ರೈತರ ಮೇಲೆ ರಾಜಕಾರಣ ಸಲ್ಲದು

7
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಅಭಿಮತ

ರೈತರ ಮೇಲೆ ರಾಜಕಾರಣ ಸಲ್ಲದು

Published:
Updated:
Prajavani

ಯಾದಗಿರಿ: ‘ಸರ್ಕಾರಗಳು ರೈತರ ಹೆಸರಿನ ಮೇಲೆ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ರೈತರ ಸಮಸ್ಯೆಗಳತ್ತ ಗಮನಹರಿಸಿ ರೈತ ಸಹಕಾರಿ ಯೋಜನೆಗಳನ್ನು ರೂಪಿಸಬೇಕು’ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಸರ್ಕಾರವನ್ನು ಒತ್ತಾಯಿಸಿದರು.

ವಡಗೇರಾ ತಾಲ್ಲೂಕಿನಲ್ಲಿ ಮಂಗಳವಾರ ರಾಜ್ಯ ರೈತ ಸಂಘ ಹಸಿರು ಸೇನೆ ವಡಗೇರಾ ತಾಲ್ಲೂಕು ಘಟಕದ ವತಿಯಿಂದ ರೈತ ದಿನಾಚರಣೆ ಹಾಗೂ ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ರೈತರನ್ನು ಬಿಟ್ಟು ದೇಶ ಸ್ವಾವಲಂಬಿಯಾಗಿ ಬೆಳೆಯಲು ಸಾಧ್ಯವಿಲ್ಲ. ದೇಶಕ್ಕೆ ಅನ್ನ ನೀಡುವ ಕೃಷಿಕರ ಬದುಕು ಬರ್ಬರವಾಗಿದ್ದರೂ, ಕೇಂದ್ರ–ರಾಜ್ಯ ಸರ್ಕಾರಗಳು ಕಣ್ಮುಚ್ಚಿ ಕುಳಿತಿವೆ. ಬಜೆಟ್‌ಗಳಲ್ಲಿ ರೈತ ಪರವಾಗಿ ಘೋಷಿಸಿರುವ ಯಾವ ಯೋಜನೆಗಳನ್ನು ಸರ್ಕಾರಗಳು ಸಮರ್ಪಕವಾಗಿ ಜಾರಿಗೊಳಿಸಿಲ್ಲ. ಸಮೃದ್ಧ ಮಳೆ ಬಂದರೆ ಈ ದೇಶದ ಯಾವ ರೈತರೂ ಸರ್ಕಾರದ ಮುಂದೆ ಬಂದು ನಿಲ್ಲುವುದಿಲ್ಲ’ ಎಂದರು.

‘ಕ್ಷಿಪ್ರ ಅಭಿವೃದ್ಧಿ ಕುರಿತು ಮಾತನಾಡುವ ಈ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರ ಹಿಡಿಯುವ ಸಂದರ್ಭದಲ್ಲಿ ನೀಡಿದ್ದ ಒಂದೂ ಭರವಸೆಗಳನ್ನು ಈಡೇರಿಸಿಲ್ಲ. ರೈತ ವಿರೋಧಿ ನೀತಿಯನ್ನೇ ಮುಂದುವರಿಸಿಕೊಂಡು ಅಧಿಕಾರ ಅನುಭವಿಸಿದ್ದಾರೆ. ರೈತರನ್ನು ಕಡೆಗಣಿಸಿ ಯೋಜನೆ ರೂಪಿಸಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬೃಹತ್‌ ಹೋರಾಟವನ್ನು ರೈತ ಸಂಘ ಹಮ್ಮಿಕೊಳ್ಳಲಿದೆ’ ಎಂದು ಎಚ್ಚರಿಸಿದರು.

‘ಕೃಷ್ಣಾ ನದಿಯ ದಂಡೆಯಲ್ಲಿದ್ದರೂ, ವಡಗೇರಾದಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಲ್ಲ. ಸಮೃದ್ಧ ನೀರಿದ್ದರೂ, ಶಾಶ್ವತ ನೀರಾವರಿ ಸೌಲಭ್ಯ ಇಲ್ಲಿನ ಜನರಿಗೆ ಸಿಕ್ಕಿಲ್ಲ. ಇದಕ್ಕೆಲ್ಲಾ ಅಧಿಕಾರಿ ಮತ್ತು ಜನಪ್ರತಿನಿಧಿಗಳ ವೈಫಲ್ಯ ಕಾರಣವಾಗಿವೆ. ಅಭಿವೃದ್ಧಿ ಪರವಾಗಿರದ, ರೈತ ಪರ ನಿಲುವು ಇಲ್ಲ ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳ ವಿರುದ್ಧ ಹೋರಾಟ ಅಗತ್ಯ ಇದೆ’ ಎಂದು ರೈತರಿಗೆ ಸಲಹೆ ನೀಡಿದರು.

‘ಅನ್ನದಾತನೇ ನಿಜವಾದ ದೇವರು. ರೈತರಿಲ್ಲದೆ ಯಾರೂ ಉಳಿಯಲು ಸಾಧ್ಯವಿಲ್ಲ. ಮಠ ಮಂದಿರಗಳು ಕೂಡ ರೈತರ ಆಶ್ರಯದಿಂದಲೇ ಬೆಳೆಯುತ್ತಿವೆ. ಆದರೆ, ಇಂದು ಸರ್ಕಾರಗಳು ಮಠ–ಮಾನ್ಯಗಳಿಗೆ ಆದ್ಯತೆ ನೀಡುತ್ತಿವೆ. ಮಠಾಧೀಶರು ಸಹ ಅಧಿಕಾರಿಶಾಹಿಗಳಂತೆ ವರ್ತಿಸುತ್ತಿದ್ದಾರೆ. ಮಠಗಳು ರೈತ ಪರವಾಗಿರಬೇಕು’ ಎಂದು ಹೇಳಿದರು.

ರೈತ ಹೋರಾಟಗಾರಾದ ಪ್ರೊ.ನಂಜುಂಡಸ್ವಾಮಿ, ಕೆ.ಎಸ್. ಪಟ್ಟಣ್ಣಯ್ಯ ಅವರ ಭಾವಚಿತ್ರಗಳನ್ನು ಜೋಡೆತ್ತಿನ ಬಂಡಿಗಳಲ್ಲಿ ಇಟ್ಟುಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಸಮಾರಂಭದಲ್ಲಿ ಪ್ರಗತಿಪರ ರೈತರಾದ ಮತ್ತು ರೈತಪರ ಮಹಿಳೆಯರನ್ನು ಸನ್ಮಾನಿಸಲಾಯಿತು.

ಹಸಿರು ಸೇನೆ ಮತ್ತು ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ. ರೈತ ನಾಗರತ್ನಾ ವಿ. ಪಾಟೀಲ. ಮಹಾದೇವಿ ಬೇವಿನಾಳಮಠ. ಅಯ್ಯಣ್ಣ ಹಾಲಬಾವಿ, ಶರಣು ಮಂದಾರವಾಡ, ಚಂದ್ರಕಲಾ ಬಾಗೂರು, ಮಲ್ಲಣ್ಣ ನೀಲಹಳ್ಳಿ. ಬನ್ನಪ್ಪಗೌಡ, ಸೋಮನಗೌಡ, ಹಣಮಂತ್ರಾಯಗೌಡ, ಮಲ್ಕಣ್ಣ ಚಿಂತಿ, ಲಕ್ಷ್ಮೀಕಾಂತ ಕೊಳ್ಳೂರ, ಭೀಮರಾಯ ಯಡ್ಡಳ್ಳಿ, ಫಕೀರಹಮ್ಮದ್ ಮರಡಿ, ಮಹದೇವ ಬಸವನಗರ, ನಿಂಗಣ್ಣ ಜಡಿ, ಭೀಮಣ್ಣ ಬೂದಿನಾಳ, ಮೌನೇಶ ಹೊಸೂರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !