ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರ ಸ್ನೇಹಿ ಆ್ಯಪ್ ಬಳಕೆಗೆ ಪ್ರಚಾರ ನೀಡಿ

ಎನ್‍ವಿಎಸ್‍ಪಿ, ಬಿಎಲ್‍ಒ ಆ್ಯಪ್ ಬಳಕೆ ತರಬೇತಿ ಕಾರ್ಯಾಗಾರ, ಡಿಸಿ ಸೂಚನೆ
Last Updated 7 ಸೆಪ್ಟೆಂಬರ್ 2019, 13:54 IST
ಅಕ್ಷರ ಗಾತ್ರ

ಯಾದಗಿರಿ: ‘ಚುನಾವಣಾ ಆಯೋಗ ಹೊಸದಾಗಿ ಪರಿಚಯಿಸಿರುವ ಎನ್‍ವಿಎಸ್‍ಪಿ ಪೋರ್ಟಲ್ ಹಾಗೂ ಆ್ಯಪ್ ಮತದಾರ ಸ್ನೇಹಿಯಾಗಿದ್ದು, ಪ್ರತಿಯೊಬ್ಬರೂ ತಮ್ಮ ಆ್ಯಂಡ್ರಾಯಿಡ್ ಮೊಬೈಲ್‍ನಲ್ಲಿ ಈ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು. ಹೀಗಾಗಿ ಈ ಆ್ಯಪ್ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸೂಚಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ನಡೆದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಮತದಾರರು ತಮ್ಮ ಸ್ವ-ವಿವರಗಳ ಎಂಟು ಬಗೆಯ ತಿದ್ದುಪಡಿ, ಫೋಟೋ ತಿದ್ದುಪಡಿ, ಮತದಾರರ ಸ್ಥಳಾಂತರ ಸೇರಿದಂತೆ ಇತರ ಮಾಹಿತಿಗಳನ್ನು ತಮ್ಮ ಮೊಬೈಲ್ ಮೂಲಕ ಎನ್‍ವಿಎಸ್‍ಪಿ ಆ್ಯಪ್‍ನಲ್ಲಿ ಲಾಗಿನ್ ಆಗಿ ತಿದ್ದುಪಡಿ ಮಾಡಲು ಅವಕಾಶವಿದೆ. ಆ್ಯಂಡ್ರಾಯಿಡ್ ಮೊಬೈಲ್ ಇಲ್ಲದ ಅಥವಾ ಆ್ಯಪ್ ಬಳಕೆ ಮಾಡಲು ಬಾರದ ಮತದಾರರು ಸಿಎಸ್‍ಸಿ, ಆಟಲ್‍ಜಿ ಜನಸ್ನೇಹಿ ಕೇಂದ್ರ, ಗ್ರಾಮ ಪಂಚಾಯಿತಿಗಳಿಗೆ ತೆರಳಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಸಂಬಂಧಿಸಿದ ಮಾಹಿತಿಗಳನ್ನು ಸರಿಪಡಿಸಿಕೊಳ್ಳಬಹುದು’ ಎಂದರು.

‘ಮತದಾರರ ಪಟ್ಟಿಯು ಮ್ಯಾನುವಲ್‍ನಿಂದ ಆನ್‍ಲೈನ್‍ಗೆ ವರ್ಗವಾಗುತ್ತಿರುವುದರಿಂದ ಬಿಎಲ್‍ಒಗಳು ಮ್ಯಾನುವಲ್ ಅರ್ಜಿ ಸಲ್ಲಿಸುವುದು ತಪ್ಪುತ್ತದೆ. ಇದರಿಂದ ಮತದಾರರ ಪಟ್ಟಿಯನ್ನು ಶೇಕಡ 100ರಷ್ಟು ಪಾರದರ್ಶಕವಾಗಿ ತಯಾರಿಸಲು ಅನುಕೂಲವಾಗಲಿದೆ’ ಎಂದರು.

‘ಸಾರ್ವಜನಿಕರಿಂದ ಎನ್‍ವಿಎಸ್‍ಪಿ ಆ್ಯಪ್ ಮೂಲಕ ಸಲ್ಲಿಕೆಯಾದ ಅರ್ಜಿಗಳು ನೆರವಾಗಿ ಬಿಎಲ್‍ಒ ಆ್ಯಪ್‍ಗೆ ಬಂದು ಸೇರುತ್ತವೆ. ಬಿಎಲ್‍ಒಗಳು ಚುನಾವಣಾ ಆಯೋಗ ನೀಡಿದ ಲಾಗಿನ್ ಆ್ಯಪ್‍ನಲ್ಲಿ ಮತದಾರರ ಮನೆ-ಮನೆಗೆ ತೆರಳಿ ಪಾರದರ್ಶಕವಾಗಿ ಪರಿಶೀಲನೆ ನಡೆಸಿ ದೃಢೀಕರಿಸಬೇಕು. ದೃಢೀಕರಿಸಿದ ಅರ್ಜಿಗಳು ನೇರವಾಗಿ ಇಆರ್‌ಒ ನೆಟ್‍ಗೆ ವರ್ಗವಾಗುತ್ತವೆ’ ಎಂದು ವಿವರಿಸಿದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಮಾತನಾಡಿ, ‘ಮತದಾರರ ಸಹಾಯವಾಣಿ ಮೊಬೈಲ್ ಆ್ಯಪ್, ವೋಟರ್ ಹೆಲ್ಪ್‌ಲೈನ್, ಮೊಬೈಲ್ ಆ್ಯಪ್, ಹೊಸ ಎನ್‍ವಿಎಸ್‍ಪಿ ಪೋರ್ಟಲ್ , ಮತದಾರರ ಸಹಾಯವಾಣಿ, ಸಾಮಾನ್ಯ ಸೇವಾ ಕೇಂದ್ರ, ಅಟಲ್‍ ಜಿ ಜನಸ್ನೇಹಿ ಕೇಂದ್ರ, ಮತದಾರರ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿರುವ ವೋಟರ್ ಫೆಸಿಲಿಟೇಷನ್ ಸೆಂಟರ್ ಮೂಲಕ ಮತದಾರರು ತಮ್ಮ ವಿವರಗಳನ್ನು ಕಡ್ಡಾಯವಾಗಿ ಪರಿಶೀಲಿಸಿ ಖಚಿತಪಡಿಸಿಕೊಳ್ಳಲು ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು’ ಎಂದು ಸೂಚಿಸಿದರು.

ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ ಮಾತನಾಡಿ, ‘ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯದಲ್ಲಿ ನೇಮಕವಾದ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಯಾವುದೇ ಸಮಸ್ಯೆಗಳಿದ್ದರೂ ಸಂಬಂಧಪಟ್ಟ ಮೇಲಧಿಕಾರಿಗಳಿಂದ ಮಾಹಿತಿ ಪಡೆದು ನಿಷ್ಠೆಯಿಂದ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಚುನಾವಣಾ ಶಾಖೆಯ ಖಲೀಲ್‍ಸಾಬ್, ವಿಧಾನ ಸಭಾ ಕ್ಷೇತ್ರಗಳ ಮಾಸ್ಟರ್ ಟ್ರೇನರ್‌‍ಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ನಾಡಕಚೇರಿ ಉಪ ತಹಶೀಲ್ದಾರರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.
**

2020ರ ಜನವರಿ 1ಕ್ಕೆ 18 ವರ್ಷ ಪೂರೈಸುವ ಯುವಕ-ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು. ಅರ್ಹರು ಮತದಾರ ಪಟ್ಟಿಯಿಂದ ಹೊರಗುಳಿಯಬಾರದು.
-ಎಂ.ಕೂರ್ಮಾರಾವ್,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT