ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ ಜಿಲ್ಲೆಯಾದ್ಯಂತ ಮುಂದುವರೆದ ಜಿಟಿಜಿಟಿ ಮಳೆ: 26 ಮನೆಗಳಿಗೆ ಹಾನಿ

Published : 21 ಜುಲೈ 2023, 13:38 IST
Last Updated : 21 ಜುಲೈ 2023, 13:38 IST
ಫಾಲೋ ಮಾಡಿ
Comments

ಯಾದಗಿರಿ: ಜಿಲ್ಲೆಯಲ್ಲಿ ಶುಕ್ರವಾರವೂ ಜಿಟಿಜಿಟಿ ಮಳೆ ಮುಂದುವರಿದಿದ್ದು, ಇದರಿಂದ 26 ಮನೆಗಳಿಗೆ ಹಾನಿಯಾಗಿದೆ.

ಕಳೆದ ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ಸೂರ್ಯನ ದರ್ಶನ ಆಗಿಲ್ಲ. ಆಗಾಗ ಮಳೆ ಸುರಿಯುತ್ತಿದೆ.

ನಗರದ ಲಕ್ಷ್ಮೀ ನಗರ ಸರ್ಕಾರಿ ಪ್ರಾಥಮಿಕ ಶಾಲೆಗೆ ಮಳೆ ನೀರು ನುಗ್ಗಿದೆ. ಶುಕ್ರವಾರ ಬೆಳಿಗ್ಗೆ ಬಿಡುವು ನೀಡಿದ್ದ ಮಳೆ ಮಧ್ಯಾಹ್ನದಿಂದ ಮತ್ತೆ ಮಳೆ ಸುರಿದಿದೆ.

ಯಾದಗಿರಿ ತಾಲ್ಲೂಕಿನಲ್ಲಿ 15 ಮನೆಗಳು, ಶಹಾಪುರ ತಾಲ್ಲೂಕಿನಲ್ಲಿ 1, ಸುರಪುರ ತಾಲ್ಲೂಕಿನಲ್ಲಿ 5, ಗುರುಮಠಕಲ್‌ ತಾಲ್ಲೂಕಿನಲ್ಲಿ 2, ವಡಗೇರಾ ತಾಲ್ಲೂಕಿನಲ್ಲಿ 3 ಸೇರಿದಂತೆ 26 ಮನೆಗಳಿಗೆ ಹಾನಿಯಾಗಿದೆ.

ಯರಗೋಳ ವರದಿ

ಯಾದಗಿರಿ ತಾಲ್ಲೂಕಿನ ಯರಗೋಳ ಸುತ್ತಲಿನ ಗ್ರಾಮಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಬಿಡದೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಗ್ರಾಮೀಣ ಜನರ ಜೀವನ ತಲ್ಲಣಗೊಂಡಿದೆ. ಗ್ರಾಮೀಣ ಪ್ರದೇಶದ ಜನರ ಬದುಕು ಅತಂತ್ರವಾಗಿದೆ.

ಕೃಷಿಕರ ಬಿತ್ತನೆ ಚಟುವಟಿಕೆಗಳು ಕುಂಠಿತಗೊಂಡಿವೆ. ಶಾಲಾ, ಕಾಲೇಜುಗಳ ಮೇಲ್ಛಾವಣಿ,

ಗೋಡೆಗಳಿಂದ ನೀರು ಜಿನುಗುತ್ತಿದ್ದು, ರಜೆ ಘೋಷಣೆ ಮಾಡಲಾಗಿದೆ.

‘ಹಲವು ಗ್ರಾಮಗಳಲ್ಲಿ ಮನೆಯ ಗೋಡೆಗಳು, ಮೇಲ್ಛಾವಣಿ ಕುಸಿದಿವೆ’ಎಂದು ಗ್ರಾಮ ಲೆಕ್ಕಿಗರಾದ ದೇವಿಕಾ, ರಾಧಿಕಾ, ರಾಘವೇಂದ್ರ, ಅಪೂರ್ವ, ಶಕುಂತಲಾ, ಬಸಣ್ಣ 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

ತುಂತುರು ಮಳೆ ಜೊತೆಗೆ ತಂಪಾದ ಗಾಳಿ ಬೀಸುತ್ತಿದ್ದು ಮಕ್ಕಳು, ವೃದ್ಧರಿಗೆ ಶೀತ, ಜ್ವರ ಕಾಣಿಸಿಕೊಳ್ಳುತ್ತಿದೆ. ಹಾಲು, ಪತ್ರಿಕೆ, ತರಕಾರಿ ಹಂಚುವ ಯುವಕರ ಪಾಡು ಹೇಳತೀರದಾಗಿದೆ. ಸಣ್ಣ, ಪುಟ್ಟ ಹಳ್ಳಗಳು ತುಂಬಿದ್ದು, ಕೆರೆಗಳಿಗೆ ನೀರು ಹರಿದು ಬರುತ್ತಿವೆ.

ಗ್ರಾಮದ ಚರಂಡಿಗಳು, ರಸ್ತೆಗಳಲ್ಲಿ ಕೆಸರು ನೀರು ಹರಿಯುತ್ತಿದೆ. ಸಾರ್ವಜನಿಕರಿಗೆ, ಬೈಕ್ ಸವಾರರಿಗೆ ದೊಡ್ಡ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸೊಳ್ಳೆಗಳು, ಕ್ರಿಮಿ ಕೀಟಗಳ ಕಾಟ ಹೆಚ್ಚಾಗಿದೆ. ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಸಾರ್ವಜನಿಕರು ಕತ್ತಲಲ್ಲಿ ದಿನ ಕಳೆಯುವಂತಾಗಿದೆ.

ಹೊನಗೇರಾ, ಖಾನಳ್ಳಿ, ಚಾಮನಹಳ್ಳಿ, ಅಲ್ಲಿಪುರ, ಕಂಚಗಾರಹಳ್ಳಿ, ವಡ್ನಳ್ಳಿ, ಬೆಳಗೇರಾ, ಬಾಚವಾರ, ಚಾಮನಹಳ್ಳಿ, ಹೆಡಗಿಮದ್ರಾ, ಠಾಣಗುಂದಿ, ಅಬ್ಬೆತುಮಕೂರು, ಬೊಮ್ಮ ಚಟ್ನಹಳ್ಳಿ, ಮುದ್ನಾಳ, ಖಾನಳ್ಳಿ, ವಡ್ಡನಹಳ್ಳಿ, ಕ್ಯಾಸಪ್ಪನಹಳ್ಳಿ, ಬಸವಂತಪುರ, ಅರಿಕೇರಾ (ಬಿ), ಹೋರುಂಚಾ, ಯಡ್ಡಳ್ಳಿ, ಸಮಣಾಪುರ, ಕೆ.ಹೊಸಳ್ಳಿ, ಬಂದಳ್ಳಿ, ಹತ್ತಿಕುಣಿ, ಕೋಟಗೇರಾ, ಮಾಟನಹಳ್ಳಿ ಗ್ರಾಮಗಳಲ್ಲಿ ತುಂತುರು ಮಳೆಯಾಗಿದೆ‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT