ಉಚಿತ ಬಸ್‌ಪಾಸ್‌ಗೆ ಒತ್ತಾಯಿಸಿ ಪ್ರತಿಭಟನೆ

7
ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಬೇಡಿಕೆ ದಿನ ಆಚರಣೆ

ಉಚಿತ ಬಸ್‌ಪಾಸ್‌ಗೆ ಒತ್ತಾಯಿಸಿ ಪ್ರತಿಭಟನೆ

Published:
Updated:
Prajavani

ಯಾದಗಿರಿ: ‘ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಲು ಬೇಕಾದ ಅವಶ್ಯಕ ಹಣವನ್ನು ಬರುವ ಬಜೆಟ್‌ನಲ್ಲಿ ನೀಡಬೇಕು’ ಎಂದು ಆಗ್ರಹಿಸಿ ಪ್ರತಿಭಟನೆ ಕೈಗೊಳ್ಳುವ ಮೂಲಕ ಶನಿವಾರ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಒ) ವಿದ್ಯಾರ್ಥಿ ಸಂಘಟನೆ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಬೇಡಿಕೆ ದಿನ ಆಚರಿಸಿತು.

ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಕೈಗೊಂಡ ವಿದ್ಯಾರ್ಥಿಗಳು,‘ಕೆಲ ವರ್ಷಗಳಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಒದಗಿಸಬೇಕು ಎಂಬ ಬೇಡಿಕೆ ಇಟ್ಟುಕೊಂಡು ವಿದ್ಯಾರ್ಥಿಗಳು ಹೋರಾಟ ನಡೆಸಿದ್ದಾರೆ. ಈ ಹೋರಾಟಕ್ಕೆ ಮಣಿದಿದ್ದ ಹಿಂದಿನ ಕಾಂಗ್ರೆಸ್ ಸರ್ಕಾರ ಉಚಿತ ಬಸ್‌ಪಾಸ್ ಕೊಡುವುದಾಗಿ ಘೋಷಿಸಿತ್ತು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಹಿಂದಿನ ಸರ್ಕಾರ ನೀಡಿದ್ದ ಎಲ್ಲಾ ಯೋಜನೆಗಳು ಮುಂದುವರಿಸುವ ಭರವಸೆ ನೀಡಿತು. ಆದರೆ ಈವರೆಗೆ 20 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸಿಕ್ಕಿಲ್ಲ. ಸಮ್ಮಿಶ್ರ ಸರ್ಕಾರವು ಭರವಸೆ ಈಡೇರಿಸಲು ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

‘ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಉಚಿತ ಬಸ್‌ಪಾಸ್ ನೀಡಲು ಬೇಕಾದ ಹಣವನ್ನು ಬರುವ ಬಜೆಟ್‌ನಲ್ಲಿ ಮೀಸಲಿಡಬೇಕು. ಮತ್ತು ಅವಶ್ಯಕ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು. ಸೆಮಿಸ್ಟರ್ ವಿದ್ಯಾರ್ಥಿಗಳಿಗೆ 12 ತಿಂಗಳು ಬಸ್‌ಪಾಸ್ ನೀಡಲು ಕ್ರಮ ಕೈಗೊಳ್ಳಬೇಕು. ಬೇಡಿಕೆ ಈಡೇರಿಸಲು ಕೂಡಲೇ ಕ್ರಮ ಜರುಗಿಸಬೇಕು’ ಎಂದು ಅವರು ಒತ್ತಾಯಿಸಿದರು.

ಸರ್ಕಾರಿ ವಸತಿ ನಿಲಯದಲ್ಲಿ, ವಿದ್ಯಾರ್ಥಿಯೊಬ್ಬರಿಗೆ ತಿಂಗಳಿಗೆ ಕನಿಷ್ಠ ₹4,500 ಅನುದಾನ ಒದಗಿಸಬೇಕು. ಅವಶ್ಯ ಇರುವಷ್ಟು ವಸತಿ ನಿಲಯಗಳನ್ನು ಕೂಡಲೇ ಆರಂಭಿಸಬೇಕು. ಈಗಿರುವ ವಸತಿ ನಿಲಯಗಳಿಗೆ ಮೂಲ ಸೌಲಭ್ಯ ಕಲ್ಪಿಸುವುದರ ಜತೆಗೆ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ವಸತಿ ನಿಲಯಗಳಿಗೆ ಸ್ವಂತ ಕಟ್ಟಡ ಒದಗಿಸಬೇಕು. ಹೊಸದಾಗಿ ವಸತಿ ನಿಲಯಗಳಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ, ಶಾಲಾ-ಕಾಲೇಜುಗಳು ಪ್ರಾರಂಭವಾಗುವ ಸಂದರ್ಭದಲ್ಲೇ ವಸತಿ ನಿಲಯಗಳನ್ನು ಆರಂಭಿಸಬೇಕು ಎಂದು ಎಐಡಿಎಸ್ಒ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್‌. ರಾಮಲಿಂಗಪ್ಪ ಆಗ್ರಹಿಸಿದರು.

ಸಂಘಟನೆಯ ಪ್ರಮುಖರಾದ ಬಿ.ಸಿಂಧೂ, ಸುಭಾಷ್‌ಚಂದ್ರ , ಮಲ್ಲಿಕಾರ್ಜುನ, ದೇವಿಂದ್ರ, ಮಹಾದೇವ, ದತ್ತಾತ್ರೇಯ, ಸಾಬರಡ್ಡಿ, ಮೋಹನ್ ರಾಜ, ಶಿವಪ್ಪ, ಭೀಮಶಂಕರ್, ರಾಣಿ, ಗುರುಬಾಯಿ, ನಿರ್ಮಲಾ, ರಾಧಾ, ಶಿವರಂಜೀನಿ, ಕವಿತಾ, ಗಿರಿಬಾಲೆ, ಸೌಜನ್ಯ ಸೌಭಾಗ್ಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !