬ್ಲ್ಯಾಕ್ ಮೇಲ್ ಮಾಡುವ ಪತ್ರಕರ್ತರು ಹುಟ್ಟಿಕೊಂಡಿದ್ದಾರೆ. ಹೀಗಾಗಿ ತಪ್ಪು ಬರೆದರೂ ಜನರು ನಂಬುತ್ತಾರೆ. ಜನರ ಸಮಸ್ಯೆ ಎತ್ತಿಹಿಡಿಯಬೇಕು. ಆಗ ಮಾತ್ರ ಉತ್ತಮ ವರದಿಗಳನ್ನು ನಿರೀಕ್ಷಿಸಲು ಸಾಧ್ಯ’ ಎಂದರು.

ಮಾಧ್ಯಮ ತಜ್ಞ ಜಿ.ಎನ್.ಮೋಹನ್‌ ಉಪನ್ಯಾಸ ನೀಡಿದರು.

ಕೊರೊನಾ ನಿಯಂತ್ರಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ವೇದಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಮತ್ತು ಜಿ.ಪಂ ಸಿಇಒ ಶಿಲ್ಪಾ ಶರ್ಮಾ ಅವರಿಗೆ ಸೇರಿದಂತೆ ಇತರ ವಾರಿಯರ್ಸ್‌ಗಳಿಗೂ ಸನ್ಮಾನಿಸಲಾಯಿತು.

ಪತ್ರಿಕಾ ರಂಗದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಕೆಂಭಾವಿಯ ‘ಪ್ರಜಾವಾಣಿ’ ಅರೆಕಾಲಿಕ ವರದಿಗಾರ ಪವನ ಕುಲಕರ್ಣಿಗೆ ಅಯ್ಯ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಪತ್ರಕರ್ತರಿಗೂ ಸನ್ಮಾನಿಸಲಾಯಿತು. ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಸಚಿವರು ಪ್ರಶಸ್ತಿ ನೀಡಿದರು.

ಶಾಸಕರಾದ ನಾಗನಗೌಡ ಕಂದಕೂರು, ವೆಂಕಟರೆಡ್ಡಿ ಮುದ್ನಾಳ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎನ್.ಲೋಕೇಶ, ಕಾರ್ಯದರ್ಶಿ ಸಂಜೀವರಾವ ಕುಲಕರ್ಣಿ, ರಾಜ್ಯ ಪರಿಷತ್‌ ಸದಸ್ಯ ಅನಿಲ ದೇಶಪಾಂಡೆ, ಯುಡಾ ಅಧ್ಯಕ್ಷ ಬಸವರಾಜ ಚಂಡ್ರಕಿ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ ಸೇರಿದಂತೆ ಗಣ್ಯರು ಇದ್ದರು.

ಜಿಲ್ಲಾ ಘಟಕದ ಅಧ್ಯಕ್ಷ ಇಂದುಧರ ಸಿನ್ನೂರು ಅಧ್ಯಕ್ಷತೆ ವಹಿಸಿದ್ದರು. ಡಾ. ಸುಭಾಶ್ಚಂದ್ರ ಕೌಲಗಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT