ಪಿಯು ಫಲಿತಾಂಶ: ಯಾದಗಿರಿ ಜಿಲ್ಲೆಗೆ 31ನೇ ಸ್ಥಾನ

ಶುಕ್ರವಾರ, ಏಪ್ರಿಲ್ 26, 2019
24 °C

ಪಿಯು ಫಲಿತಾಂಶ: ಯಾದಗಿರಿ ಜಿಲ್ಲೆಗೆ 31ನೇ ಸ್ಥಾನ

Published:
Updated:
Prajavani

ಯಾದಗಿರಿ: ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು, ಯಾದಗಿರಿ ಜಿಲ್ಲೆ 31ನೇ ಸ್ಥಾನಕ್ಕೆ ಕುಸಿದಿದೆ. ಒಟ್ಟಾರೆ ಶೇ 53.02 ಫಲಿತಾಂಶ ಪಡೆದಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಸ್ಥಾನ ಮತ್ತು ಶೇಖಡಾವಾರು ಪ್ರಮಾಣದಲ್ಲಿಯೂ ಇಳಿಕೆ ಆಗಿದೆ. 2018ರಲ್ಲಿ ಯಾದಗಿರಿ ಜಿಲ್ಲೆ 30ನೇ ಸ್ಥಾನದಲ್ಲಿತ್ತು. ಶೇ 54.04ರಷ್ಟು ಫಲಿತಾಂಶ ಬಂದಿತ್ತು.

ಈ ವರ್ಷ 8,301 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 4,401 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2018ರಲ್ಲಿ 6,141 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆ ಪೈಕಿ 3,341 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಶೇಕಡಾವಾರು ಫಲಿತಾಂಶ ಹೆಚ್ಚಾಗಿದೆ. ಕಲಾವಿಭಾಗದಲ್ಲಿ ಶೇ 50.37, ವಾಣಿಜ್ಯ ವಿಭಾಗದಲ್ಲಿ ಶೇ 56.80 ಮತ್ತು ವಿಜ್ಞಾನ ವಿಭಾಗದಲ್ಲಿ 56.28ರಷ್ಟು ಫಲಿತಾಂಶ ಬಂದಿದೆ.

2014ನೇ ಸಾಲಿನಲ್ಲಿ ಶೇ 62.57ರಷ್ಟು ಫಲಿತಾಂಶ ಬಂದಿದ್ದು ಬಿಟ್ಟರೆ ನಂತರ ವರ್ಷಗಳಲ್ಲಿ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಇದು ಪಾಲಕರನ್ನೂ ಚಿಂತೆಗೀಡು ಮಾಡಿದೆ.

ಉಪನ್ಯಾಸಕರ ಕೊರತೆ: ಜಿಲ್ಲೆಯಲ್ಲಿ 69 ಪದವಿಪೂರ್ವ ಕಾಲೇಜುಗಳಿವೆ. ಅದರಲ್ಲಿ 23 ಸರ್ಕಾರಿ, 6 ಆನುದಾನಿತ ಮತ್ತು 40 ಅನುದಾನ ರಹಿತ ಕಾಲೇಜುಗಳಿವೆ.

ಸರ್ಕಾರಿ ಕಾಲೇಜುಗಳಲ್ಲಿ ಶೇ 60ರಷ್ಟು ಉಪನ್ಯಾಸಕರ ಕೊರತೆ ಇದೆ ಇದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ ಎನ್ನುತ್ತಾರೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಿಣಿಜಿಗಿ ಗುರುಲಿಂಗಪ್ಪ.

ಕಳೆದ ಶೈಕ್ಷಣಿಕ ವರ್ಷದಲ್ಲಿ 102 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ವಿಶೇಷ ತರಗತಿ, ಪರಿಹಾರ ಬೋಧನೆ ಮಾಡಲಾಗಿತ್ತು ಎಂದರು.

ಪ್ರಾಥಮಿಕ ಹಂತದಲ್ಲಿ ಗುಣಮಟ್ಟದ ಸಿಗಬೇಕು. ಪ್ರೌಢಶಿಕ್ಷಣದಲ್ಲಿ ಕಟ್ಟುನಿಟ್ಟಾಗಿ ಪರೀಕ್ಷೆಗಳನ್ನು ನಡೆಸಬೇಕು. ನಕಲು ಮಾಡಲು ಅವಕಾಶ ಇರಬಾರದು. ಹಾಗೆ ಮಾಡಿದರೆ ಅದು ಪಿಯು ಹಂತದಲ್ಲಿ ಫಲಿತಾಂಶ ಬೀರುತ್ತದೆ. ಹೀಗಾಗಿ ಉಪನ್ಯಾಸಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಧಿಕಾರಿ ಅವರು ಗಮನ ಹರಿಸಿ ಫಲಿತಾಂಶ ವೃದ್ಧಿಗೆ ದೂರದೃಷ್ಟಿಯ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂದು ಶಿಕ್ಷಣ ತಜ್ಞ ವೇಣುಗೋಪಾಲ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !