ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಚ್ಚುತ್ತಿವೆ ಅಕ್ಕಿ, ಎಣ್ಣೆ ಕಳವು ಪ್ರಕರಣ: ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ!

Published 5 ಡಿಸೆಂಬರ್ 2023, 6:50 IST
Last Updated 5 ಡಿಸೆಂಬರ್ 2023, 6:50 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಆರು ತಾಲ್ಲೂಕುಗಳಿದ್ದು, ಈ ಪೈಕಿ ಕೆಲ ತಾಲ್ಲೂಕುಗಳಲ್ಲಿ ಗೋದಾಮುನಿಂದಲೇ ಅಕ್ಕಿ, ಎಣ್ಣೆ ಕಳವು ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಶಹಾಪುರ, ಸುರಪುರದಲ್ಲಿ ಇಂಥ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ.

ಸರ್ಕಾರ ಬಡವರ ಹಸಿವು ನೀಗಿಸಲು ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಪಡಿತರ ಅಕ್ಕಿ ನೀಡುತ್ತಿದೆ. ಆದರೆ, ಜಿಲ್ಲೆಯ ಅಲ್ಲಲ್ಲಿ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಜಿಲ್ಲೆಯಲ್ಲಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟವಾಗುತ್ತಿದೆ ಎನ್ನುವ ಸಂಶಯವೂ ವ್ಯಕ್ತವಾಗಿದೆ‌.

ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನಿಂದ ಪಡಿತರ ಅಕ್ಕಿ ಸಂಗ್ರಹಿಸಿಕೊಂಡು ರಾಜಸ್ಥಾನ, ಗುಜರಾತ್‌ಗೆ ಸಾಗಿಸುತ್ತಿರುವ ಆರೋಪಗಳಿವೆ. ‘ಅನೇಕ ಹಳ್ಳಿಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ ಫಲಾನುಭವಿಗಳಿಂದ ಪಡಿತರ ಅಕ್ಕಿಯನ್ನು  ಗ್ರಾಮದ ಕೆಲ ದಲ್ಲಾಳಿಗಳು ರಾತ್ರಿ ಸಮಯದಲ್ಲಿ ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ. ನಂತರ ಗೋಪ್ಯವಾಗಿ ಸಂಗ್ರಹಿಸಿ ಅದನ್ನು ಪಾಲಿಷ್ ಮಾಡಿ ಬ್ರ್ಯಾಂಡ್ ಇರುವ ಚೀಲದಲ್ಲಿ ಹಾಕಿ ಬೇರೆಡೆ ಸಾಗಿಸುತ್ತಾರೆ. ಪಡಿತರ ಅಕ್ಕಿಯನ್ನು ಮಾರಾಟ ಮಾಡುವ ವ್ಯಕ್ತಿಗಳು ಸಿಕ್ಕರೆ ಅಂಥವರ ರೇಷನ್ ಕಾರ್ಡ್ ರದ್ದುಪಡಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂಬುದು ಪ್ರಜ್ಞಾವಂತ ನಾಗರಿಕರ ಆಗ್ರಹ.

‘ಪಡಿತರ ಅಕ್ಕಿ, ಅಕ್ಷರ ದಾಸೋಹದ ಧಾನ್ಯಗಳಿಗೆ ಸಂಬಂಧಿಸಿದಂತೆ ಕಳವು ಪ್ರಕರಣಗಳು ಹೆಚ್ಚಾಗಿದ್ದರೂ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಇವುಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಕಳವು ಪ್ರಕರಣಗಳಿಗೆ ಯಾರು ಹೊಣೆ?. ಉಗ್ರಾಣದ ವ್ಯವಸ್ಥಾಪಕರು ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಆಗ ಮಾತ್ರ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬಹುದು’ ಎಂದು ಬಿಜೆಪಿ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಅಭಿಪ್ರಾಯಪಡುತ್ತಾರೆ.

ಆಹಾರ ಸರಬರಾಜು ಇಲಾಖೆಯ ಉಪನಿರ್ದೇಶಕ ಶಿರಸ್ತೇದಾರ್‌ ನಿರೀಕ್ಷಕರಿಗೆ ನೋಟಿಸ್‌ ನೀಡಲಾಗಿದೆ. ಮುಂದಿನ ಕ್ರಮವನ್ನು ಆ ಇಲಾಖೆಯ ಆಯುಕ್ತರು ಕೈಗೊಳ್ಳಲಿದ್ದಾರೆ. ಅಕ್ಷರ ದಾಸೋಹ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಸಿಇಒಗೆ ಅವರಿಗೆ ಸೂಚಿಸುತ್ತೇನೆ
ಸುಶೀಲಾ ಬಿ ಜಿಲ್ಲಾಧಿಕಾರಿ
ಜಿಪಿಎಸ್‌ ವಾಹನಗಳಿಲ್ಲ
ಜಿಲ್ಲೆಯಲ್ಲಿ ಪಡಿತರ ಸಾಗಿಸುವ 56 ಲಾರಿಗಳಿದ್ದು ಒಂದೇ ಒಂದು ಲಾರಿಗೂ ಜಿಪಿಎಸ್ ಅಳವಡಿಸಿಲ್ಲ. ಜಿಪಿಎಸ್ ಅಳವಡಿಕೆ ಮಾಡಿ ವಾಹನಗಳ ಮೇಲೆ ಕಣ್ಣಿಡಬೇಕಿದ್ದ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಇದುವರೆಗೂ ಜಿಪಿಎಸ್ ಅಳವಡಿಕೆ ಮಾಡಲು ಟೆಂಡರ್ ಅನ್ನೂ ಕರೆಯದೇ ಚೆಲ್ಲಾಟವಾಡುತ್ತಿದ್ದಾರೆ. ಇದು ಇನ್ನೂ ಆಯುಕ್ತರ ಹಂತದಲ್ಲಿದೆ ಎನ್ನುವ ಮಾತುಗಳು ಅಧಿಕಾರಿಗಳ ವಲಯದಲ್ಲಿ ಕೇಳಿ ಬರುತ್ತಿವೆ. ಜಿಪಿಎಸ್ ಇಲ್ಲದ ಕಾರಣಕ್ಕೆ ಇದೇ ವರ್ಷ ಮೇ ತಿಂಗಳಲ್ಲಿ ಶಹಾಪುರ ನಗರದಿಂದ ಲಾರಿ ಸಮೇತ ಪಡಿತರ ಕಳ್ಳವು ಆಗಿತ್ತು. ಬಳಿಕ ಲಾರಿಯಲ್ಲಿದ್ದ ಪಡಿತರ ಕದ್ದೊಯ್ದು ಕೇವಲ ಖಾಲಿ ಲಾರಿ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದರು. ಪಡಿತರ ಸಾಗಣೆ ಮಾಡುತ್ತಿದ್ದ ಲಾರಿಗೆ ಜಿಪಿಎಸ್ ಇಲ್ಲದಿರುವುದೇ ಇದಕ್ಕೆ ಕಾರಣ ಎನ್ನುವುದು ಜಗಜ್ಜಾಹೀರಾಗಿತ್ತು. ಬಳಿಕ ಪಡಿತರ ಸಾಗಣೆಯ ಟೆಂಡರ್‌ ಪಡೆದಿದ್ದವರಿಂದಲೇ  ಕಳುವಾದಷ್ಟು ಅಕ್ಕಿಯನ್ನು ವಸೂಲಿ ಮಾಡಲಾಗಿತ್ತು. ‘ಆಹಾರ ಧಾನ್ಯ ಸಂಗ್ರಹಿಸುವ ಗೋದಾಮಿನಿಂದ ಸಗಟು ಚಿಲ್ಲರೆ ಸಾಗಾಟ ಮಾಡುವ ಸಾಗಾಟಗಾರರು ಪಡಿತರ ತೆಗೆದುಕೊಂಡು ಹೋಗುತ್ತಾರೆ. ಈ ರೀತಿ ಪಡಿತರ ಆಹಾರ ಧಾನ್ಯ ಸಾಗಣೆಗೆ ಉಪಯೋಗಿಸುವ ವಾಹನಗಳಿಗೆ ಕಡ್ಡಾಯವಾಗಿ ವಿರೂಪಗೊಳಿಸಲು ಸಾಧ್ಯವಾದಂಥ ಜಿಪಿಎಸ್‌ ಸಾಧನವನ್ನು ಇಲಾಖೆಯಿಂದಲೇ ಅಳವಡಿಸಬೇಕು. ಆದರೆ ಇರುವರೆಗೂ ಇಲಾಖೆ ಜಿಪಿಎಸ್ ಅಳವಡಿಕೆ ಮಾಡುವ ಗೋಜಿಗೆ ಹೋಗಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಗಿರಿಯಪ್ಪ ಆರೋಪಿಸುತ್ತಾರೆ.
ಅಕ್ಷರ ದಾಸೋಹ ಧಾನ್ಯವೂ ಕಳವು
ಇತ್ತೀಚೆಗೆ ಅಕ್ಷರ ದಾಸೋಹ ಧಾನ್ಯಗಳ ಕಳವು ಪ್ರಕರಣಗಳು ಈಚೆಗೆ ಹೆಚ್ಚಾಗಿವೆ. ಪೊಲೀಸ್ ಕೇಸ್ ದಾಖಲಿಸಿದ್ದೇವೆ. ಸೂಕ್ತ ಕ್ರಮ ಕೈಗೊಂಡಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಇಲ್ಲಿಯವರೆಗೆ ಯಾರ ವಿರುದ್ಧವೂ ಗಂಭೀರ ಕ್ರಮವಾಗಿಲ್ಲ! ‘ಶಹಾಪುರ ತಾಲ್ಲೂಕಿನ ನಿಗಮದ ಉಗ್ರಾಣದಿಂದಲೇ ಅಕ್ಕಿ ತುಂಬಿದ ಲಾರಿಯ ಕಳ್ಳತನವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿದೆ ಹೊರತು ಯಾವ ಕ್ರಮ ಆಗಿದೆ ಎಂದು ಗೊತ್ತಾಗಿಲ್ಲ. ಸುರಪುರದಲ್ಲಿ 3 ಸಾವಿರ ಕ್ವಿಂಟಲ್ ಪಡಿತರ ಅಕ್ಕಿ ಕಳ್ಳತನವಾಗಿದೆ ಎಂದು ಸುದ್ದಿಯಾಗಿತ್ತು. ಜೊತೆಗೆ ಅಕ್ಷರ ದಾಸೋಹಕ್ಕೆ ಸಂಬಂಧಿಸಿದಂತೆ 38 ಕ್ವಿಂಟಲ್ ಅಕ್ಕಿ ಕೂಡ ಕಳ್ಳತನವಾಗಿತ್ತು. ಆದರೆ ಯಾವ ಕ್ರಮವೂ ಆಗಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಕಳವು ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ’ ಎಂಬುದು ಸಾಮಾಜಿಕ ಕಾರ್ಯಕರ್ತ ಯಲ್ಲಯ್ಯ ನಾಯಕ ವನದುರ್ಗ ಆರೋಪ.
ಅಧಿಕಾರಿಯಿಂದಲೇ ಕಳವು ಮಾಹಿತಿ
‘ಬಿಸಿಯೂಟ ಯೋಜನೆಯ ಆಹಾರ ಧಾನ್ಯ ಅಡುಗೆ ಎಣ್ಣೆ ಶಾಲೆಗಳಿಗೆ ಸರಬರಾಜು ಮಾಡಿದ ನಂತರ ಉಳಿಕೆಯಾಗಬೇಕಾಗಿದ್ದ ಸುಮಾರು 128 ಲೀಟರ್‌ಗಿಂತ ಹೆಚ್ಚಿನ ಅಡುಗೆ ಎಣ್ಣೆ ಗೋದಾಮಿನಲ್ಲಿ ಕೊರತೆ ಉಂಟಾಗಿದೆ’ ಎಂದು ಈಚೆಗೆ ಅಧಿಕಾರಿಯೊಬ್ಬರು ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ‘ಸುರಪುರ ತಾಲ್ಲೂಕಿನ ಏಳು ಮಾರ್ಗಗಳಿಗೆ ಆಹಾರ ಧಾನ್ಯ ಅಡುಗೆ ಎಣ್ಣೆ ಸರಬರಾಜು ಮಾಡಿದ್ದು ಆದರೆ 128 ಲೀಟರ್ ಅಡುಗೆ ಎಣ್ಣೆ ಗೋದಾಮಿನಲ್ಲಿ ಉಳಿಯಬೇಕಿತ್ತು. ಆದರೆ ಇದನ್ನು ಪರಿಶೀಲಿಸಿದಾಗ ಕೊರತೆಯಾಗಿರುವುದು ಕಂಡು ಬಂದಿದೆ’ ಎಂದು  ಮೇಲಧಿಕಾರಿಗಳಿಗೆ ಬರೆದ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ. ಗೋದಾಮಿನಲ್ಲಿ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುದಕ್ಕೆ ಇದು ತಾಜಾ ಉದಾಹರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT