ಬುಧವಾರ, ಮಾರ್ಚ್ 29, 2023
23 °C
₹10 ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ, ಕಾರ್ಯಕ್ರಮಕ್ಕೆ ₹10 ಕೋಟಿ ಅನುದಾನ

ಯಾದಗಿರಿ | ಕೋಡೆಕಲ್‌ಗೆ ಇಂದು ಪ್ರಧಾನಿ ಮೋದಿ ಆಗಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ/ಹುಣಸಗಿ: ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೋಡೆಕಲ್ಲ ಗ್ರಾಮಕ್ಕೆ ಗುರುವಾರ (ಜ.19) ಆಗಮಿಸುತ್ತಿದ್ದು, ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ಶಾಸಕ, ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾಡಳಿದ ಅಧಿಕಾರಿಗಳು ಕಾರ್ಯಕ್ರಮಕ್ಕಾಗಿ ಶ್ರಮಿಸುತ್ತಿದ್ದು, ಸಿದ್ಧತೆ ಪೂರ್ಣಗೊಂಡಿದೆ.

ಕೆಲ ದಿನಗಳಿಂದ ಕೋಡೆಕಲ್ಲ ಗ್ರಾಮದಲ್ಲಿ ಬೀಡು ಬಿಟ್ಟಿರುವ ಅಧಿಕಾರಿಗಳ ತಂಡ, ಸಿದ್ಧತೆ ಪರಿಶೀಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಸ್ಹೇಹಲ್‌ ಆರ್‌. ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ‘ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಕೊಡೇಕಲ್ಲ ಗ್ರಾಮಕ್ಕೆ ಆಗಮಿಸುತ್ತಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ₹10,813 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಡಿಯಲ್ಲಿ ಕಾಲುವೆ ಜಾಲದ ವಿಸ್ತರಣೆ ಮತ್ತು ಅತ್ಯಾಧುನಿಕ ರಿಮೋಟ್ ತಂತ್ರಜ್ಞಾನದ ಗೇಟ್‌ಗಳ ₹4,699 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿ ಉದ್ಘಾಟನೆ ಹಾಗೂ ಜಲಧಾರೆ ಯೋಜನೆ ಅಡಿಯಲ್ಲಿ ₹2,004 ಕೋಟಿ ವೆಚ್ಚದಲ್ಲಿ ಬಹು ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಶಂಕುಸ್ಥಾಪನೆ ಹಾಗೂ ಭಾರತ ಮಾಲಾ ಯೋಜನೆ ಅಡಿಯಲ್ಲಿ ಅಂದಾಜು ₹2,000 ಕೋಟಿ ವೆಚ್ಚದಲ್ಲಿ ಸೂರತ್ ಚೆನ್ನೈ ಹೆದ್ದಾರಿ ನಿರ್ಮಾಣ (ನಿಂಬಾಳನಿಂದ ಸಿಂಗನೋಡಿಗೆ) 6 ಪಥ ಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್ ವೇ ಕಾಮಗಾರಿಗೂ ಚಾಲನೆ ನೀಡಲಿದ್ದಾರೆ’ ಎಂದು ವಿವರಿಸಿದರು.

‘ಗಡಿ ವಿಭಾಗದ 3 ಪ್ಯಾಕೇಜ್ ಒಳಗೊಂಡಿದ್ದು, ಈ ಯೋಜನೆ ಇದಾಗಿದೆ ಎಂದು ತಿಳಿಸಿದ ಅವರು, ಈ ಕಾರ್ಯಕ್ರಮವು ಸರ್ಕಾರಿ ಕಾರ್ಯಕ್ರಮವಾಗಿದ್ದು, ಈಗಾಗಲೇ ಸರ್ಕಾರದಿಂದ ಕಾರ್ಯಕ್ರಮ ಆಯೋಜನೆಗಾಗಿ ಒಟ್ಟು ₹10 ಕೋಟಿ ಅನುದಾನ ಬಿಡುಗಡೆಯಾಗಿದೆ’ ಎಂದು ಹೇಳಿದರು.

‘ಕಾರ್ಯಕ್ರಮಕ್ಕೆ ಆಗಮಿಸುವ ಜಿಲ್ಲೆಯ ಸೇರಿದಂತೆ ವಿವಿಧ ಭಾಗಗಳ ಜನರು ಬೆಳಿಗ್ಗೆ 10 ಗಂಟೆ ಒಳಗಾಗಿ ಕಾರ್ಯಕ್ರಮದ ವೇದಿಕೆಯ ಸ್ಥಳದಲ್ಲಿ ಹಾಜರಿರಬೇಕು. ಒಟ್ಟು 1 ಲಕ್ಷ 20 ಸಾವಿರ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ನಾಯ್ಕ, ಹುಣಸಗಿ ತಹಶೀಲ್ದಾರ್ ಜಗದೀಶ ಚೌರ್, ಕೆಬಿಜೆಎನ್‌ಎಲ್‌ ಸಿ.ಇ. ಮಂಜುನಾಥ ಇದ್ದರು.

‘ಪ್ರತಿಯೊಬ್ಬ ರೈತನಿಗೂ ನೀರಿನ ವ್ಯವಸ್ಥೆ’

ಯಾದಗಿರಿ: ‘ಸ್ಕಾಡಾ ಯೋಜನೆಯಿಂದ ಪ್ರತಿಯೊಬ್ಬ ರೈತರ ಜಮೀನಿಗೆ ನೀರು ಹರಿಯಲಿದೆ. ಪ್ರಧಾನಿ ಮೋದಿ ಅವರು ಕಾಲುವೆ ನವೀಕರಣ ಹಾಗೂ ಸ್ಕಾಡಾ ಯೋಜನೆ ಉದ್ಘಾಟನೆ ಮಾಡಲಿದ್ದಾರೆ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಜಾರಜೋಳ ಹೇಳಿದರು.

ಕೋಡೆಕಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿಯೇ ಮೊದಲ ಪ್ರಯೋಗ ಇದಾಗಿದೆ. ಸ್ಕಾಡಾ ಯೋಜನೆಯಿಂದ ನಾರಾಯಣಪುರ ಎಡದಂಡೆ ಕಾಲುವೆ ಕೊನೆ‌ ಭಾಗದ ರೈತರಿಗೆ ನೀರು ಹರಿಯಲಿದೆ. ಕುಳಿತ ಜಾಗದಿಂದ ರಿಮೋಟ್ ಮೂಲಕ ನೀರು ಹರಿಯಲಿದೆ. ಇದರ ಪ್ರಯೋಗದಿಂದ ರಾಜ್ಯದಲ್ಲಿ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದರು.

ರಾಜ್ಯದಲ್ಲಿ 40 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿ ಮಾಡುವ ಗುರಿಯಿದೆ. ಈಗ 30 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗುತ್ತಿದೆ. ಕೆಲ ಯೋಜನೆಗಳಿಗೆ ಅಂತರರಾಜ್ಯ ಜಲ ವಿವಾದವಿದೆ ಎಂದರು.

ಸ್ಕಾಡಾ ಯೋಜನೆ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ ಬಗ್ಗೆ ಮಾಜಿ ಸಚಿವ ಎಂ.ಬಿ.ಪಾಟೀಲ ಟ್ವಿಟ್ ವಿಚಾರವಾಗಿ ಪ್ರತಿಕ್ರಿಯಿಸಿ, ಸರ್ಕಾರ ಬರುತ್ತವೆ ಹೋಗುತ್ತವೆ. ಆಡಳಿತ ವ್ಯವಸ್ಥೆ ನಿರಂತರ ಇರುತ್ತದೆ. ಎಂ.ಬಿ.ಪಾಟೀಲ ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ನೋಡಬೇಕಿದೆ. ಇದಕ್ಕೆ ಮೋದಿ ಸರ್ಕಾರ ಅನುದಾನ ನೀಡಿದೆ ಎಂದರು.

ಸಿದ್ಧತೆ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ

ಯಾದಗಿರಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜ.19 ರಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅವರು ಬುಧವಾರ ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಿ ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು.

ಅಧಿಕಾರಿಗಳಿಂದ ಕಾರ್ಯಕ್ರಮಗಳ ಸವಿವರ ಮಾಹಿತಿ ಪಡೆದ ಸಚಿವರು, ಕುರ್ಚಿಗಳ ಜೋಡಣೆ, ಪಾರ್ಕಿಂಗ್ ವ್ಯವಸ್ಥೆ, ಸೆಕ್ಯೂರಿಟಿ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದರು.

ಪ್ರಧಾನಿಯವರ ಕಾರ್ಯಕ್ರಮಕ್ಕೆ ಎಸ್‌ಪಿಜಿ ಅವರ ನಿರ್ದೇಶನದ ಅನುಸಾರ ಎಲ್ಲ ಸಿದ್ಧತೆ ಕಾರ್ಯಗಳು ಪೂರ್ಣಗೊಳ್ಳಬೇಕು. ಯಾವುದೇ ಲೋಪಗಳು ಜರುಗದ ರೀತಿಯಲ್ಲಿ ಮುಂಜಾಗೃತೆಯಿಂದ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಸಚಿವರು ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಜಿಲ್ಲಾಧಿಕಾರಿ ಸ್ನೇಹಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಮರೇಶ ನಾಯ್ಕ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು